
ಪರಿಪೂರ್ಣ ಸಿದ್ಧತೆಗಳಿಲ್ಲದೆ ತರತುರಿಯಲ್ಲಿ ಅರಬೆಂದ ಸರಕು ಮತ್ತು ಸೇವಾ ತೆರಿಗೆ (GST ) ಕಾಯ್ದೆ ಜಾರಿಯಿಂದ ಐದು ವರ್ಷಗಳ ನಂತರವೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೇಶದ ಹೆಸರಾಂತ ರೇಟಿಂಗ್ ಸಂಸ್ಥೆ ವರದಿ ಮಾಡಿದೆ. ರಾಜ್ಯ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯ ಹಣಕಾಸು ವರ್ಷ 2014-2017 ರಲ್ಲಿ 55.20% ರಷ್ಟಿದ್ದಿದ್ದು 2018-2021ರಲ್ಲಿ 55.40% ಮಾತ್ರ ಇತ್ತು. ದಾಖಲೆಗಳ ಪ್ರಕಾರ GSTಯಿಂದ ರಾಜಸ್ವ ಸಂಗ್ರಹ ಹೆಚ್ಚಾಗಿಲ್ಲವೆಂದು ಸ್ಪಷ್ಟ ಪಡಿಸುವುದರ ಜೊತೆಗೆ GST ತೆರಿಗೆ ಆದಾಯ ಹೆಚ್ಚಿಸುವ ಪ್ರಾಥಮಿಕ ಗುರಿ ಸಾಧಿಸಿಲ್ಲವೆಂದು ವರದಿ ಮಾಡಿದೆ.
“ಒಂದು ರಾಷ್ಟ್ರ – ಒಂದು ತೆರಿಗೆ” ಘೋಷಣೆಯೊಂದಿಗೆ ದೇಶದಲ್ಲಿ ಜುಲೈ 2017 ರಿಂದ ಸಂವಿಧಾನದ 101ನೇ ತಿದ್ದುಪಡಿಯೊಂದಿಗೆ GST ಜಾರಿ ಮಾಡಲಾಯಿತು. ಅದಕ್ಕಿಂತ ಮುಂಚೆ ರಾಜ್ಯಗಳು ಸಂವಿಧಾನದ 7ನೇ ವಿವರ ಪಟ್ಟಿಯ ರಾಜ್ಯ ಪಟ್ಟಿ ಎರಡರ ಅಧಿಕಾರದನ್ವಯ ರಾಜ್ಯಗಳು ಮೌಲ್ಯ ವರ್ಧಿತ ತೆರಿಗೆ, ಮಾರಾಟ – ಖರೀದಿ ತೆರಿಗೆ, ಕೇಂದ್ರ ಮಾರಾಟ ತೆರಿಗೆ, ಪ್ರವೇಶ ತೆರಿಗೆ, ಐಷಾರಾಮಿ ತೆರಿಗೆ, ಮನೋರಂಜನಾ ತೆರಿಗೆ, ಬೆಟ್ಟಿಂಗ್ – ಜೂಜಾಟ ತೆರಿಗೆ, ಇತ್ಯಾದಿಗಳ ಮೂಲಕ ತೆರಿಗೆ ಆದಾಯ ಸಂಗ್ರಹಿಸುತ್ತಿದ್ದವು. ಜಿಎಸ್‌ಟಿ ಅನುಷ್ಠಾನಕ್ಕಾಗಿ ಎಲ್ಲಾ ರಾಜ್ಯಗಳು ತಮ್ಮ ಆದಾಯದ ಮೂಲಗಳನ್ನು ತ್ಯಜಿಸಿದ್ದವು.
GST ಪಾಲಿನ ಜೊತೆಗೆ GST ಜಾರಿಯಿಂದ ರಾಜ್ಯಗಳಿಗೆ ಆಗಬಹುದಾದ 14% ಹಾನಿ ಭರಿಸಲು ಕೇಂದ್ರ ಸರ್ಕಾರ ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಪೂರ್ಣ ಮತ್ತು ಸಕಾಲಕ್ಕೆ ರಾಜ್ಯಗಳಿಗೆ ಪರಿಹಾರ ನೀಡುವ ಭರವಸೆಯೊಂದಿಗೆ ದೇಶದಲ್ಲಿ GST ಜಾರಿಗೆ ಸಂಸತ್ತಿನಲ್ಲಿ ಸಂವಿಧಾನದ 122ನೇ ತಿದ್ದುಪಡಿ ಮಸೂದೆ 2014ರಲ್ಲಿ ದಿನಾಂಕ 19-12-2014ರಂದು ಮಂಡಿಸಲಾಯಿತು. ಲೋಕಸಭೆಯಲ್ಲಿ 08-08-2016 ರಂದು, ರಾಜ್ಯಸಭೆಯಲ್ಲಿ 03-08-2016 ರಂದು ಅಂಗೀಕಾರವಾಗಿ, 08-09-2016ರಂದು ಗೌರವಾನ್ವಿತ ರಾಷ್ಟ್ರಪತಿಗಳಿಂದ ಸಮ್ಮತಿ ಒಪ್ಪಿಗೆ ದೊರೆಯಿತು.
GST ( ರಾಜ್ಯಗಳ ಪರಿಹಾರ ) ಮಸೂದೆ 2017 , ದಿನಾಂಕ 27-03-2017 ರಂದು ಮಂಡಿಸಿ 29-03-2017ರಂದು ಲೋಕಸಭೆಯಲ್ಲಿ ಮತ್ತು 04/06/2017 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟು 01-07-2017 ರಿಂದ ಜಾರಿ ಮಾಡಲಾಯಿತು. ರಾಜ್ಯಗಳಿಗೆ ಸಂವಿಧಾನಬದ್ಧ ಮತ್ತು ಕಾನೂನು ಬದ್ಧ ಪರಿಹಾರ ನೀಡುವ ಖಾತರಿಯಿಂದ ಕೇಂದ್ರ ಸರ್ಕಾರ ಕೆಲವು ವಿಶೇಷ ಸರಕುಗಳ ಮೇಲೆ 290% ರ ವರೆಗೆ ತೆರಿಗೆ ವಿಧಿಸಲು ಅಧಿಕಾರ ಪಡೆದುಕೊಂಡಿತು. ಆದರೆ ಕೇಂದ್ರ, ರಾಜ್ಯಗಳಿಗೆ ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಕೊಡಬೇಕಾದ ಪರಿಹಾರ ನಿಯಮಿತವಾಗಿ ಸಕಾಲಕ್ಕೆ ಮತ್ತು ಪೂರ್ಣ ಪ್ರಮಾಣದಲ್ಲಿ ಕೊಡದೆ ರಾಜ್ಯಗಳ ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು.
ದಿನಾಂಕ 27-08-2020 ರಂದು ನಡೆದ14 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಣಕಾಸು ಸಚಿವರು ಭಗವಂತನ ಆಟ (ಆಕ್ಟ್ ಆಫ್ ಗಾಡ್) ನೆಪ ಹೇಳಿ ಪೂರ್ಣ ಪರಿಹಾರ ಕೊಡುವ ಬದಲಾಗಿ ರಾಜ್ಯಗಳಿಗೆ ಇನ್ನಷ್ಟು ಸಾಲ ಪಡೆಯಲು ಪ್ರಸ್ತಾಪಿಸಿದರು. ಸಂವಿಧಾನಬದ್ಧವಾಗಿ GST ಸೆಸ್ ರಾಜ್ಯಗಳಿಗೆ ಪರಿಹಾರವಾಗಿ ವಿತರಿಸದೆ ಕೇಂದ್ರವು, ಕಾನೂನು ವಿರುದ್ಧವಾಗಿ ಬೇರೆ ಕಡೆ ಬಳಸಿದೆ ಎಂದು ದೇಶದ ಅತ್ಯುನ್ನತ ಲೆಕ್ಕ ಪರಿಶೋಧನಾ ಸಮಿತಿ ಫೆಬ್ರುವರಿ 2020 ರಂದು ವರದಿ ಮಾಡಿದೆ.
ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯಗಳಿಗೆ ಕಡ್ಡಾಯವಾಗಿ ಪರಿಹಾರ ಕೊಡಬೇಕು ಮತ್ತು ಲೆಕ್ಕ ಪರಿಶೋಧನೆ ನಂತರ ವಾರ್ಷಿಕ ಪರಿಹಾರದ ಲೆಕ್ಕಾಚಾರ ಮಾಡಿ ಉಳಿದ ಆದಾಯ ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕು. ಆದರೆ ಮಹಾ ಲೆಕ್ಕಪರಿಶೋಧಕ ಸಂಸ್ಥೆ ಸಿ.ಎ.ಜಿ ಪ್ರಕಾರ ಕೇಂದ್ರ ಹಾಗೆ ಮಾಡಿಲ್ಲವೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಪ್ರಕಾರ 2017-2018ರಲ್ಲಿ ಕೇಂದ್ರ ಸರ್ಕಾರ 62,611 ಕೋಟಿ ರೂ.ಗಳ ಸೆಸ್ ವಸೂಲಿ ಮಾಡಿ ರಾಜ್ಯಗಳಿಗೆ ಕೇವಲ 41,146 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. 2018-2019ರಲ್ಲಿ ಒಟ್ಟು 95,081 ಕೋಟಿ ರೂ.ಗಳಷ್ಟು ಸೆಸ್ ವಸೂಲಿ ಮಾಡಿ ಕೇವಲ 69,275 ಕೋಟಿ ರೂ.ಗಳನ್ನು ಮಾತ್ರ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಎರಡು ವರ್ಷಗಳಲ್ಲಿ ಕೇಂದ್ರ ಒಟ್ಟು ರೂ. 47,271 ಕೋಟಿ ರೂ.ಗಳ ಹೆಚ್ಚುವರಿ ಸಸ್ ರಾಜ್ಯಗಳಿಗೆ ಸಕಾಲದಲ್ಲಿ ವರ್ಗಾಯಿಸಲಿಲ್ಲ. ಕಾನೂನು ಪ್ರಕಾರ ವಸೂಲಾದ ಒಟ್ಟು ಸೆಸ್ ರಾಜ್ಯಗಳಿಗೆ ಆಗಬಹುದಾದ ಹಾನಿ ಪರಿಹಾರಕ್ಕಾಗಿ ಉಪಯೋಗಿಸಲು ಕೇವಲ GST ಪರಿಹಾರ ಸೆಸ್ ನಿಧಿಗೆ ಮಾತ್ರ ವರ್ಗಾಯಿಸಬೇಕು. ಆದರೆ ಕೇಂದ್ರ ಹಾಗೆ ಮಾಡದೆ GST ನಿಯಮ ಪಾಲಿಸಿಲ್ಲವೆಂದು ಗುರುತಿಸಿದೆ. ಸಂವಿಧಾನಬದ್ಧವಾಗಿ GST ಪರಿಹಾರ ನಷ್ಟ ರಾಜ್ಯಗಳಿಗೆ ಕೊಡುವುದು ಕೇಂದ್ರದ ಜವಾಬ್ದಾರಿಯಾಗಿದ್ದರೆ ಪರಿಹಾರ ಪಡೆಯುವುದು ರಾಜ್ಯಗಳ ಸಂವಿಧಾನಬದ್ಧ ಹಕ್ಕಾಗಿರುತ್ತದೆ.
ಕಲಂ 18ರ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳು ಸಮನಾಗಿ 50-50ರ ಅನುಪಾತದಲ್ಲಿ ಹಂಚಿಕೊಳ್ಳಬೇಕು. ಆದರೆ ಈ ಪ್ರಕ್ರಿಯೆಯಲ್ಲಿ ಜಿಎಸ್‌ಟಿ ಕೌನ್ಸಿಲ್ ಅದರಂತೆ ನಡೆದುಕೊಳ್ಳದೆ ಒಕ್ಕೂಟ ವ್ಯವಸ್ಥೆಗೆ ವ್ಯತರಿಕ್ತವಾಗಿ ನಡೆದುಕೊಂಡಿದೆ. ಕೇಂದ್ರ ಆರ್ಥಿಕ ಕಾರ್ಯದರ್ಶಿ ಸಂಸದೀಯ ಸಮಿತಿಗೆ, ರಾಜ್ಯಗಳಿಗೆ ಪರಿಹಾರ ಕೊಡಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದರೆ ವರದಿಗಳ ಪ್ರಕಾರ ಭಾರತದ ಅಟರ‍್ನಿ ಜನರಲ್ ಕೇಂದ್ರ, ರಾಜ್ಯಗಳಿಗೆ ಪರಿಹಾರ ನೀಡುವ ನಿರ್ಬಂಧ ಹೊಂದಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರತಿಪಾದಿಸಲಾಗಿದೆ.
ದೇಶದ ಹೆಸರಾಂತ ರೇಟಿಂಗ್ ಏಜೆನ್ಸಿ, ಇಂಡಿಯಾ ರೇಟಿಂಗ್ ಏಜೆನ್ಸಿ ವರದಿ ಪ್ರಕಾರ, ರಾಜ್ಯ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯ ಹಣಕಾಸು ವರ್ಷ 2018-2021ರಲ್ಲಿ 55.40% ಇದ್ದಿದ್ದು 2014-2017ರಲ್ಲಿ 55.20% ರಷ್ಟಿದ್ದಿತು. ಈ ದಾಖಲೆಗಳ ಪ್ರಕಾರ GST ಜಾರಿಯಿಂದ ರಾಜಸ್ವ ಸಂಗ್ರಹ ಹೆಚ್ಚಾಗಿಲ್ಲವೆಂದು ಸ್ಪಷ್ಟ ಪಡಿಸುವುದರ ಜೊತೆಗೆ ಜಿಎಸ್‌ಟಿ ತೆರಿಗೆ ಆದಾಯ ಹೆಚ್ಚಿಸುವ ಪ್ರಾಥಮಿಕ ಗುರಿ ಸಾಧಿಸಿಲ್ಲವೆಂದು ವಿವರಿಸಿದೆ.
GST ನಿಯಮಗಳ ಪ್ರಕಾರ IGST (ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ) ಕೇಂದ್ರ ಹಾಗೂ ರಾಜ್ಯಗಳು ಸಮಾನ ಅನುಪಾತದಲ್ಲಿ ಹಂಚಿಕೆ ಆಗಬೇಕೆಂದು ಸ್ಪಷ್ಟಪಡಿಸಿದೆ. ಜೊತೆಗೆ ಮತ್ತೆ 42% ಪಾಲು 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ರಾಜ್ಯಗಳಿಗೆ ಕೊಡ ಮಾಡುವ ಬಾಧ್ಯತೆ ಕೇಂದ್ರದ ಮೇಲಿದೆ. ಆದರೆ ಕೇಂದ್ರ, ರಾಜ್ಯಗಳ ಪಾಲು ಮತ್ತು ಪರಿಹಾರ ನಿಯಮ ಬದ್ಧವಾಗಿ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಲಿಲ್ಲ.
ಈಗ, GST (ರಾಜ್ಯಗಳ ಪರಿಹಾರ) ಸೆಸ್ ಕಾಯ್ದೆ ಅವಧಿ ಇದೇ 30 ಜೂನ್ 2022 ಮುಗಿದಿದೆ. ಕೇಂದ್ರ, ತೆರಿಗೆ ವಸೂಲಿ ಮಾಡಿ ತನ್ನ ಆದಾಯ ಹೆಚ್ಚಿಸಿಕೊಳ್ಳಲು 31-03-2026 ರ ವರೆಗೆ ವಿಸ್ತರಿಸಿಕೊಂಡಿದೆ. ಆದರೆ ರಾಜ್ಯಗಳ ನಷ್ಟ ಪರಿಹಾರಕ್ಕಾಗಿಯೇ ರೂಪಿಸಿದ ಕಾನೂನು ರಾಜ್ಯಗಳಿಗೆ ಪರಿಹಾರ ಮುಂದುವರಿಸದೆ ರಾಜ್ಯಗಳಿಗೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಅನ್ಯಾಯ ಮಾಡಿದೆ.
2022-23ನೇ ಸಾಲಿನ ಕೇಂದ್ರ ಮುಂಗಡ ಪತ್ರ ಮಂಡನೇ ಸಂದರ್ಭದಲ್ಲಿ ನಡೆದ ಕೇಂದ್ರ ಹಣಕಾಸು ಸಚಿವರು ಮತ್ತು ರಾಜ್ಯ ಹಣಕಾಸು ಸಚಿವರ ಸಭೆಯಲ್ಲಿ ಅನೇಕ ರಾಜ್ಯಗಳ ಸಚಿವರು GST (ರಾಜ್ಯಗಳ ಪರಿಹಾರ) ಕಾಯ್ದೆ 2017, ರಾಜ್ಯಗಳ ಪರಿಹಾರಕ್ಕೆ ಮುಂದುವರಿಸಬೇಕೆಂದು ಒತ್ತಾಯಿಸಿದರು. ಆದರೆ ಕೇಂದ್ರ ಹಣಕಾಸು ಸಚಿವರು ರಾಜ್ಯಗಳಿಗೆ ಪರಿಹಾರ ಮುಂದುವರಿಸಲಿಕ್ಕೆ ಆಗುವುದಿಲ್ಲವೆಂದು ತಿಳಿಸಿದರು. ಇದರಿಂದ ರಾಜ್ಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಚಿಂತೆಗೀಡು ಮಾಡಿದೆ.
15ನೇ ಹಣಕಾಸು ಆಯೋಗ ಒಕ್ಕೂಟ ತೆರಿಗೆ ರಾಶಿಯಲ್ಲಿ ಕರ್ನಾಟಕದ ಪಾಲು 1.066% ರಷ್ಟು ಕಡಿತ ಮಾಡಿ ಅನ್ಯಾಯ ಎಸಿಗಿತು. ಆಯೋಗ ಕರ್ನಾಟಕಕ್ಕೆ 2020-2021ರಲ್ಲಿ 5,495 ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸ್ಸನ್ನು ರಾಜ್ಯಸಭೆಯಲ್ಲಿ ಕರ್ನಾಟಕವನ್ನೇ ಪ್ರತಿನಿಧಿಸುತ್ತಿರುವ ಹಣಕಾಸು ಸಚಿವರು ತಿರಸ್ಕರಿಸಿದರು.
ಈ ಹಿನ್ನೆಲೆಯಲ್ಲಿ ಈಗ “ಒಂದು ದೇಶ – ಒಂದು ತೆರಿಗೆ” ಕಲ್ಪನೆಗೆ ಪರ್ಯಾಯ ಚಿಂತನೆಗೆ ನಾಂದಿ ಆಗಬಹುದಾಗಿದೆ. ತಮ್ಮ ಆದಾಯ ನಷ್ಟ ಭರಿಸಲು 2017 ರ ಮುಂಚಿನ ತೆರಿಗೆ ಪದ್ಧತಿ ಮರುಜಾರಿಯ ಚಿಂತನೆ ಹುಟ್ಟು ಹಾಕಿದೆ.
ಇದಕ್ಕೆ ಪೂರಕ ಎಂಬಂತೆ 19-05-2022 ರ ದೇಶದ ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪು ರಾಜ್ಯಗಳಿಗೆ ಆರ್ಥಿಕ ಸ್ವಾತಂತ್ರ್ಯ ಸಿಗಬಹುದಾದ ಆಶಾ ಭಾವನೆಗೆ ಕಾರಣವಾಗಿದೆ. ತೀರ್ಪು, ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳು ಶಾಸನ ರೂಪಿಸಲು ಸಮಾನ ಅಧಿಕಾರ ಹೊಂದಿವೆ. ಜಿಎಸ್‌ಟಿ ಕೌನ್ಸಿಲ್ ಶಿಫಾರಸುಗಳು ರಾಜ್ಯಗಳ ಮೇಲೆ ಬಂಧನಕಾರಿಯಾಗದೆ ಕೇವಲ ಪ್ರೇರೇಪಿಸುವ ಮೌಲ್ಯ ಮಾತ್ರ ಹೊಂದಿದೆ. ಆದ್ದರಿಂದ ಒಕ್ಕೂಟ ವ್ಯವಸ್ಥೆಯಲ್ಲಿ ಪರಿಹಾರ ಸಾಧಿಸಲು GST ಕೌನ್ಸಿಲ್ ಸಾಮರಸ್ಯದಿಂದ ಕೆಲಸ ನಿರ್ವಹಿಸಬೇಕೆಂದು ಅಭಿಪ್ರಾಯಪಟ್ಟಿದೆ.
ಸಂವಿಧಾನದ 246ರ ವಿಧಿ ಪ್ರಕಾರ ಕೇಂದ್ರ ಮತ್ತು ರಾಜ್ಯಗಳಿಗೆ ಕಾನೂನು ಜಾರಿಗೊಳಿಸಲು ಸಮಾನ ಅಧಿಕಾರ ನೀಡುತ್ತದೆ. ಆಕ್ಟ್ ಆಫ್ ಗಾಡ್ ನೆಪ ಹೇಳಿ ರಾಜ್ಯಗಳಿಗೆ ಸಾಲದ ಹೊರೆ ಹೊರಲು ಹೇಳುವಂತಹದು GST ಉದ್ದೇಶ ಎಂದಿಗೂ ಇರಲಿಲ್ಲ.
ಪರಿಸ್ಥಿತಿಗಳು ಹೀಗೆ ಮುಂದುವರಿದರೆ ರಾಜ್ಯಗಳು ತಮ್ಮ ಆದಾಯದ ಮೂಲ ಹಕ್ಕು ಪುನರ್ ಪಡೆದುಕೊಳ್ಳುವ ದಿಶೆಯಲ್ಲಿ ಪುನರ್ವಿಚಾರ ಮಾಡಬೇಕಾದ ಪರಿಸ್ಥಿತಿ ಬರಬಹುದಾಗಿದೆ. ಇದು ಕೇವಲ ಪೂರ್ವಾಪರ ವಿಚಾರವಿಲ್ಲದೆ ಪರಿಪೂರ್ಣ ಸಿದ್ಧತೆಗಳಿಲ್ಲದೆ ಅರಬೆಂದ GST ಜಾರಿಯಿಂದ ಉದ್ದೇಶ ಈಡೇರಲಿಲ್ಲ ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ “ಒಂದು ರಾಷ್ಟ್ರ – ಒಂದು ತೆರಿಗೆ” ಪರಿಕಲ್ಪನೆ ಬದಲಾಗುವ ಸಾಧ್ಯತೆ ಇದೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ