ಭೋಪಾಲ್: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಮಧ್ಯಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇಂದ್ರ ಸಚಿವ ಜ್ಯೋತಿಯಾಧಿತ್ಯ ಸಿಂಧಿಯಾ ಅವರ ಆಪ್ತ ಬೈಜನಾಥ್ ಸಿಂಗ್ ಯಾದವ್ ಬಿಜೆಪಿ ತೊರೆದು ತಮ್ಮ ಮೊದಲಿನ ಪಕ್ಷ ಕಾಂಗ್ರೆಸ್ಸಿಗೆ ಮರಳಿದ್ದಾರೆ. ಆದರೆ ಅವರು ಸೇರ್ಪಡೆಯಾಗಿರುವ ರೀತಿಯ ಮೂಲಕ ಅವರು ಗಮನ ಸೆಳೆದಿದ್ದಾರೆ. ಅವರು ಮಧ್ಯಪ್ರದೇಶದ ಶಿವಪುರಿಯಿಂದ 400 ಕಾರುಗಳ ಬೆಂಗಾವಲು ಪಡೆಯೊಂದಿಗೆ ಸೈರೆನ್ ಹೊಡೆದುಕೊಂಡು ಹೋಗಿ ಸುಮಾರು 300 ಕಿಮೀ ಭೋಪಾಲಕ್ಕೆ ಪ್ರಯಾಣ ಮಾಡಿ ಕಾಂಗ್ರೆಸ್ ಸೇರಿದ್ದಾರೆ…!
ಶಿವಪುರಿಯಲ್ಲಿ ರಾಜಕೀಯ ಪ್ರಭಾವ ಹೊಂದಿರುವ ಬೈಜನಾಥ್ ಸಿಂಗ್ ಅವರು 2020 ರ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯದ ಸಮಯದಲ್ಲಿ ಕಮಲನಾಥ ಸರ್ಕಾರ ಉರುಳಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ಸಂದರ್ಭದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜೊತೆ ಬಿಜೆಪಿಗೆ ಸೇರಿದ್ದರು. ಸಿಂಧಿಯಾ ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ಬೈಜನಾಥ್ ಸಿಂಗ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು, ಆದರೆ ಟಿಕೆಟ್ ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.
ಬೈಜನಾಥ್ ಸಿಂಗ್ ತಮ್ಮ ಪಕ್ಷ ಬದಲಾವಣೆಯನ್ನು ಗುರುತಿಸುವಂತಾಗಲು ಶಿವಪುರಿಯಿಂದ ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ ಹೋಗಲು 400 ಕಾರುಗಳ ಬೆಂಗಾವಲು ಪಡೆಯನ್ನು ಕರೆದೊಯ್ದಿದ್ದಾರೆ. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಹೋಗುತ್ತಿರುವ ವೀಡಿಯೊ ವೈರಲ್ ಆಗಿದೆ.
ಹಿರಿಯ ಕಾಂಗ್ರೆಸ್ ನಾಯಕರಾದ ಕಮಲನಾಥ ಮತ್ತು ದಿಗ್ವಿಜಯ ಸಿಂಗ್ ಅವರು ಬೈಜನಾಥ ಸಿಂಗ್ ಅವರನ್ನು ಪಕ್ಷಕ್ಕೆ ಮರಳಿ ಸ್ವಾಗತಿಸಿದರು. ಶಿವಪುರಿ ಮೂಲದ ಯಾದವ್ ಮತ್ತು ಅವರ ಬೆಂಬಲಿಗರನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲನಾಥ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಸಾಲು ಸಾಲು ಬೆಂಗಾವಲು ಕಾರುಗಳು ಸೈರನ್ ಹಾಕಿಕೊಂಡು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಿಡಿಕಾರಿದೆ. ಕಾನೂನಿನ ಪ್ರಕಾರ, ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸೈರನ್ ಬಳಸಲು ಅನುಮತಿ ಇದೆ. ಇವುಗಳಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ದಳ ಮತ್ತು ಕೆಲವು ಸಂದರ್ಭಗಳಲ್ಲಿ ಪೊಲೀಸರು ಸೇರಿದ್ದಾರೆ. ಸೈರನ್‌ಗಳ ಬಳಕೆ ಕಾಂಗ್ರೆಸ್‌ನ ಊಳಿಗಮಾನ್ಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದೆ.
ನಿಮ್ಮ ಕಾಮೆಂಟ್ ಬರೆಯಿರಿ