ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ 10 ಕಿಮೀ ದೂರದ ತಂಡ್ರಕುಳೀಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದು ಬೃಹತ್ ಬಂಡೆಗಲ್ಲು ರಾಷ್ಟ್ರೀಯ ಹೆದ್ದಾರಿಯ ಕೆಳಗೇ ಇರುವ ಗಣೇಶ ತುಳಸು ಅಂಬಿಗ ಎಂಬವರ ಮನೆಗೆ ಅಪ್ಪಳಿಸಿದೆ. ಕುಟುಂಬಸ್ಥರು ಮನೆಯಲ್ಲಿದ್ದಾಗಲೇ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಶಬ್ದಕೇಳಿ ಮನೆಯವರು ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಬಂಡೆ ಅಪ್ಪಳಿಸಿದ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಬೃಹತ್ ಬಂಡೆಗಲ್ಲು ಬಂದು ಅಪ್ಪಳಿಸಿದ್ದರಿಂದ ಮನೆಯ ಗೋಡೆಗೆ ಬಹಳ ಹಾನಿಯಾಗಿದೆ.
ಜೂನ್ ೨೮ರಂದು ಮನೆಯಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದ್ದು, ಈಗ ಸಿಂಗಾರಗೊಂಡಿದ್ದ ಮನೆಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಾಸಕ ದಿನಕರ ಶೆಟ್ಟಿ ಸಹ ಮಂಗಳವಾರ ಸಂಜೆ ತಂಡ್ರಕುಳಿ ಪ್ರದೇಶಕ್ಕೆ ಭೇಟಿ ನೀಡೀ ಪರಿಶೀಲಿಸಿದ್ದಾರೆ, ಗುಡ್ಡ ಕುಸಿತದಿಂದ ಜನರಿಗೆ ಉಂಟಾಗುವ ತೊಂದರೆ ತಪ್ಪಿಸಲು ಅಧಿಕಾರಿಯೊಂದಿಗೆ ಚರ್ಚಿಸಿದರು.
ಈ ಹಿಂದಿನಿಂದಲೂ ತಂಡ್ರಕುಳಿಯಲ್ಲಿ ಮಳೆಗಾಲದ ಅವಧಿಯಲ್ಲಿ ಗುಡ್ಡ ಕುಸಿತ ಸಾಮಾನ್ಯ ಎಂಬಂತಾಗಿದೆ. ಚತುಷ್ಪಥ ಹೆದ್ದಾರಿ ನಿರ್ಮಾಣದ ನಂತರ ಗುಡ್ಡ ಕುಸಿತ ಪ್ರಮಾಣ ಹೆಚ್ಚುತ್ತಿದೆ, ಇದಕ್ಕೆ ಶಾಶ್ವತ ಪರಿಹಾರ ಆಗಬೇಕಾಗಿದೆ ಎಂದು ಸ್ಥಳೀಯರು ಶಾಸಕರನ್ನು ಒತ್ತಾಯಿಸಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ