ಉದ್ಧವ್‌ಗೆ ತೊಡೆತಟ್ಟಿದ ಶಿವಸೈನಿಕನೇ ಈಗ ನೂತನ ಸಿಎಂ: ಉದ್ಧವ್‌ ಎಡವಿದ್ದೆಲ್ಲಿ…? ಮುಂದಿನ ರಾಜಕೀಯ ಹೆಜ್ಜೆ ಏನು..?

ರಘುಪತಿ ಯಾಜಿ
ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪಕ್ಷವಾದ ಶಿವಸೇನೆ ಶಾಸಕರಿಂದಲೇ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾದ ಪರಿಸ್ಥಿತಿಗೆ ಶರಣಾಗಬೇಕಾದ ಉದ್ಧವ್ ಠಾಕ್ರೆ ಮುಂದೆ ರಾಜಕೀಯವಾಗಿ ಪ್ರಬಲರಾಗಿ ಇರಬಹುದೇ? ಅವರು ನಿನ್ನೆ ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷದಿಂದಲೇ ಮೂಲೆಗುಂಪಾದ ನಂತರ ಇದು ಈಗ ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಅವರ ವಿರುದ್ಧ ಅವರದ್ದೇ ಪಕ್ಷದ ದೊಡ್ಡ ಬಣ ಈಗ ಅಧಿಕಾರ ವಹಿಸಿಕೊಂಡಿದ್ದು, ತೊಡೆತಟ್ಟಿದೆ.
ಮುಂಬೈನ ರಾಜಕೀಯದ ನೀರಿನಲ್ಲಿ ಶಾರ್ಕ್‌ಗಳ ವಿರುದ್ಧ ಹೋರಾಡುವ ಶಕ್ತಿ ಬೇಕು. ಅದು ಶಿವಸೇನೆ ಸಂಸ್ಥಾಪಕ ಹಾಗೂ ಉದ್ಧವ್‌ ಠಾಕ್ರೆ ತಂದೆ ಬಾಳಾ ಸಾಹೇಬ ಠಾಕ್ರೆ ಅವರಿಗೆ ಇತ್ತು. ಆದರೆ ಈವರೆಗಿನ ಅವರ ರಾಜಕೀಯ ನಡೆ ನೋಡಿದರೆ ಉದ್ಧವ್ ಠಾಕ್ರೆ ಅವರ ತಂದೆಯ ಪ್ರತಿಭೆ ಹಾಗೂ ಅನುಭವ ಹೊಂದಿಲ್ಲ ಎಂಬುದು ಗೋಚರವಾಗುತ್ತದೆ.
ಬಾಳಾ ಸಾಹೇಬರು ನಿಸ್ಸಂದೇಹವಾಗಿ ವಿಭಿನ್ನ ಸಾಮರ್ಥ್ಯವುಳ್ಳವರಾಗಿದ್ದರು. ಅವರು ಹೆಚ್ಚು ಆಕ್ರಮಣಕಾರಿ, ಧೈರ್ಯಶಾಲಿ ಹಾಗೂ ಹೆಚ್ಚು ಮುತ್ಸದ್ದಿತನದ ಹೆಜ್ಜೆ ಇಡುತ್ತಿದ್ದರು. ಎದುರಾಳಿಗಳನ್ನು ಯಾವಾಗ ಬೆದರಿಸಬೇಕು ಹಾಗೂ ಅವರಿಗೆ ಯಾವಾಗ ಬಾಗಬೇಕು ಮತ್ತು ಯಾವಾಗ ಘರ್ಜಿಸಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಉದ್ಧವ್ ಠಾಕ್ರೆ, ಅವರ ತಂದೆಗಿಂತ ಭಿನ್ನವಾಗಿ, ಕಾಣುತ್ತಾರೆ. 2014ರ ನಂತರ ಮೋದಿ ಆಡಳಿತದ ಸ್ವರೂಪ ಮತ್ತು ಬಿಜೆಪಿಯ ಸ್ವರೂಪವನ್ನು ಅವರು ಚೆನ್ನಾಗಿ ತಿಳಿದಿದ್ದರೆ ಅವರು ಇಂಥ ರಾಜಕಾರಣ ಮಾಡುತ್ತಿರಲಿಲ್ಲ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಉದ್ಧವ್ ಠಾಕ್ರೆ ನಾಯಕರಾಗಿ ವಿಫಲರಾಗಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. 2019 ರಲ್ಲಿ, ಬಿಜೆಪಿಯ ಸಖ್ಯವನ್ನು ತ್ಯಜಿಸುವ ಮೂಲಕ, ಅವರು ಮೂರು ದಶಕಗಳಿಗಿಂತಲೂ ಹೆಚ್ಚು ವಿಶ್ವಾಸಾರ್ಹ ಪಕ್ಷದ ಸಂಬಂಧವನ್ನು ರಾಜಕೀಯ ಮಹಾತ್ವಾಂಕ್ಷೆಗಾಗಿ ಕೊನೆಗೊಳಿಸಿಬಿಟ್ಟರು. ಬಿಜೆಪಿ ಹಾಗೂ ಶಿವಸೇನೆ ಸಹಜ ಮಿತ್ರಪಕ್ಷಗಳಾಗಿದ್ದವು. ಯಾಕೆಂದರೆ ಎರಡೂ ಪಕ್ಷದ ಪ್ರಮುಖ ವಿಚಾರವೂ ಹಿಂದುತ್ವವೇ ಆಗಿತ್ತು. 2019ರ ವಿಧಾನಸಭೆ ಚುನಾವಣೆಯಲ್ಲಿ ಸಂಖ್ಯೆಯಲ್ಲಿ ಶಿವಸೇನೆಯನ್ನು ಮೀರಿಸಿದ ಬಿಜೆಪಿ ತಮ್ಮ ಪ್ರಾದೇಶಿಕ ಪಕ್ಷದ ಪ್ರಭಾವವನ್ನು ನುಂಗಿ ಹಾಕಲಿದೆ ಎಂಬುದು ಉದ್ಧವ್‌ ಠಾಕ್ರೆ ಲೆಕ್ಕಾಚಾರವಾಗಿತ್ತು. ಬಿಜೆಪಿಯ ವೇಗ ನೋಡಿದರೆ ಅವರ ಲೆಕ್ಕಾಚಾರ ತಪ್ಪು ಎಂದು ಹೇಳುವಂತಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ದೇಶಾದ್ಯಂತ ಬಿಜೆಪಿಯನ್ನು ವಿಸ್ತರಿಸಲು ನಿರ್ಧರಿಸಿದೆ, ಹೀಗಾದರೆ ಅದಕ್ಕೆ ಮಿತ್ರಪಕ್ಷಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಮಹಾರಾಷ್ಟ್ರವು ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿದೆ, ಮುಂಬೈ ಆರ್ಥಿಕ ರಾಜಧಾನಿಯಾಗಿದೆ ಮತ್ತು ಪ್ರಾಮುಖ್ಯತೆಯ ಪಾಲುದಾರರ ಅಗತ್ಯವಿಲ್ಲದೆ ಈ ಪ್ರದೇಶದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಾದರೆ ಎಂದು ಬಿಜೆಪಿ ಯೋಚಿಸಿರಬಹುದು. ಜೊತೆಗೆ ದೇವೇಂದ್ರ ಫಡ್ನವೀಸ್‌ ಪಕ್ಷದಲ್ಲಿ ಮತ್ತು ಹೊರಗೆ ರಾಜಕೀಯ ತಂತ್ರಗಾರಿಕೆಯಿಂದ ಗೆಲ್ಲುವ ಆಕ್ರಮಣಕಾರಿ ನಾಯಕನ ಗುಣವನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಉದ್ಧವ್ ಠಾಕ್ರೆ ಅವರು ಎರಡನೇ ಅವಧಿಗೆ ಬಿಜೆಪಿಗೆ ಅಧಿಕಾರ ಕೊಡುವುದು ಅವಮಾನಕರವೆಂದು ಭಾವಿಸಿದರು. ಆದರೆ ಅವರು ಮಾಡಿದ ತಪ್ಪೆಂದರೆ ಮೂವತ್ತು ವರ್ಷಗಳಿಂದ ವಿಶ್ವಾಸಾರ್ಹ ಮಿತ್ರಪಕ್ಷವನ್ನು ಏಕಾಏಕಿ ಕಳೆದುಕೊಳ್ಳಲು ನಿರ್ಧರಿಸಿದ್ದು. ಜೊತೆಗೆ ಬಾಳಾಸಾಹೇಬರಂತೆ ಕಿಂಗ್‌ ಮೇಕರ್‌ ಆಗಿ ಇರುವುದರ ಬದಲು ಕಿಂಗ್‌ ಆಗಲು ನಿರ್ಧರಿಸಿದ್ದು.

bimba pratibimbaಬಾಳಾ ಸಾಹೇಬ್ ಅವರು 1995 ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಮುಖ್ಯಮಂತ್ರಿಯಾಗದೇ ದೂರ ಉಳಿದು ಜಾಣ ನಡೆ ಅನುಸರಿಸಿದರು. ಅವರು ಮನೋಹರ ಜೋಶಿಗೆ ಮುಖ್ಯಮಂತ್ರಿ ಹೊಣೆಗಾರಿಕೆ ನೀಡಿದರು. ಆದರೆ, ನಿಜವಾದ ಅಧಿಕಾರ ಅವರ ಕೈಯಲ್ಲಿಯೇ ಇತ್ತು. ಸರ್ಕಾರದ ವೈಫಲ್ಯಗಳಿಗೆ ಅವರು ಜವಾಬ್ದಾರರಾಗಿರಲಿಲ್ಲ. ಹೀಗಾಗಿ ಮನೋಹರ್ ಜೋಶಿ ವಿಫಲವಾದಾಗ ಅವರ ಸ್ಥಾನಕ್ಕೆ ನಾರಾಯಣ ರಾಣೆಯನ್ನು ಬಹಳ ಸುಲಭದಲ್ಲಿ ತರಲು ಸಾಧ್ಯವಾಯಿತು. ಕಾರಣ ಪವರ್‌ ಪಾಲಿಟಿಕ್ಸ್‌ನ ರಿಮೋಟ್‌ ಕಂಟ್ರೋಲ್‌ ಬಾಳಾ ಸಾಹೇಬರ ಕೈಯಲ್ಲಿಯೇ ಇತ್ತು.
ಆದರೆ ಉದ್ಧವ್ ಠಾಕ್ರೆ ತಾವೇ ಮುಖ್ಯಮಂತ್ರಿಯಾಗಲು ನಿರ್ಧರಿಸಿದರು. ಅದಕ್ಕಾಗಿ ಶಿವಸೇನೆಯ ಸೈದ್ಧಾಂತಿಕ ಹಾಗೂ ರಾಜಕೀಯವಾಗಿ ತೀಕ್ಷ್ಣ ಟೀಕಾಕಾರ ಪಕ್ಷಗಳ ಜೊತೆ ಹಸ್ತಾಲಾಘವ ಮಾಡಿಬಿಟ್ಟರು. ಇದು ಠಾಕ್ರೆ ಕುಟುಂಬದ ರಿಮೋಟ್‌ ಕಂಟ್ರೋಲ್‌ ಶಕ್ತಿ ಛಿದ್ರವಾಗಲು ಕಾರಣವಾಯಿತು. ಪವರ್ ಪಾಲಿಟಿಕ್ಸ್ ಹೇಗೆ ನಿಭಾಯಿಸುವುದು ಎಂಬ ಬಾಳಾ ಸಾಹೇಬರ ದಾರಿಯಿಂದ ಇವರು ವಿಮುಖರಾದರು. ತಂದೆಯ ತಂತ್ರಗಾರಿಕೆಯನ್ನೂ ಮೈಗೂಡಿಸಿಕೊಳ್ಳಲಿಲ್ಲ. ಹೀಗಾಗಿ ಅಸಹಜ ಮೈತ್ರಿಗೆ ಪಕ್ಷವನ್ನು ಒಡ್ಡಿಕೊಂಡು ಅವರಿಂದ ಮಾರ್ಗದರ್ಶನ ತೆಗೆದುಕೊಳ್ಳಲು ಆರಂಭಿಸಿದರು. ಯಾವಾಗ ಏಕನಾಥ್ ಶಿಂಧೆ ಬಂಡಾಯವೆದ್ದರೋ ಆಗ ಉದ್ಧವ್ ಠಾಕ್ರೆಗೆ ತಮ್ಮ ತಪ್ಪಿನ ಅರಿವಾಯಿತು. ಆದರೆ ಆಗ ಪರಿಸ್ಥಿತಿ ಕೈಮೀರಿ ಹೋಗಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನವೇ ಮುಖ್ಯಮಂತ್ರಿಯವರ ಬಂಗಲೆಯನ್ನು ತೊರೆದು ತಿದ್ದುಕೊಳ್ಳುವ ಮೂಲಕ ಭಿನ್ನರಿಗೆ ತಿದ್ದಿಕೊಂಡಿದ್ದೇನೆ ಎಂದು ತಿಳಿಸುವ ಪ್ರಯತ್ನವನ್ನೂ ಮಾಡಿದರು. ಆದರೆ ಅಷ್ಟರಲ್ಲಾಗಲೇ ಆಗಬೇಕಾದ ಹಾನಿ ಆಗಿ ಹೋಗಿತ್ತು.

ಅವರು ಮಾಡಿದ ಮತ್ತೊಂದು ತಪ್ಪು ನಿರ್ಧಾರವೆಂದರೆ ಶರದ್ ಪವಾರ್ ಅವರನ್ನು ಕಿಂಗ್‌ ಮೇಕರ್‌ ಎಂದು ಅವರ ಪಕ್ಷದ ಶಾಸಕರು ಹಾಗೂ ರಾಜ್ಯದ ಜನತೆಗೆ ಗ್ರಹಿಸಲು ಅವಕಾಶ ಮಾಡಿಕೊಟ್ಟರು. ಶರದ್‌ ಪವಾರ್‌ಗೆ ಇದುವೇ ಬೇಕಿತ್ತು. ಅವರು ಸೀಸನ್‌ ರಾಜಕಾರಣಿ. ಅವರಿಗೆ ರಾಜ್ಯ ರಾಜಕಾರಣವೂ ಗೊತ್ತು, ದೆಹಲಿ ರಾಜಕಾರಣವೂ ಗೊತ್ತು. ಶರದ್‌ ಪವಾರ್‌ ಅವರು ಸರ್ಕಾರದ ಮುಖ್ಯ ಸಮಾಲೋಚಕರು ಮತ್ತು ಟ್ರಬಲ್-ಶೂಟರ್ ಆಗಿಬಿಟ್ಟರು. ಬಾಳಾ ಸಾಹೇಬರ್‌ ಕಾಲದಲ್ಲಿ ಶಿವಸೇನೆಗೆ ಕಟ್ಟಾ ರಾಜಕೀಯ ವೈರಿಯಾಗಿದ್ದ ಶರದ್‌ ಪವಾರ್‌ ಮೂರು ಪಕ್ಷಗಳ ಮೈತ್ರಿಯ ಗಾಡ್ ಫಾದರ್ ಆಗಿಬಿಟ್ಟರು. ಒಂದು ರೀತಿಯಲ್ಲಿ ಶರದ್ ಪವಾರ್ ಅವರು ಶಿವಸೇನೆಯಲ್ಲಿ ಬಾಳಾಸಾಹೇಬರನ್ನು ಬದಲಿಸಿದರು. ಬಾಳಾಸಾಹೇಬರ ಪಾತ್ರವನ್ನು ಶರದ್‌ ಪವಾರ್‌ ವಹಿಸಿಕೊಂಡಿದ್ದರು..! ‘ಮಾತೋಶ್ರೀ’ಯಿಂದ ಅಧಿಕಾರ ಕೇಂದ್ರ ದೂರವಾಯಿತು. ಠಾಕ್ರೆ ಬದಲಿಗೆ ಪವಾರ್ ಸರ್ಕಾರ ಆಗಿಬಿಟ್ಟರು. ಇದು ಮಾಹಾರಾಷ್ಟ್ರದಾದ್ಯಂತ ಜನರಿಗೆ ಗೊತ್ತಾಗಿಬಿಟ್ಟಿತು. ಇದು ಬಹುತೇಕ ಶಿವಸೇನೆ ಶಾಸಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸರ್ಕಾರದಲ್ಲಿ ಹುಲ್ಲುಕಡ್ಡಿ ಅಲ್ಲಾಡಬೇಕಾದರೂ ಅದಕ್ಕೆ ಶರದ್‌ ಪವಾರ್‌ ಅವರ ಅಣತಿ ಪಡೆಯಬೇಕಾದ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಈ ವಿಷಯದಲ್ಲಿ ಉದ್ಧವ್‌ ಠಾಕ್ರೆ ಶಿವಸೇನೆ ಶಾಸಕರ ಮನಸ್ಥಿತಿ ಅರ್ಥಮಾಡಿಕೊಳ್ಳದೆ ಎಡವಿದರು.
ಉದ್ಧವ್ ಠಾಕ್ರೆ ಮಾಡಿದ ಮತ್ತೊಂದು ತಪ್ಪೆಂದರೆ ತಮ್ಮ ಮಗನನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದು. ಬಾಳಾಸಾಹೇಬ ಠಾಕ್ರೆ, ಕಾನ್ಶಿ ರಾಂ ಅವರವರ ಪಕ್ಷದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದರು ಆದರೆ ಎಂದಿಗೂ ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಲು ಬಯಸಲಿಲ್ಲ; ಆದರೆ ರಿಮೋಟ್‌ ಕಂಟ್ರೋಲ್‌ ತಮ್ಮ ಕೈಯಲ್ಲಿಯೇ ಇರಿಸಿಕೊಂಡರು. ಹೀಗಾಗಿ ಪಕ್ಷದಿಂದ ಅಧಿಕಾರದ ಹುದ್ದೆಗೆ ಏರಿದವರು ಅವರನ್ನು ಧಿಕ್ಕರಿಸಲು ಧೈರ್ಯ ಮಾಡಲಿಲ್ಲ. ಭಾರತದಲ್ಲಿ, ರಾಜಕೀಯ ಅಧಿಕಾರಕ್ಕಿಂತ ನೈತಿಕ ಅಧಿಕಾರವು ಹೆಚ್ಚು ಪರಿಣಾಮಕಾರಿಯಾಗಿದೆ. ಆದರೆ ಉದ್ಧವ್‌ ಠಾಕ್ರೆ ಮಗ ಆದಿತ್ಯನನ್ನು ಮಂತ್ರಿಯನ್ನಾಗಿ ಮಾಡುವುದರಿಂದ ಸ್ವಜನಪಕ್ಷಪಾತ ಮತ್ತು ವಂಶಾಡಳಿತದ ಆರೋಪಗಳಿಗೆ ಅವಕಾಶ ಮಾಡಿಕೊಟ್ಟರು.
ಉದ್ಧವ್ ಠಾಕ್ರೆ ಅವರ ಅನನುಭವದ ಕಾರಣದಿಂದ ಸಂಜಯ್ ರಾವತ್ ಅವರಿಗೆ ಶಿವಸೇನೆಯೊಳಗೆ ಹೆಚ್ಚಿನ ಪ್ರಾಶಸ್ತ್ಯ ಪಡೆದರು. ಇದು ಇತರ ಹಿರಿಯ ನಾಯಕರನ್ನು ಅಸಮಾಧಾನಗೊಳಿಸಿತು. ಅವರೆಲ್ಲ ಕಾಂಗ್ರೆಸ್ ಮತ್ತು ಶರದ್ ಪವಾರ್ ಜೊತೆಗಿನ ಹೊಸ ಮೈತ್ರಿಯನ್ನು ವಿರೋಧಿಸಲು ಕಾರಣವಾಯಿತು.

ಕೊನೆಕ್ಷಣದಲ್ಲಿಯೂ ಠಾಕ್ರೆ ಚಾಣಾಕ್ಷ  ನಡೆ ಅನುಸರಿಸಲಿಲ್ಲ. ಬಹುಮತ ಸಾಬೀತು ಪರೀಕ್ಷೆ ಎದುರಿಸುವುದಕ್ಕಿಂತ ಮೊದಲೇ ಉದ್ಧವ್‌ ಠಾಕ್ರೆ ರಾಜೀನಾಮೆ ನೀಡಿ ಹೊರನಡೆದರು. ಈ ಕಾರಣದಿಂದ ಪಕ್ಷದ ಬಂಡಾಯ ಶಾಸಕರು ಬಿಜೆಪಿಯೊಂದಿಗೆ ಯಾವುದೇ ಅನೈತಿಕ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲು ಇದ್ದ ಅವಕಾಶವೂ ಅವರಿಗೆ ತಪ್ಪಿಹೋಯಿತು. ಮೇಜಿನ ಮೇಲೆ ಕುಳಿತು ವಿಷಯಗಳನ್ನು ಚರ್ಚಿಸಲು ಬಂಡಾಯ ಶಾಸಕರಿಗೆ ಭಾವನಾತ್ಮಕ ಮನವಿ ಮಾಡುವ ಮೂಲಕ ಪ್ರಬುದ್ಧತೆಯನ್ನು ತೋರಿಸಿದರೂ ಇಲ್ಲಿ ಎಡವಿದರು. ಸಂಜಯ್ ರಾವತ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕೀಯ ಪರಿಭಾಷೆ ಮೀರಿ ಮಾತನಾಡಿದರೂ ಉದ್ಧವ್ ಠಾಕ್ರೆ ರಾಜಕೀಯವಾಗಿ ಯಾವುದೇ ತಪ್ಪು ಮಾತನಾಡದೆ ಪ್ರಬುದ್ಧತೆ ತೋರಿದರು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು.
ಮುಖ್ಯಮಂತ್ರಿಯಾಗಿ ಪಕ್ಷವನ್ನು ಕಡೆಗಣಿಸಿದ್ದಾರೆ ಎಂದು ತಮ್ಮ ಮೇಲಿರುವ ಆರೋಪವನ್ನು ಅವರು ಒಪ್ಪಿಕೊಂಡಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ. ಅವರು ಈಗ ಪಕ್ಷವನ್ನು ಪುನರ್‌ ಕಟ್ಟುವ ಸಂಕಲ್ಪ ತೊಟ್ಟಂತಿದೆ. ಆದರೆ ಯಾರ ಜೊತೆ ಎಂಬುದು ಸಹ ಮುಖ್ಯವಾಗುತ್ತದೆ. ಪುನಃ ಪವಾರ್‌-ಕಾಂಗ್ರೆಸ್‌ ಜೊತೆ ಹೋಗುತ್ತಾರೆಯೋ ಅಥವಾ ಸ್ವತಂತ್ರವಾಗಿ ಮುನ್ನಡೆಸುತ್ತಾರೆಯೋ ಎಂಬುದು ಸ್ಪಷ್ಟವಾಗಿಲ್ಲ. ಶರದ್‌ ಪವಾರ್‌ ಹಾಗೂ ಕಾಂಗ್ರೆಸ್‌ ಜೊತೆ ಕೈಜೋಡಿಸಿ ಮುನ್ನಡೆದರೆ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳುತ್ತಿರುವ ನಿಜವಾದ ಶಿವಸೇನೆ ಯಾವುದು ಎಂಬ ಪ್ರಶ್ನೆ ಮತ್ತೆ ಎದುರಾಗುತ್ತದೆ. ಇದು ಮುಂದಿನ ಚುನಾವಣೆಯಲ್ಲಿ “ಹಿಂದುತ್ವದ ರಾಜಿ” ಎಂಬ ವಿಷಯವು ಮುನ್ನೆಲೆಗೆ ಬಂದು ಉದ್ಧವ್‌ ಠಾಕ್ರೆಗೆ ತೊಡಕಾಗಬಹುದು, ಶಿಂಧೆ ಬಣದ ಶಿವಸೇನೆಯೇ ಬಾಳಾ ಸಾಹೇಬರ ಶಿವಸೇನೆ ಎಂದೇ ಆಗಬಹುದು. ಇವೆಲ್ಲವೂ ಉದ್ಧವ್‌ ಮುಂದಿನ ನಡೆ ಹಾಗೂ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಮುಂದಿನ ನಡೆ ಮೇಲೆ ನಿಂತಿದೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement