ಕೊಲಂಬೊ: ‘ದಿತ್ವಾ’ ಚಂಡಮಾರುತವು ಶುಕ್ರವಾರ ಶ್ರೀಲಂಕಾದಾದ್ಯಂತ ಉತ್ತರಕ್ಕೆ ಸಾಗಿದ್ದು, ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಚಂಡುಮಾರುತದಿಂದ ಈವರೆಗೆ 56 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಮುಂದಿನ 12 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಮತ್ತಷ್ಟು ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಶ್ರೀಲಂಕಾದ ಪೂರ್ವ ಮತ್ತು ಮಧ್ಯದ ಪ್ರದೇಶಗಳಲ್ಲಿ 300 ಮಿ.ಮೀ. (12 ಇಂಚು) ಗಿಂತಲೂ ಹೆಚ್ಚು ಮಳೆಯಾಗಿದ್ದು, ಭೂಕುಸಿತದಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಹಾ ಬೆಳೆಯುವ ಕೇಂದ್ರ ಜಿಲ್ಲೆಯಾದ ಬದುಲ್ಲಾದಲ್ಲಿ ರಾತ್ರಿಯಿಡೀ ಸಂಭವಿಸಿದ ಭೂಕುಸಿತದಿಂದ ಮನೆಗಳಲ್ಲಿದ್ದ 21 ಜನರು ಸಾವಿಗೀಡಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ. ದೇಶಾದ್ಯಂತ ಸುಮಾರು 44,000 ಜನರು ತೊಂದರೆಗೊಳಗಾಗಿದ್ದು, ಅನೇಕರು ಶಾಲೆಗಳು ಮತ್ತು ಸಾರ್ವಜನಿಕ ಆಶ್ರಯ ತಾಣಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (DMC) ತಿಳಿಸಿದೆ.
ದಕ್ಷಿಣ ಮತ್ತು ಪೂರ್ವ ಶ್ರೀಲಂಕಾದಾದ್ಯಂತ, ರಾಜಧಾನಿ ಕೊಲಂಬೊದ ಹಲವು ಭಾಗಗಳು ಸೇರಿದಂತೆ, ಈಗಾಗಲೇ ಹಲವು ಪ್ರದೇಶಗಳಲ್ಲಿ ಪ್ರವಾಹವುಂಟಾಗಿದ್ದು, ಅದು ಇನ್ನಷ್ಟು ವ್ಯಾಪಿಸುವ ನಿರೀಕ್ಷೆಯಿದೆ ಎಂದು ನೀರಾವರಿ ಇಲಾಖೆ ಹೇಳಿದೆ.
ರಕ್ಷಣಾ ಕಾರ್ಯಾಚರಣೆ…
ಪರಿಸ್ಥಿತಿಯ ಕಾರಣಕ್ಕೆ ಕೊಲಂಬೊದ ಸ್ಟಾಕ್ ಎಕ್ಸ್ಚೇಂಜ್ (Colombo Stock Exchange) ನಲ್ಲಿ ಬೇಗನೇ ವಹಿವಾಟು ಸ್ಥಗಿತಗೊಳಿಸಲಾಯಿತು. ಮತ್ತು ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ರೈಲು ಸೇವೆಗಳನ್ನು ಸಹ ಅಮಾನತುಗೊಳಿಸಲಾಗಿದೆ.
ಸೇನಾಪಡೆಗಳು ಮತ್ತು ಪೊಲೀಸರು ಸಮನ್ವಯದಿಂದ ಸ್ಥಳಾಂತರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಕೊಲಂಬೊದಿಂದ 220 ಕಿ.ಮೀ. ಈಶಾನ್ಯದಲ್ಲಿರುವ ಪೊಲೊನ್ನರುವಾದ ಸೇತುವೆಯ ಮೇಲೆ ಸಿಲುಕಿದ್ದ 13 ಜನರನ್ನು ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಸೀಲಿಂಗ್‌ಗಳ ಮೇಲೆ ಸಿಲುಕಿದ್ದ ಅನೇಕ ಕುಟುಂಬಗಳು ಮತ್ತು ತೆಂಗಿನ ಮರದ ಮೇಲೆ ಸಿಕ್ಕಿಬಿದ್ದಿದ್ದ ಒಬ್ಬ ವ್ಯಕ್ತಿಯನ್ನು ಸಹ ವಾಯುಪಡೆಯು ರಕ್ಷಿಸಿದೆ.
https://x.com/i/status/1994330849991401932
ವಿಮಾನಗಳ ಮಾರ್ಗ ಬದಲಾವಣೆ ಮತ್ತು ಭಾರತದಿಂದ ನೆರವು
ಭಾರೀ ಮಳೆಯಿಂದಾಗಿ ಕೊಲಂಬೊದ ಬಂದರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BIA) ಕಾರ್ಯಾಚರಣೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ 15 ವಿಮಾನಗಳನ್ನು ಕೇರಳದ ತಿರುವನಂತಪುರಂ ಮತ್ತು ಕೊಚ್ಚಿನ್ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ ಎಂದು ಶ್ರೀಲಂಕಾ ವಿಮಾನ ನಿಲ್ದಾಣ ಮತ್ತು ವಾಯುಯಾನ ಸೇವೆಗಳು ತಿಳಿಸಿವೆ.
ಭಾರತವು ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು 6.5 ಮೆಟ್ರಿಕ್ ಟನ್ ಆಹಾರ ನೆರವನ್ನು ತಲುಪಿಸಿದೆ ಎಂದು ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ತಿಳಿಸಿದೆ.
ಜನವಸತಿ ಪ್ರದೇಶಗಳಲ್ಲಿ ಎಚ್ಚರಿಕೆ
ಕೊಲಂಬೊದ ಹೊರವಲಯ ಸೇರಿದಂತೆ ಅನೇಕ ಪಟ್ಟಣಗಳಲ್ಲಿ ಪ್ರವಾಹದ ನೀರು ಏರುತ್ತಿರುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ ನಂತರ, 20,000 ಕ್ಕೂ ಹೆಚ್ಚು ಪೊಲೀಸ್ ಮತ್ತು ಸೇನಾ ಸಿಬ್ಬಂದಿ ಸ್ಥಳಾಂತರ ಪ್ರಕ್ರಿಯೆಗಳನ್ನು ತೀವ್ರಗೊಳಿಸಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಮುಂದಿನ 48 ಗಂಟೆಗಳ ಕಾಲ ಕೊಲಂಬೊ ಸೇರಿದಂತೆ ಕೆಲಾನಿ ನದಿ ಕಣಿವೆಯ ತಗ್ಗು ಪ್ರದೇಶಗಳಿಗೆ ರೆಡ್ ಅಲರ್ಟ್ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಶ್ರೀಲಂಕಾದ ಮಧ್ಯ ಮತ್ತು ಉತ್ತರ ಪ್ರದೇಶಗಳಲ್ಲಿ 200 ಮಿಮೀ (7.8 ಇಂಚು) ಗಿಂತ ಹೆಚ್ಚು ಹೆಚ್ಚುವರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
https://x.com/i/status/1994358712346034616
ಪ್ರಬಲ ಗಾಳಿಯು ಪ್ರವಾಹವನ್ನು ಇನ್ನಷ್ಟು ಹದಗೆಡಿಸುತ್ತಿದೆ. ನಾವು ಪಕ್ಕದ ಎರಡು ಮನೆಗಳಿಂದ ಪೀಠೋಪಕರಣಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದೇವೆ, ಮತ್ತು ಈಗ ನಾನು ನನ್ನ ಕುಟುಂಬದೊಂದಿಗೆ ಆಶ್ರಯ ತಾಣಕ್ಕೆ ಹೋಗುತ್ತಿದ್ದೇನೆ,” ಎಂದು ಕೊಲಂಬೊದ ವೆಲ್ಲಂಪಿಟಿಯಾ ಉಪನಗರದ 70 ವರ್ಷದ ನಿವಾಸಿ ಮೊಹಮ್ಮದ್ ರೂಮಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಎಚ್ಚರಿಕೆ
ʼದಿತ್ವಾ’ ಚಂಡಮಾರುತವು ಶ್ರೀಲಂಕಾದ ಮೂಲಕ ದಕ್ಷಿಣ ಭಾರತದ ಕಡೆಗೆ ಚಲಿಸುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಭಾರತೀಯ ಹವಾಮಾನ ಇಲಾಖೆ (IMD)ಯ ಪ್ರಾದೇಶಿಕ ಹವಾಮಾನ ಕೇಂದ್ರವು ಶುಕ್ರವಾರ ತಮಿಳುನಾಡಿನ ಹಲವಾರು ಜಿಲ್ಲೆಗಳಿಗೆ ಮೂರು ಗಂಟೆಗಳ ಹಳದಿ ಎಚ್ಚರಿಕೆಯನ್ನು ನೀಡಿದೆ. ಈಗ ಚಂಡಮಾರುತವು ಕರಾವಳಿ ಶ್ರೀಲಂಕಾ ಮತ್ತು ಪಕ್ಕದ ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಇದೆ. ಇದು ಕಳೆದ ಆರು ಗಂಟೆಗಳಿಂದ ಗಂಟೆಗೆ 10 ಕಿ.ಮೀ ವೇಗದಲ್ಲಿ ಉತ್ತರ-ವಾಯವ್ಯಕ್ಕೆ ಚಲಿಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ