ಸಿದ್ದಾಪುರ: ಯಕ್ಷಗಾನದ ಭಾಗವತ ಕೆ.ಪಿ.ಹೆಗಡೆಗೆ ‘ಅನಂತ ಶ್ರೀ’ ಪ್ರಶಸ್ತಿ ಪ್ರದಾನ

ಸಿದ್ದಾಪುರ: ಓರ್ವ ನಿಗರ್ವಿ ಕಲಾವಿದ‌ನ ಹೆಸರಿನಲ್ಲಿ ನೀಡುವ, ಒಡನಾಡಿ ಹೆಸರಿನ ಪ್ರಶಸ್ತಿ ಸಿಕ್ಕಿದ್ದನ್ನು ಅನಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಪ್ರಸಿದ್ಧ ಯಕ್ಷಗಾನ ಭಾಗವತ ಹಾಗೂ ಪ್ರಾಚಾರ್ಯ ಕೆ.ಪಿ.ಹೆಗಡೆ ಗೋಳಗೋಡ ಹೇಳಿದ್ದಾರೆ.
ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರಿನ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ ನೀಡುವ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ನೀಡುವ ʼಅನಂತಶ್ರೀ ಪ್ರಶಸ್ತಿʼ ಸ್ವೀಕರಿಸಿ ಮಾತನಾಡಿದರು.
ನನಗೆ ಅನೇಕ ಕಡೆ ಸಮ್ಮಾನ ಪುರಸ್ಕಾರ ಆಗಿದೆ. ಆದರೆ, ಹೇರೂರಿನ ದೇವಾಲಯದ ಸನ್ನಿಧಿಯಲ್ಲಿ ಅನಂತ ಹೆಗಡೆ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಅತ್ಯಂತ ಖುಷಿಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಭೀಮಣ್ಣ ನಾಯ್ಕ ಅವರು, ಎಲ್ಲೆ ಇದ್ದರೂ ನಮ್ಮ ಕಲೆಯನ್ನು ನಾವು ಉಳಿಸಿಕೊಳ್ಳಬೇಕು. ಎಲ್ಲೂ ಇಲ್ಲದ ಈ ಅಪರೂಪದ ಯಕ್ಷಗಾನದ ಕಲೆಯನ್ನು ಎಲ್ಲರೂ ಉಳಿಸಿಕೊಂಡು ಹೋಗಬೇಕು. ಮುಂದಿನ ಯುವ ಪೀಳಿಗೆಗೆ ಯಕ್ಷಗಾನದ ದಾರಿ ತೋರಿಸಬೇಕು ಎಂದರು. ಕಲೆಯ ಬೆಳವಣಿಗೆಯಲ್ಲಿ ಕೆ.ಪಿ.ಹೆಗಡೆ ಅವರು ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿದ್ದಕ್ಕೆ ಅವರಿಗೆ ಅಭಿನಂದಿಸುತ್ತೇನೆ ಹಾಗೂ ಅವರ ಯಕ್ಷಗಾನದ ಸೇವೆಗೆ ಶಿರಬಾಗುತ್ತೇನೆ. ಕಲೆಯ ಆರಾಧಕರನ್ನು, ಸಮಾಜ ಸೇವಕರನ್ನು ಗೌರವಿಸಿ ಅಭಿನಂದಿಸಿ ಪ್ರವೃತ್ತಿ ಹೆಚ್ಚಬೇಕು. ಮುಂದಿನ ಪೀಳಿಗೆಗೆಗೆ ಕಲೆಯ ದಾಟಿಸಬೇಕು. ಯಕ್ಷಗಾನ ಉಳಿಸಿ ಬೆಳೆಸಲು ಸರ್ಕಾರದ ನೆರವು ನೀಡಲು ಮುಂದಾಗುತ್ತೇವೆ. ಅಕಾಡೆಮಿ, ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ನೆರವಾಗುತ್ತೇವೆ ಎಂದರು.

ಪ್ರಮುಖ ಸುದ್ದಿ :-   ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ: ಆರೆಸ್ಸೆಸ್

ಅಭಿನಂದನಾ ನುಡಿ ಆಡಿದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಅವರು, ವೇಷಧಾರಿಗಳು ಪಾತ್ರಧಾರಿಗಳಾಗಬೇಕು. ಅನಂತ ಹೆಗಡೆ ಅವರು, ಚೌಕಿಯಲ್ಲಿ ಇದ್ದು ಕಲಾವಿದರಿಗೆ ರಂಗಸ್ಥಳದ ನಡೆಯ ಬಗ್ಗೆ ತಿಳಿಸುತ್ತಿದ್ದರು. ಭಾಗವತರಾಗಿದ್ದವರು ಪ್ರಾಚಾರ್ಯರಾದವರು ಕೆ‌.ಪಿ.ಹೆಗಡೆಯವರು. ಅವರಿಗೆ ಸಮ್ಮಾನಿಸುವುದು ಖುಷಿಯಾಗಿದೆ. ಕೆ.ಪಿ.ಹೆಗಡೆಯವರು ಅಪರೂಪದವರು, ಯಕ್ಷಗಾನಕ್ಕೆ ಬೇಕಾದವರು. ಕಲೆಯನ್ನು, ಪ್ರೀತಿಯನ್ನು ಹಂಚಿದವರು ಎಂದರು.
ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮಾತನಾಡಿ, ಯಕ್ಷಗಾನ ಹಾಗೂ ತಾಳಮದ್ದಲೆ ಜನರ ಸಂಸ್ಕೃತಿಯ ಬೇರು. ಯಕ್ಷಗಾನ ಸಮಾಜದಲ್ಲಿ ಮನರಂಜನೆ ಜೊತೆಗೆ ಆದರ್ಶವನ್ನೂ ನೀಡುತ್ತದೆ. ಎಲ್ಲ ಕಲಾವಿದರುಗಳ ಹೆಸರು ಕ್ರೂಢೀಕರಣ ಮಾಡಿ ಸರ್ಕಾರವೇ ಕಂತು ಪಾವತಿಸಿ ವಿಮೆ ಮಾಡಿಸಬೇಕು. ಈ ಮೂಲಕ ಕಲಾವಿದರಲ್ಲಿ ಜೀವನೋತ್ಸಾಹ ಉಳಿಸಬೇಕು ಎಂದರು.

ಅನಂತಮೂರ್ತಿ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಯಕ್ಷಗಾನಕ್ಕೆ ವಿಶೇಷ ಸ್ಥಾನ ಮಾನ ಇದೆ. ಅದು ನಮ್ಮ ಸಂಸ್ಕೃತಿ. ಅದರ ಉಳಿವಿಗೆ ಎಲ್ಲರೂ ಸಹಕಾರ ನೀಡ ಬೇಕು ಎಂದರು.
ಸಿದ್ದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ನಾದಲೋಕ, ಭಾವ ಲೋಕ, ಜ್ಞಾನ ಲೋಕ ಒಳಗೊಂಡ ಕಲೆ ಯಕ್ಷಗಾನ ಎಂದರು. ಅಧ್ಯಕ್ಷತೆ ವಹಿಸಿದ್ದ ವಿ.ಎಂ.ಭಟ್ಟ ಸಿದ್ದಾಪುರ ಅವರು, ಯಕ್ಷಗಾನ ಕ್ಷೇತ್ರ ಸಮಾಜಕ್ಕೆ ಅನನ್ಯ ಕೊಡುಗೆ‌ ನೀಡುತ್ತಿದೆ ಎಂದರು.
ದೇವಸ್ಥಾನದ ಅಧ್ಯಕ್ಷ ನರಸಿಂಹಮೂರ್ತಿ ಹೆಗಡೆ ತ್ಯಾರಗಲ್, ಲಲಿತಾ ಹೆಗಡೆ ಗೋಳಗೋಡ, ಪ್ರೀತಾ ಹೆಗಡೆ ಕೊಳಗಿ, ರಮೇಶ ಹೆಗಡೆ, ಗಾಯತ್ರಿ ಭಟ್ಟ ಇತರರು ಇದ್ದರು.
ಭಾಗವತ ಕೇಶವ ಹೆಗಡೆ ಕೊಳಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಆರ್.ಭಾಗವತ ತ್ಯಾರಗಲ್ ಸಮ್ಮಾನ ಪತ್ರ ವಾಚಿಸಿದರು. ಗಣೇಶ ಹೆಗಡೆ ವಂದಿಸಿದರು. ಗಣಪತಿ ಹೆಗಡೆ ನಿರೂಪಿಸಿದರು. ಇದೇ ವೇಳೆ ವಿವಿಧ ಸಂಘಟನೆಗಳ ಪ್ರಮುಖ ರು ಕೆ.ಪಿ.ಹೆಗಡೆ ದಂಪತಿಯನ್ನು ಗೌರವಿಸಿದರು.

ಪ್ರಮುಖ ಸುದ್ದಿ :-   ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ವೀಡಿಯೊ ಬಹಿರಂಗ

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement