ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕಕ್ಕೆ ಅಪಾಯಕಾರಿಯೇ? ಅಮೆರಿಕದ ವರದಿ ಎಚ್ಚರಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ, ವಿಶೇಷವಾಗಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಜೊತೆ ಅಮೆರಿಕದ ಸ್ನೇಹ ವೃದ್ಧಿಸಿದೆ. ಫೆಬ್ರವರಿ 28 ರಿಂದ ಸಂಘರ್ಷದಲ್ಲಿ ತೊಡಗಿರುವ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾಡಿಸಿದ್ದಕ್ಕಾಗಿ ಟ್ರಂಪ್ ಅವರು ಮುನೀರ್ ಅವರನ್ನು ‘ಫೆಂಟಾಸ್ಟಿಕ್ ವ್ಯಕ್ತಿ’ ಮತ್ತು ‘ಮಹಾನ್ ಹೋರಾಟಗಾರ’ ಎಂದು ಹಲವು ಬಾರಿ ಹೊಗಳಿದ್ದಾರೆ.
ಆದರೆ, ಇದೀಗ ಅಮೆರಿಕದ ಮಾಧ್ಯಮವೊಂದು ಅಸಿಮ್ ಮುನೀರ್ ಅಮೆರಿಕಕ್ಕೆ ದೊಡ್ಡ ‘ಹೊರೆ’ ಅಥವಾ ಅಪಾಯಕಾರಿಯಾಗಬಹುದು ಎಂದು ಟ್ರಂಪ್ ಆಡಳಿತಕ್ಕೆ ಎಚ್ಚರಿಕೆ ನೀಡಿದೆ.

ಇರಾನ್ ಜೊತೆಗಿನ ನಂಟು: ಅಮೆರಿಕಕ್ಕೆ ರೆಡ್‌ ಫ್ಲ್ಯಾಗ್‌ …!
‘ಫಾಕ್ಸ್ ನ್ಯೂಸ್ ಡಿಜಿಟಲ್’ ವರದಿಯ ಪ್ರಕಾರ, ಇರಾನ್ ಮತ್ತು ಅದರ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೊಂದಿಗೆ ಮುನೀರ್ ಹೊಂದಿರುವ ನಿಕಟ ಸಂಬಂಧವು ಅಮೆರಿಕಕ್ಕೆ ಒಳ್ಳೆಯದಲ್ಲ. ಹತ್ಯೆಗೀಡಾದ ಇರಾನ್‌ನ ಕುಡ್ಸ್ ಫೋರ್ಸ್ ಕಮಾಂಡರ್ ಖಾಸಿಮ್ ಸುಲೇಮಾನಿ ಸೇರಿದಂತೆ ಹಲವು ಉನ್ನತ ಇರಾನಿ ಅಧಿಕಾರಿಗಳೊಂದಿಗೆ ಮುನೀರ್ ಉತ್ತಮ ಸಂಬಂಧ ಹೊಂದಿದ್ದಾರೆ. ಇದೇ ಸಂಬಂಧವನ್ನು ಬಳಸಿಕೊಂಡು ಅವರು ಅಮೆರಿಕ ಮತ್ತು ಇರಾನ್‌ ನಡುವೆ ಸಂಧಾನಕಾರನಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಂಪ್ ಅವರು ಮುನೀರ್ ಅವರನ್ನು ತಮ್ಮ ‘ಫೇವರೆಟ್ ಫೀಲ್ಡ್ ಮಾರ್ಷಲ್’ ಎಂದು ಕರೆದಿದ್ದರೂ, ಮುನೀರ್ ಅವರ ಈ ದ್ವಂದ್ವ ಪಾತ್ರ ಅಮೆರಿಕದ ಹಿತಾಸಕ್ತಿಗೆ ಧಕ್ಕೆ ತರಬಹುದು ಎಂದು ವರದಿ ಹೇಳಿದೆ.
“ಟ್ರಂಪ್ ಪಾಕಿಸ್ತಾನಿಗಳನ್ನು ನಂಬಬಾರದು. ಅಫ್ಘಾನಿಸ್ತಾನದಲ್ಲಿ ನಮ್ಮ ಸ್ನೇಹಿತರಂತೆ ನಟಿಸುತ್ತಲೇ ತಾಲಿಬಾನ್ ಬೆಂಬಲಿಸಿದ ನಂಬಿಕೆದ್ರೋಹಿ ಮಿತ್ರ ಪಾಕಿಸ್ತಾನ. ಐಆರ್‌ಜಿಸಿ (IRGC) ಜೊತೆಗಿನ ಮುನೀರ್ ಸಂಬಂಧವು ಟ್ರಂಪ್ ಆಡಳಿತಕ್ಕೆ ಒಂದು ದೊಡ್ಡ ‘ರೆಡ್ ಫ್ಲಾಗ್’ (ಅಪಾಯದ ಮುನ್ಸೂಚನೆ)” ಎಂದು ಎಫ್‌ಡಿಡಿ (FDD) ಸಂಸ್ಥೆಯ ಬಿಲ್ ರೋಗ್ಗಿಯೊ ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಇರಾನ್ ಹಿತಾಸಕ್ತಿ ಕಾಪಾಡುತ್ತಿದ್ದಾರೆಯೇ ಮುನೀರ್?
ಪಾಕಿಸ್ತಾನವು ಇರಾನ್‌ನ ಹಿತಾಸಕ್ತಿಗಳನ್ನು ರಕ್ಷಿಸಲು ತನ್ನ ಸಂಬಂಧವನ್ನು ಬಳಸಿಕೊಳ್ಳುತ್ತಿರಬಹುದು ಎಂದು ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಜೊತೆ ಸ್ನೇಹ ಬೆಳೆಸಿ, ಇರಾನ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಅಥವಾ ಅನಿವಾರ್ಯವಾದ ಆದರೆ ನಂಬಲಸಾಧ್ಯವಾದ ಮಧ್ಯಸ್ಥಿಕೆಗಾರನಾಗಿ ಪಾಕಿಸ್ತಾನವನ್ನು ಪ್ರತಿಷ್ಠಾಪಿಸುವುದು ಮುನೀರ್ ಗುರಿಯಾಗಿರಬಹುದು ಎಂದು ವರದಿ ತಿಳಿಸಿದೆ.
ಪಾಕಿಸ್ತಾನದ ಅತ್ಯಂತ ಶಕ್ತಿಶಾಲಿ ಸೇನಾ ಮುಖ್ಯಸ್ಥ
1968 ರಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮುನೀರ್, 1986 ರಲ್ಲಿ ಸೇನೆ ಸೇರಿದರು. ಸೌದಿ ಅರೇಬಿಯಾದಲ್ಲಿ ಕರ್ನಲ್ ಆಗಿ ಕೆಲಸ ಮಾಡುವಾಗ ಅರೇಬಿಕ್ ಭಾಷೆಯನ್ನೂ ಕಲಿತಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಮಿಲಿಟರಿ ಇಂಟೆಲಿಜೆನ್ಸ್ (MI) ಮತ್ತು ಐಎಸ್‌ಐ (ISI) ಎರಡನ್ನೂ ಮುನ್ನಡೆಸಿದ ಏಕೈಕ ಸೇನಾ ಮುಖ್ಯಸ್ಥ ಇವರಾಗಿದ್ದಾರೆ.

ಭಾರತದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ವೇಳೆ ಅವರು ವಿಫಲವಾದರೂ ತಮ್ಮನ್ನು ತಾವು ‘ಫೀಲ್ಡ್ ಮಾರ್ಷಲ್’ ಎಂದು ಬಣ್ಣಿಸಿಕೊಳ್ಳುವ ಮುನೀರ್, ಪರ್ವೇಜ್ ಮುಷರಫ್ ನಂತರ ದೇಶದ ಅತ್ಯಂತ ಶಕ್ತಿಶಾಲಿ ಸೇನಾ ಮುಖ್ಯಸ್ಥ ಎನ್ನಿಸಿಕೊಂಡಿದ್ದಾರೆ. ಪ್ರಧಾನಿ ಶೆಹಬಾಜ್ ಷರೀಫ್ ಸಂಧಾನ ಮಾತುಕತೆಯಲ್ಲಿ ಪ್ರಮುಖರಾಗಿ ಕಂಡರೂ, ನಿಜವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಅಸಿಮ್ ಮುನೀರ್.
ಸೇನಾ ನೇಮಕಾತಿ, ನಾಗರಿಕ ಸರ್ಕಾರದ ನಿರ್ಧಾರಗಳು ಮತ್ತು ಸೇನೆಯ ಬೃಹತ್ ವ್ಯವಹಾರ ಸಾಮ್ರಾಜ್ಯದ ಮೇಲೆ ಮುನೀರ್ ಸಂಪೂರ್ಣ ಅಧಿಕಾರ ಹೊಂದಿದ್ದಾರೆ ಎಂದು ಲೋವಿ ಇನ್‌ಸ್ಟಿಟ್ಯೂಟ್‌ನ ಚಾರ್ಲ್ಸ್ ಲಿಯಾನ್ಸ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ. ಅಸಿಮ್ ಮುನೀರ್ ಅವರು ಅಮೆರಿಕ-ಇರಾನ್ ಶಾಂತಿ ಮಾತುಕತೆಗಾಗಿ ಇರಾನ್‌ನಲ್ಲಿ ಬೀಡುಬಿಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement