ಅಂಕಾರಾ (ಟರ್ಕಿ): ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದ್ದು, ಪರಸ್ಪರ ದಾಳಿಗಳ ಬಳಿಕ ಇರಾನ್ ಜೊತೆಗಿನ ಮಧ್ಯಂತರ ಕದನ ವಿರಾಮ (Ceasefire) ‘ಅಂತ್ಯಗೊಂಡಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಜುಲೈ 8) ಘೋಷಿಸಿದ್ದಾರೆ. ಇರಾನ್ನ ನಾಯಕತ್ವವನ್ನು “ಅನಾರೋಗ್ಯಪೀಡಿತರು” ಎಂದು ಟೀಕಿಸಿದ ಅವರು, “ಅವರ ಜೊತೆ ಮಾತುಕತೆ ನಡೆಸುವುದೇ ಸಮಯ ವ್ಯರ್ಥ” ಎಂದು ಕಿಡಿಕಾರಿದ್ದಾರೆ. ಆದರೆ, ಮಾತುಕತೆಗಳು ಮುಂದುವರಿಯಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಇರಾನ್ ಜೊತೆಗಿನ ಮಧ್ಯಂತರ ಒಪ್ಪಂದ “ಮುಗಿದಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ ಬೆನ್ನಲ್ಲೇ ತೈಲ ಬೆಲೆಗಳು ಸುಮಾರು 6% ರಷ್ಟು ಏರಿಕೆಯಾಗಿವೆ. ಹಾಗೂ ಜಾಗತಿಕವಾಗಿ ಶೇರು ಮಾರುಕಟ್ಟೆಗಳಲ್ಲಿ ಶೇರುಗಳು ಇಳಕೆ ಕಂಡಿವೆ.
ಇರಾನ್ ಜೊತೆಗೆ ಇರುವ ಕದನ ವಿರಾಮದ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ನನ್ನ ದೃಷ್ಟಿಯಲ್ಲಿ ಅದು ಮುಗಿದಿದೆ. ಇನ್ನು ಮುಂದೆ ಅವರ ಜೊತೆ ವ್ಯವಹರಿಸಲು ನನಗೆ ಆಸಕ್ತಿಯಿಲ್ಲ. ಅವರನ್ನು ಅನಾರೋಗ್ಯಪೀಡಿತ ನಾಯಕರು ಮುನ್ನಡೆಸುತ್ತಿದ್ದಾರೆ. ನಮ್ಮ ಮಾತುಕತೆ ನಡೆಸುತ್ತಿರುವ ತಂಡದ ಜೊತೆ ನಾನು ಮಾತನಾಡುತ್ತೇನೆ. ಅವರು ಮಾತುಕತೆ ನಡೆಸಲು ಬಯಸುತ್ತಾರೆ. ಅವರು ಒಳ್ಳೆಯವರು. ಆದರೆ, ಅಂತಿಮವಾಗಿ ಅವರು ನನ್ನ ಬಳಿಗೆ ಬರಬೇಕು. ನನ್ನ ದೃಷ್ಟಿಯಲ್ಲಿ ಅವರ ಜೊತೆ ವ್ಯವಹರಿಸುವುದೇ ಸಮಯ ವ್ಯರ್ಥ” ಎಂದು ಹೇಳಿದ್ದಾರೆ.
ಅಂಕಾರಾದಲ್ಲಿ ಟ್ರಂಪ್ ಹೇಳಿಕೆ
ಟರ್ಕಿಯ ಅಂಕಾರಾದಲ್ಲಿ ನಡೆದ ಎರಡು ದಿನಗಳ ನ್ಯಾಟೋ (NATO) ಶೃಂಗಸಭೆಯ ವೇಳೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಸಾಗಣೆ ಹಡಗುಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ತಾನು ಇರಾನ್ ಮೇಲೆ ದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರ ಹಡಗುಗಳ ಮೇಲಿನ ದಾಳಿಗಳು ಜಾಗತಿಕ ಆರ್ಥಿಕತೆಗೆ ಅತ್ಯಂತ ಮಹತ್ವದ ಇಂಧನ ಸಾಗಣೆಯನ್ನು ಪುನರಾರಂಭಿಸುವ ಪ್ರಯತ್ನಗಳಿಗೆ ದೊಡ್ಡ ಬೆದರಿಕೆಯಾಗಿವೆ ಎಂದು ಅಮೆರಿಕ ಹೇಳಿದೆ.
ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಟ್ರಂಪ್, “ಅವರು ಸುಳ್ಳುಗಾರರು, ವಂಚಕರು, ಅನಾರೋಗ್ಯಪೀಡಿತರು. ತಮ್ಮದೇ ಜನರಿಗೆ ಅವರು ಅನ್ಯಾಯ ಮಾಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ 54 ಸಾವಿರ ಜನರನ್ನು ಅವರು ಕೊಂದಿದ್ದಾರೆ. ಜನರು ಏಕೆ ಸರ್ಕಾರವನ್ನು ಉರುಳಿಸಲಿಲ್ಲ ಎಂದು ಕೇಳುತ್ತಾರೆ. ಆದರೆ ಅವರು ಬದುಕಿಲ್ಲ, ಸತ್ತಿದ್ದಾರೆ” ಎಂದು ಆರೋಪಿಸಿದರು.
“ಕಳೆದ ರಾತ್ರಿ ನಾವು ಇರಾನ್ನ ಅತ್ಯಂತ ಅಪಾಯಕಾರಿ ಟಾರ್ಗೆಟ್ಗಳ ಮೇಲೆ ಭಾರೀ ದಾಳಿ ನಡೆಸಿದ್ದೇವೆ. ಅವರಲ್ಲಿ ಏನೋ ಸಮಸ್ಯೆಯಿದೆ. ನಾವು ‘ನಿಮ್ಮ ಅಂತ್ಯಕ್ರಿಯೆಗಳನ್ನು ನಡೆಸಿಕೊಳ್ಳಿ’ ಎಂದು ಹೇಳಿದರೂ, ಅದರ ಬದಲಿಗೆ ಅವರು ಮಂಗಳವಾರ (ಜುಲೈ 7) ಹಡಗುಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದರು. ಅದಕ್ಕೆ ಪ್ರತಿಯಾಗಿ ನಾವು ಅವರನ್ನು ತೀವ್ರವಾಗಿ ಹೊಡೆದಿದ್ದೇವೆ” ಎಂದು ಟ್ರಂಪ್ ಹೇಳಿದರು.
ಇರಾನ್ ಮೇಲೆ ಅಮೆರಿಕ ಭಾರೀ ದಾಳಿ
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಾಹಿತಿ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಮೂರು ವ್ಯಾಪಾರ ಹಡಗುಗಳ ಮೇಲೆ ದಾಳಿ ನಡೆದ ನಂತರ ಬುಧವಾರ ಮುಂಜಾನೆ ಅಮೆರಿಕ ಸೇನೆ ಇರಾನ್ ವಿರುದ್ಧ ಸರಣಿ ದಾಳಿಗಳನ್ನು ನಡೆಸಿದೆ.
ಈ ದಾಳಿಗಳಲ್ಲಿ ಇರಾನ್ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು ಹಾಗೂ ಇರಾನ್ನ ಅರೆಸೇನಾ ಪಡೆಯಾದ ರೆವಲ್ಯೂಷನರಿ ಗಾರ್ಡ್ (Revolutionary Guard) ಬಳಸುತ್ತಿದ್ದ 60ಕ್ಕೂ ಹೆಚ್ಚು ಸಣ್ಣ ದೋಣಿಗಳನ್ನು ಗುರಿಯಾಗಿಸಿ ನಾಶಪಡಿಸಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಬಂದರ್ ಮಹ್ಷಹರ್ (Bandar Mahshahr) ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿದ್ದು, ರೆವಲ್ಯೂಷನರಿ ಗಾರ್ಡ್ನ ಒಬ್ಬ ಸದಸ್ಯ ಮೃತಪಟ್ಟಿದ್ದಾನೆ. ಜೊತೆಗೆ, ಇರಾನ್ನ ಅಣು ವಿದ್ಯುತ್ ಸ್ಥಾವರ ಇರುವ ಬುಶೆಹರ್ (Bushehr) ಮೇಲೂ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಬಹ್ರೇನ್ ಮತ್ತು ಕುವೈತ್ ಮೇಲೆ ಇರಾನ್ ಪ್ರತಿದಾಳಿ
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಬಹ್ರೇನ್ ಮತ್ತು ಕುವೈತ್ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ (5th Fleet) ನೆಲೆಸಿರುವ ಬಹ್ರೇನ್ ಹಾಗೂ ಅಮೆರಿಕ ಸೇನಾ ತಾಣಗಳಿರುವ ಕುವೈತ್ನಲ್ಲಿ ಬುಧವಾರ ಬೆಳಿಗ್ಗೆ ಕ್ಷಿಪಣಿ ದಾಳಿ ಎಚ್ಚರಿಕೆ ಘೋಷಿಸಲಾಗಿತ್ತು.
“ಮಕ್ಕಳ ಹಂತಕ ಹಾಗೂ ಭಯೋತ್ಪಾದಕ ಅಮೆರಿಕ ಸೇನೆ ಕದನ ವಿರಾಮವನ್ನು ಬಹಿರಂಗವಾಗಿ ಉಲ್ಲಂಘಿಸಿದೆ. ಒಪ್ಪಂದವನ್ನು ಮೀರಿ ಹಾರ್ಮೊಜ್ಗಾನ್ (Hormozgan) ಮತ್ತು ಮಹ್ಷಹರ್ ಪ್ರಾಂತ್ಯಗಳ ಕರಾವಳಿ ಸೇನಾ ನೆಲೆಗಳು ಹಾಗೂ ನಾಗರಿಕ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ” ಎಂದು ಪ್ರಕಟಣೆಯಲ್ಲಿ ಆರೋಪಿಸಿದೆ.
ಆದರೆ, ಹಾರ್ಮುಜ್ ಜಲಸಂಧಿಯ ವ್ಯಾಪಾರ ಹಡಗುಗಳ ಮೇಲಿನ ದಾಳಿಗಳ ಬಗ್ಗೆ ಇರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಚ್ಚಾತೈಲ ಬೆಲೆ ಏರಿಕೆ
ಇರಾನ್ ಜೊತೆಗಿನ ಮಧ್ಯಂತರ ಒಪ್ಪಂದ “ಮುಗಿದಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ ಬೆನ್ನಲ್ಲೇ ತೈಲ ಬೆಲೆಗಳು ಸುಮಾರು 6% ರಷ್ಟು ಏರಿಕೆಯಾಗಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲಿನ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 5.6% ರಷ್ಟು ಏರಿಕೆಯಾಗಿ $78 ಕ್ಕಿಂತ ಹೆಚ್ಚಾಗಿದೆ. ಅಮೆರಿಕದ ಮಾನದಂಡದ ಕಚ್ಚಾ ತೈಲವು ಬ್ಯಾರೆಲ್ಗೆ 5.8% ರಷ್ಟು ಏರಿಕೆಯಾಗಿ $74.55 ಕ್ಕೆ ತಲುಪಿದೆ.
ಇತ್ತೀಚೆಗೆ ಬ್ಯಾರೆಲ್ಗೆ $100 ಕ್ಕಿಂತ ಹೆಚ್ಚಿನ ಏರಿಕೆಯಾಗಿದ್ದ ಕಚ್ಚಾ ತೈಲ ಬೆಲೆಗಳು ಇರಾನ್-ಅಮೆರಿಕದ ನಡುವಿನ ಮಧ್ಯಂತರ ಕದನ ವಿರಾಮದ ಒಪ್ಪಂದದ ನಂತರ ಫೆಬ್ರವರಿ ಅಂತ್ಯದಲ್ಲಿ ಇರಾನ್ ಜೊತೆಗೆ ಯುದ್ಧ ಪ್ರಾರಂಭವಾಗುವ ಮೊದಲು ಇದ್ದ ಮಟ್ಟಕ್ಕೆ ಇಳಿದಿತ್ತು.
ಖಮೇನಿಯ ಅಂತ್ಯಕ್ರಿಯೆ ನಡುವೆಯೇ ಮತ್ತಷ್ಟು ಉದ್ವಿಗ್ನತೆ
ಈ ಎಲ್ಲ ಬೆಳವಣಿಗೆಗಳು ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹಲವು ದಿನಗಳ ಅಂತ್ಯಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಸಂಭವಿಸಿವೆ.
ಯುದ್ಧ ಆರಂಭವಾದ ಮೊದಲ ಕ್ಷಣಗಳಲ್ಲೇ ಫೆಬ್ರವರಿ 28ರಂದು ಖಮೇನಿ ಮೃತಪಟ್ಟಿದ್ದರು. ಗುರುವಾರ ಅಂತ್ಯಗೊಳ್ಳಲಿರುವ ಅಂತ್ಯಕ್ರಿಯೆಯ ಅವಧಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಹಲವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡುವಂತೆ ಘೋಷಣೆಗಳನ್ನು ಕೂಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ