ಚೀನಾದ ಕೃತಕ ಸೂರ್ಯ ಪ್ರಯೋಗದಲ್ಲಿ ಸುಮಾರು 2 ನಿಮಿಷ 12 ಕೋಟಿ ಸೆಲ್ಸಿಯಸ್‌ನಲ್ಲಿ ಪ್ಲಾಸ್ಮಾ ತಾಪಮಾನ ಸಾಧನೆ, ಹೊಸ ವಿಶ್ವ ದಾಖಲೆ

ಚೀನಾದ ಪ್ರಾಯೋಗಿಕ ಸುಧಾರಿತ ಸೂಪರ್ ಕಂಡಕ್ಟಿಂಗ್ ಟೋಕಾಮಾಕ್ (ಈಸ್ಟ್) ಇತ್ತೀಚಿನ ತನ್ನ ಪ್ರಯೋಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ಅಲ್ಲಿ ಇದು 101 ಸೆಕೆಂಡುಗಳ ಕಾಲ 120 ಮಿಲಿಯನ್ ಸೆಂಟಿಗ್ರೇಡ್‌ ಪ್ಲಾಸ್ಮಾ ತಾಪಮಾನವನ್ನು ಸಾಧಿಸಿದೆ. ಅಷ್ಟೇ ಅಲ್ಲ, “ಕೃತಕ ಸೂರ್ಯ” ದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು 20 ಸೆಕೆಂಡುಗಳ ಕಾಲ 60 ಮಿಲಿಯನ್ ಸೆಂಟಿಗ್ರೇಡ್‌ ತಾಪಮಾನ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿಗಳು ತಿಳಿಸಿವೆ.
ಹೆಫೈನಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (ಎಎಸ್ಐಪಿಪಿ) ಯ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಮಾ ಫಿಸಿಕ್ಸ್‌ ನಲ್ಲಿರುವ ಟೋಕಮಾಕ್ ಸಾಧನವನ್ನು ಪರಮಾಣು ಸಮ್ಮಿಳನ ಪ್ರಕ್ರಿಯೆಯನ್ನು ಪುನರುತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ, ಇದು ಸೂರ್ಯ ಮತ್ತು ನಕ್ಷತ್ರಗಳಲ್ಲಿ ನಡೆಯುವ ನೈಸರ್ಗಿಕ ಕ್ರಿಯೆಗಳಿಗೆ ಸಮನಾಗಿದೆ. ನಿಯಂತ್ರಿತ ಪರಮಾಣು ಸಮ್ಮಿಳನ (fusion) ಮೂಲಕ ಅನಂತ ಶುದ್ಧ ಶಕ್ತಿ (infinite clean energy )ಯನ್ನು ಪಡೆಯಲು ಈ ಪ್ರಯೋಗ ನಡೆಸಲಾಗುತ್ತಿದೆ. ಹಿಂದಿನ ದಾಖಲೆಯು 100 ಸೆಕೆಂಡುಗಳ ಕಾಲ 100 ಮಿಲಿಯನ್ ಸೆಂಟಿಗ್ರೇಡ್‌ ಪ್ಲಾಸ್ಮಾ ತಾಪಮಾನವನ್ನು ಕಾಯ್ದುಕೊಂಡಿತ್ತು. ಆ ದಾಖಲೆ ಈಗ ಮುರಿದಿದೆ. ಇದು ಪರಮಾಣು ಸಮ್ಮಿಳನದಲ್ಲಿ ಈವರೆಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.
ಶೆನ್‍ಜೆನ್‌ನ ದಕ್ಷಿಣ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಲಿ ಮಿಯಾವೊ ಮಾತನಾಡಿ, ಚೀನಾದ ವಿಜ್ಞಾನಿಗಳ ಇತ್ತೀಚಿಗಿನ ಪ್ರಯೋಗವು ತಾಪಮಾನವನ್ನು ದೀರ್ಘಕಾಲದ ವರೆಗೆ ಸ್ಥಿರ ಮಟ್ಟದಲ್ಲಿರಿಸಿಕೊಳ್ಳುವ ಗುರಿಯತ್ತ ಪ್ರಮುಖ ಮೈಲುಗಲ್ಲಾಗಿದೆ. “ಪ್ರಗತಿಯು ಗಮನಾರ್ಹ ಪ್ರಗತಿಯಾಗಿದೆ, ಮತ್ತು ಅಂತಿಮ ಗುರಿಯು ತಾಪಮಾನವನ್ನು ದೀರ್ಘಕಾಲದ ವರೆಗೆ ಸ್ಥಿರ ಮಟ್ಟದಲ್ಲಿರಿಸಿಕೊಳ್ಳಬೇಕು” ಎಂದು ಲಿ ಅವರು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್‌ಗೆ ತಿಳಿಸಿದರು.
ನ್ಯೂ ಅಟ್ಲಾಸ್‌ ವರದಿಯ ಪ್ರಕಾರ, ವಿಜ್ಞಾನಿಗಳು ಪ್ರಸ್ತುತ ಈ ಪ್ರತಿಕ್ರಿಯೆಗಳನ್ನು ಪ್ರಚೋದಿಸಲು ವಿವಿಧ ಸಾಧನ (devices )ಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ತಜ್ಞರು ಈಸ್ಟ್‌ನಂತಹ ಡೋನಟ್ ಆಕಾರದ ಟೋಕಮಾಕ್‌ಗಳು ಹೆಚ್ಚು ಭರವಸೆಯಂತೆ ಕಂಡುಬರುತ್ತವೆ ಎಂದು ಹೇಳಿದ್ದಾರೆ. ಹೈಡ್ರೋಜನ್ ಪ್ಲಾಸ್ಮಾದ ಸೂಪರ್‌ ಹೀಟೆಡ್ ಸ್ಟ್ರೀಮ್‌ಗಳನ್ನು ಪ್ರತಿಕ್ರಿಯೆಗಳು ಸಂಭವಿಸುವಷ್ಟು ಸಮಯದ ವರೆಗೆ ಹಿಡಿದಿಡಲು ವಿನ್ಯಾಸಗೊಳಿಸಲಾದ ಕಾಂತೀಯ ಸುರುಳಿಗಳ ಸರಣಿಯನ್ನು ಸಾಧನ (devices) ಒಳಗೊಂಡಿದೆ.
ಚೀನಾದ “ಕೃತಕ ಸೂರ್ಯ” ಪ್ರಯೋಗವು ಇಂಟರ್ನ್ಯಾಷನಲ್ ಥರ್ಮೋನ್ಯೂಕ್ಲಿಯರ್ ಎಕ್ಸ್‌ಪೆರಿಮೆಂಟಲ್ ರಿಯಾಕ್ಟರ್ (ಐಟಿಇಆರ್) ಸೌಲಭ್ಯದ ಒಂದು ಭಾಗವಾಗಿದೆ, ಇದು ಜಾಗತಿಕ ವಿಜ್ಞಾನ ಯೋಜನೆಯಾಗಿದೆ, ಇದು 2035 ರಲ್ಲಿ ಕಾರ್ಯರೂಪಕ್ಕೆ ಬಂದಾಗ ವಿಶ್ವದ ಅತಿದೊಡ್ಡ ಪರಮಾಣು ಸಮ್ಮಿಳನ ರಿಯಾಕ್ಟರ್ ಆಗಲಿದೆ. ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ರಷ್ಯಾ ಮತ್ತು ಅಮೆರಿಕ ಸೇರಿದಂತೆ 35 ದೇಶಗಳು ಜಂಟಿಯಾಗಿ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿವೆ. ಪರಮಾಣು ಸಮ್ಮಿಳನವನ್ನು ಬಳಸಿಕೊಳ್ಳಲು, 100 ಮಿಲಿಯನ್ ಸೆಂಟಿಗ್ರೇಡ್‌ಗಿಂತ ಹೆಚ್ಚಿನ ಪ್ಲಾಸ್ಮಾ ತಾಪಮಾನ ಸಾಧಿಸುವುದು ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. 2020 ರಲ್ಲಿ, ಕೊರಿಯಾದ ಕೆಎಸ್‌ಟಿಎಆರ್ ರಿಯಾಕ್ಟರ್ 20 ಸೆಕೆಂಡುಗಳ ಕಾಲ 100 ಮಿಲಿಯನ್ ಸೆಂಟಿಗ್ರೇಡ್‌ ತಾಪಮಾನದಲ್ಲಿ ಪ್ಲಾಸ್ಮಾವನ್ನು ಕಾಯ್ದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿತ್ತು. ಸೂರ್ಯನ ಮಧ್ಯಭಾಗದಲ್ಲಿರುವ ತಾಪಮಾನವು 15 ಮಿಲಿಯನ್ ಸೆಂಟಿಗ್ರೇಡ್‌ ಎಂದು ನಂಬಲಾಗಿದೆ, ಇದರರ್ಥ (ಈಸ್ಟ್) ಉತ್ಪತ್ತಿಯಾಗುವ ತಾಪಮಾನವು ಸೂರ್ಯನ ತಾಪಮಾನಕ್ಕಿಂತ ಏಳು ಪಟ್ಟು ಹೆಚ್ಚು.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement