ಸರ್ಕಾರ-ಎಸ್ಕಾಂಗಳ ಅಸಮರ್ಥ ಆಡಳಿತದಿಂದಾದ ಆರ್ಥಿಕ ನಷ್ಟಕ್ಕೆ ಜನಸಾಮಾನ್ಯರ ಮೇಲೇಕೆ ಹೊರೆ ?: ಅಂಕಿ-ಅಂಶಗಳ ಸಮೇತ ವಿದ್ಯುತ್‌ ದರ ಏರಿಕೆ ಪ್ರಶ್ನಿಸಿದ ವಸಂತ ಲದವಾ

ಹುಬ್ಬಳ್ಳಿ: ಅನಿಯಂತ್ರಿತ ಹಣದುಬ್ಬರದ ಪರಿಸ್ಥಿತಿಯಲ್ಲಿ ಜನ ತಮ್ಮ ಸೀಮಿತ ವರಮಾನಗಳ ಜೊತೆ ಹೇಗೋ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಹೊರೆ ಹೇರುತ್ತಲೇ ಇವೆ. ಈಗಾಗಲೇ ನೊಂದ-ಬೆಂದ ಜನ ಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಇತ್ತೀಚೆಗೆ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವಸಂತ ಲದವಾ ತೀವ್ರವಾಗಿ ಖಂಡಿಸಿದ್ದಾರೆ.

ಜನಸಾಮಾನ್ಯರ, ಬಳಕೆದಾರರ, ರೈತರ, ವಾಣಿಜ್ಯೋದ್ಯಮಗಳ ವಿರೋಧದ ನಡುವೆ ಅವರು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ ವಿರೋಧದ ಆಕ್ಷೇಪಣೆಗಳನ್ನು ನ್ಯಾಯಯುತವಾಗಿ ಪರಿಶೀಲಿಸದೇ ರಾಜ್ಯದ ೫೫ ,೫೭,೧೦೮ ಮುಗ್ಧ ಬಳಕೆದಾರರ ಮೇಲೆ ದರ ಏರಿಕೆಯನ್ನು ಹೇರಿದೆ. ಸರ್ಕಾರ ಮತ್ತು ನಿಯಂತ್ರಣ ಆಯೋಗ, ಈ ದರ ಏರಿಕೆ ಕ್ರಮ ಪುನರ್ ಪರಿಶೀಲಿಸಿ ದರ ಏರಿಕೆ ಕ್ರಮ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ವಸಂತ ಲದವಾ ಒತ್ತಾಯಿಸಿದ್ದಾರೆ.
ಸರ್ಕಾರ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಅಸಮರ್ಥ ಆಡಳಿತದ ವೈಫಲ್ಯದಿಂದ ಆದ ಹಾನಿಯನ್ನು ಈಗ ಬಳಕೆದಾರರ ಮೇಲೆ ಹೇರಿಕೆ ಮಾಡಿದ್ದು ಸಾಮಾನ್ಯ ನ್ಯಾಯಕ್ಕೆ ವಿರುದ್ಧವಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಂತ್ರಣದಲ್ಲಿರುವ ಸಂಸ್ಥೆಗಳು. ಆದರೆ ನಿಗಮದ ನೀತಿ, ಕಾನೂನು ಮತ್ತು ಮಾರ್ಗಸೂಚಿಗಳನ್ನು ಪಾಲಿಸದೆ ಅವುಗಳನ್ನು ಮೀರಿ ಕಂಪನಿಗಳು ತಮ್ಮ ನಿರ್ಲಕ್ಷ, ಅಸಮರ್ಥ, ತಪ್ಪು ಹಾಗೂ ದೋಷಪೂರಿತ ಆಡಳಿತ ವೈಫಲ್ಯದ ಕಾರಣ ಅನುಭವಿಸಿದ ನಷ್ಟದ ಹೊರೆಯನ್ನು ಬಳಕೆದಾರರ ಮೇಲೆ ಹೇರುವುದು ಯಾವ ಸೀಮೆ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ವಿದ್ಯುತ್ ಕಂಪನಿಗಳ ನಿಯಮ ಬಾಹಿರ ಮತ್ತು ತಪ್ಪು ನಡುವಳಿಕೆಗಳಿಂದ ಆದ ನಷ್ಟಗಳ ವರದಿ, ದೇಶದ ಅತ್ಯುನ್ನತ ಲೆಕ್ಕ ಪರಿಶೋಧನಾ ಸಂಸ್ಥೆ (ಸಿ.ಎ.ಜಿ.) ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದೆ. ಕಂಪನಿಗಳು ಕೇಂದ್ರ ವಿದ್ಯುತ್ ಪ್ರಾಧಿಕಾರ, ಯೋಜನಾ ಮಾನದಂಡಗಳನ್ನು ಮೀರಿ, ೩,೭೮೦ ಕೋಟಿ ರೂ.ಗಳ ವೆಚ್ಚದ ಆಯೋಜಿತ ಕಾಮಗಾರಿಗಳಿಗೆ ವೆಚ್ಚಮಾಡಿ ಕಂಪನಿಗಳ ಮೇಲೆ ತಡೆಯ ಬಹುದಾದ ಹೊರೆ ಹೇರಿದೆ ಉಪಕೇಂದ್ರಗಳ ವಿನ್ಯಾಸ, ಅನುಮೋದನೆ, ಕಾರ್ಯಾರಂಭದಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಮತ್ತು ಪೂರೈಕೆಯಲ್ಲಿ ಅತಿಯಾದ ವಿಳಂಬದಿಂದಾಗಿ ಕಂಪನಿಗಳಿಗೆ ಹಾನಿಯಾಗಿದೆ. ಸಿ.ಎ.ಜಿ. ಪರೀಕ್ಷಾ ಪರಿಶೀಲಿಸಿದ ೫೩ ಯೋಜನೆಗಳಲ್ಲಿ ೫೦ ಯೋಜನೆಗಳು ಪೂರ್ಣಗೊಳಿಸುವಲ್ಲಿ ಕಂಪನಿಗಳ ಅಲಕ್ಷದಿಂದಾಗಿ ನಿಗದಿತ ಸಮಯಕ್ಕಿಂತ ಹನ್ನೆರಡು ವರ್ಷಗಳವರೆಗೆ ವಿಳಂಬವಾಗಿ ೫೫೬.೪೨ ಕೋಟಿ ರೂ.ಗಳಷ್ಟು ಬೆಲೆ ಬಾಳುವ ೧೬೫೬ ದಶಲಕ್ಷ ಯುನಿಟ್ ಉಳಿತಾಯ ಕಳೆದುಕೊಂಡಿವೆ. ೫೫೬.೯೨ ಕೋಟಿ ರೂ.ಗಳ ವೆಚ್ಚದ ೨೦ ಕಾಮಗಾರಿಗಳ ವಿಳಂಬದಿಂದ ೫೫.೧೬ ಕೋಟಿ ರೂ.ಗಳ ಬಡ್ಡಿ ಸಂದಾಯ ಮಾಡಿವೆ ಎಂದು ಲದವಾ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಅಲ್ಲದೆ, ಅಸಮರ್ಪಕ ವಿದ್ಯುತ್ ಪ್ರಸರಣ ಕೇಂದ್ರಗಳಿಗೆ ೪೪೯.೮೧ ಕೋಟಿ ರೂ.ಗಳ ಬಂಡವಾಳ ವೆಚ್ಚಮಾಡಿ ಅದರ ಮೇಲಿನ ಸಾಲಕ್ಕಾಗಿ ೩೩.೬೩ ಕೋಟಿ ರೂ.ಗಳ ಬಡ್ಡಿ ಸಂದಾಯ ಮಾಡಿ ಪ್ರತಿ ವರ್ಷ ೪೦.೪೩ ಕೋಟಿ ರೂ.ಗಳ ಬಡ್ಡಿ ತುಂಬುವಂತೆ ಮಾಡಿವೆ. ವಿತರಣಾ ಕೇಂದ್ರಗಳಲ್ಲಿ ನಿಖರವಾದ ನಷ್ಟವನ್ನು ಅಳೆಯುವಲ್ಲಿ ಅತಿಯಾಗಿ ವೆಚ್ಚಗಳನ್ನು ಮಾಡಿದರೂ ಫಲಪ್ರದವಾಗದೇ ಉಳಿದಿವೆ ಎಂದು ವಸಂತ ಲದವಾ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೊಳಿಸುವಲ್ಲಿ ತಮ್ಮದೇ ಸೂಚಿಸಲಾದ ಸುತ್ತೋಲೆ, ಮಾರ್ಗ ಸೂಚಿಗಳನ್ನು ಮೀರಿದೆ. ಸುಮಾರು ೪೧.೫೫ ಕೋಟಿ ರೂ.ಗಳ ಮೌಲ್ಯದ ೬೪%ರಷ್ಡು ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ನಿಗದಿತ ಅವಧಿಗಿಂತ ಏಳುವರೆ ವರ್ಷಗಳಷ್ಟು ವಿಳಂಬ ಮಾಡಿದೆ. ಇಂಥ ವಿದ್ಯುತ್ ಪರಿವರ್ತಕಗಳು ವ್ಯವಸ್ಥೆಯಲ್ಲಿ ಬಳಸದೆ ಅನಿವಾರ್ಯವಾಗಿ ೭೫.೯೦ ಕೋಟಿ ರೂ.ಗಳನ್ನು ವೆಚ್ಚದ ಪರಿವರ್ತಕಗಳನ್ನು ಖರೀದಿ ಮಾಡಿ ಕಂಪನಿಗಳಿಗೆ ಹೊರೆ ಹೊರಿಸಿದೆ.

ಗುತ್ತಿಗೆದಾರರಿಗೆ ನಿಯಮ ಮೀರಿ ೧೪.೪೦ ಕೋಟಿ ರೂ.ಗಳ ಮೌಲ್ಯದ ಸೀಸ ತಾಮ್ರದ ತಂತಿಗಳು ಪೂರೈಸಿದೆ. ಎಸ್ಕಾಂಗಳು ವಿತರಣಾ ನಷ್ಟ ತಡೆಯುವಲ್ಲಿ ವಿಫಲರಾಗಿರುವ ಕಾರಣ ೩೭೪.೯೮ ಕೋಟಿ ರೂ.ಗಳ ದಂಡ ತುಂಬಿವೆ ಎಂದು ಲೆಕ್ಕ ಪರಿಶೋಧನಾ ವರದಿ ಮಾಡಿದೆ. ಇವೆಲ್ಲ ಹಾನಿ ವೆಚ್ಚ ಕೇವಲ ಕಂಪನಿಗಳ ಆಡಳಿತದ ತಪ್ಪು ನೀತಿಯಿಂದ ಆಗಿದ್ದರೂ ಸಹ ಸರ್ಕಾರ ಅಂಥ ಕಂಪನಿಗಳನ್ನು ಜವಾಬ್ದಾರರನ್ನಾಗಿ ಮತ್ತು ಹೊಣೆಗಾರರನ್ನಾಗಿ ಮಾಡುವುದರ ಬದಲಾಗಿ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿದೆ ಎಂದು ವಸಂತ ಲದವಾ ಅಂಕಿ ಸಂಖ್ಯೆಗಳ ಸಹಿತ ವಿವರಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಇಲಾಖೆಗಳು ೫೧೯೧ ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ಲ ಬಾಕಿ ಉಳಿಸಿಕೊಂಡಿವೆ, ಸರ್ಕಾರ ಇಂಥ ದೊಡ್ಡ ಪ್ರಮಾಣದ ಬಾಕಿ ತುಂಬದ ಕಾರಣ ಹೆಸ್ಕಾಂಗಳಿಗೆ ಹಣದ ಕೊರತೆಯಾಗಿದೆ ಆದರೆ ಸರ್ಕಾರ ಇದರ ಹೊಣೆ ಸಹಿತ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿರುವದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ಇಷ್ಟಕ್ಕೆ ನಿಲ್ಲದ ಹೆಸ್ಕಾಂ ಕರ್ಮಕಾಂಡ ಇತ್ತೀಚೆಗೆ ಅಥಣಿ ವಿಭಾಗದಲ್ಲಿ ೮೬ ಕೋಟಿ ರೂ.ಗಳ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಇಪ್ಪತ್ತು ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದೆ. ಈ ಅವ್ಯವಹಾರಕ್ಕೆ ಬಳಕೆದಾರರು ಹೊಣೆಗಾರರೇ? ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ವಸಂತ ಲದವಾ ಒತ್ತಾಯಿಸಿದ್ದಾರೆ.
ಅಧಿಕಾರಿಗಳ ವೈಫಲ್ಯತೆಯ ಪರಿಣಾಮ ಹೆಸ್ಕಾಂ ನ್ಯಾಯಯುತವಾಗಿ ತುಂಬಲೇಬಾರದ ೧೨.೩೮ಕೋಟಿ ರೂ.ಗಳ ಜಿ.ಎಸ್.ಟಿ. ತುಂಬಿ ನಷ್ಟ ಮಾಡಿದೆ. ಸರ್ಕಾರ ತಪ್ಪಿತಸ್ತರ ಮೇಲೆ ಕ್ರಮ ಕೈಗೊಂಡು ನಷ್ಟವನ್ನು ತಡೆಯದೆ, ತಾನು ಪಾವತಿಸಬೇಕಾದ ವಿದ್ಯುತ್ ಬಿಲ್ಲ ಸಂದಾಯ ಮಾಡದೆ ಬಳಕೆದಾರರ ಮೇಲೆ ವಿದ್ಯುತ್ ದರ ಹೇರಿಕೆ ಮಾಡಿದ ಸರ್ಕಾರ ಮತ್ತು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ತಕ್ಷಣವೇ ವಿದ್ಯುತ್‌ ದರ ಹೆಚ್ಚಳವನ್ನು ಪುನರ್‌ ಪರಿಶೀಲಿಸಿ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ವಸಂತ ಲದವಾ ಒತ್ತಾಯಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement