ಒಟ್ಟಿಗೆ ಮೂರು ಹಿಮ ಚಿರತೆಗಳ ಅಪರೂಪದ ದರ್ಶನ ; ಬೆರಗುಗೊಳಿಸುವ ದೃಶ್ಯದ ವೀಡಿಯೊ ವೈರಲ್‌

ನವದೆಹಲಿ: ಹಿಮಾಲಯದ  ಸೌಂದರ್ಯದ ನಡುವೆ, ಅತ್ಯಂತ ಅಪರೂಪದ ‘ಹಿಮ ಚಿರತೆ’ಗಳ (Snow Leopards) ಕುಟುಂಬವೊಂದು ಒಟ್ಟಾಗಿ ಸಾಗುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಸಾಮಾನ್ಯವಾಗಿ ಏಕಾಂಗಿಯಾಗಿ ಜೀವಿಸುವ, ಮನುಷ್ಯರ ಕಣ್ಣಿಗೆ ಅಷ್ಟು ಸುಲಭವಾಗಿ ಬೀಳದ ಈ ಪ್ರಾಣಿಗಳನ್ನು ಒಂದೇ ಚೌಕಟ್ಟಿನಲ್ಲಿ ನೋಡುವುದೇ ಅಪರೂಪ. ʼಪರ್ವತಗಳ ಭೂತʼ ಎಂದೂ ಕರೆಯಲ್ಪಡುವ ಹಿಮ ಚಿರತೆಗಳು ಹಿಮಭರಿತ ಮತ್ತು ಕಲ್ಲಿನ ಭೂಪ್ರದೇಶಗಳಲ್ಲಿ ಸಂಪೂರ್ಣವಾಗಿ ಅಡಗಿಕೊಳ್ಳುವ ಜೀವಿಗಳಾಗಿದ್ದು, ಅವುಗಳನ್ನು ಗುರುತಿಸುವುದು ಕಷ್ಟವಾಗುತ್ತದೆ.

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ತನ್ನ ‘ಪ್ರಾಜೆಕ್ಟ್ ಹಿಮಾಂಕ್’ ಕಾರ್ಯಾಚರಣೆಯ ವೇಳೆ ಈ ಅಪರೂಪದ ದೃಶ್ಯವನ್ನು ಸೆರೆಹಿಡಿದು ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ. ಹಿಮದ ಹೊದಿಕೆಯ ಮೇಲೆ ಮೂರು ಹಿಮ ಚಿರತೆಗಳು ಸಾಲಾಗಿ ನಡೆದು ಹೋಗುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಹಿಮ ಮತ್ತು ಬಂಡೆಗಳ ನಡುವೆ ಸುಲಭವಾಗಿ ಮರೆಮಾಚಿಕೊಳ್ಳುವ ಸಾಮರ್ಥ್ಯ ಹೊಂದಿರುವ ಈ ಚಿರತೆಗಳನ್ನು ಗುರುತಿಸುವುದು ಅತ್ಯಂತ ಕಠಿಣ ಸವಾಲು. ಅಂತಹದ್ದರಲ್ಲಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮೂರು ಚಿರತೆಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಪರಿಸರ ಪ್ರೇಮಿಗಳಲ್ಲಿ ಸಂತಸ ತಂದಿದೆ.”
ಅಭಿವೃದ್ಧಿ ಮತ್ತು ಪ್ರಕೃತಿ ಸಂರಕ್ಷಣೆ ಪರಸ್ಪರ ಪೂರಕವಾಗಿ ಸಾಗಬಲ್ಲವು ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ,” ಎಂದು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಈ ವೀಡಿಯೊಕ್ಕೆ ಶೀರ್ಷಿಕೆ ನೀಡಿದೆ.

ಪರಿಸರ ಸಮತೋಲನದ ಶುಭ ಸೂಚನೆ
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. “ಒಂದೇ ಬಾರಿಗೆ ಮೂರು ಚಿರತೆಗಳು ಕಾಣಿಸಿಕೊಂಡಿರುವುದು ಈ ಪ್ರಾಣಿಗಳ ಸಂತತಿ ವೃದ್ಧಿಯಾಗುತ್ತಿರುವುದಕ್ಕೆ ಸಾಕ್ಷಿ” ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಕಠಿಣ ಹವಾಮಾನದಲ್ಲೂ ರಸ್ತೆ ಸಂಪರ್ಕ ಕಲ್ಪಿಸುವ ಬಿಆರ್‌ಒ (BRO) ತಂಡದ ಕಾರ್ಯವನ್ನೂ ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಭಾರತದಲ್ಲಿ ಹಿಮ ಚಿರತೆಗಳ ಸಂಖ್ಯೆ ಎಷ್ಟು?
ಇತ್ತೀಚಿನ ‘ಭಾರತದಲ್ಲಿ ಹಿಮ ಚಿರತೆಗಳ ಜನಸಂಖ್ಯೆ ಮೌಲ್ಯಮಾಪನ’ (SPAI) ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 718 ಹಿಮ ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳ ರಾಜ್ಯವಾರು ಅಂಕಿಅಂಶಗಳ ಪ್ರಕಾರ, ಲಡಾಖ್-477, ಉತ್ತರಾಖಂಡ-124, ಹಿಮಾಚಲ ಪ್ರದೇಶ-51, ಅರುಣಾಚಲ ಪ್ರದೇಶ-36, ಸಿಕ್ಕಿಂ-21 ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 09 ಸೇರಿದಂತೆ ಒಟ್ಟು 718 ಹಿಮ ಚಿರತೆಗಳಿವೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement