ಮೊಹಮ್ಮದ್ ಡೀಫ್ : ಹಲವು ಬಾರಿ ಇಸ್ರೇಲ್‌ ದಾಳಿಯಿಂದ ತಪ್ಪಿಸಿಕೊಂಡ ಹಮಾಸ್‌ನ ಈ ಹೊಸ ‘ಒಸಾಮಾ ಬಿನ್ ಲಾಡೆನ್’ ಯಾರು..?

ಉಗ್ರಗಾಮಿ ಗುಂಪು ಹಮಾಸ್ ನೂರಾರು ಜನರ ಜೀವವನ್ನು ಬಲಿತೆಗೆದುಕೊಂಡ ಅಭೂತಪೂರ್ವ ದಾಳಿ ನಡೆಸಿ ನೂರಾರು ಇಸ್ರೇಲಿ ನಾಗರಿಕರನ್ನು ಕೊಂದ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಿಂಸಾಚಾರವು ಉಲ್ಬಣಗೊಂಡಿದೆ. ಹಮಾಸ್‌ನ ಮಿಲಿಟರಿ ವಿಭಾಗದ ನಾಯಕ ಮೊಹಮ್ಮದ್ ಡೀಫ್ ಇಸ್ರೇಲ್ ವಿರುದ್ಧ ‘ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್’ ಎಂದು ಕರೆದ ಹಮಾಸ್‌ ದಾಳಿಯು ಶನಿವಾರ ಪ್ರಾರಂಭವಾಯಿತು.
ಈವರೆಗೆ ಆಗಿದ್ದು ಸಾಕು ಎಂದು ಹೇಳಲು ನಾವು ನಿರ್ಧರಿಸಿದ್ದೇವೆ. ನಾವು ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್‌ನ ಪ್ರಾರಂಭವನ್ನು ಘೋಷಿಸುತ್ತೇವೆ ಮತ್ತು ಶತ್ರುಗಳ ಸ್ಥಾನಗಳು, ವಿಮಾನ ನಿಲ್ದಾಣಗಳು ಮತ್ತು ಮಿಲಿಟರಿ ಕೋಟೆಗಳನ್ನು ಗುರಿಯಾಗಿಸಿಕೊಂಡ ಮೊದಲ ದಾಳಿಯು 5,000 ಕ್ಷಿಪಣಿಗಳು ಮತ್ತು ಶೆಲ್‌ಗಳನ್ನು ಮೀರಿದೆ ಎಂದು ನಾವು ಘೋಷಿಸುತ್ತೇವೆ” ಎಂದು ಇಸ್ರೇಲ್ ಮೇಲೆ ಅದರ ಮಾರಕ ದಾಳಿಯ ನಂತರ ಹಮಾಸ್ ನಾಯಕ ಶನಿವಾರ ಅಪರೂಪದ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಸಂಘರ್ಷದ ಇತ್ತೀಚಿನ ದಾಳಿಯಲ್ಲಿ ಗಾಜಾದಲ್ಲಿ ಇಸ್ರೇಲಿ ಗಡಿಯಲ್ಲಿ ಹೆಚ್ಚುತ್ತಿರುವ ಹಗೆತನ ಮತ್ತು ಪಶ್ಚಿಮ ದಂಡೆಯ ಆಕ್ರಮಿತ ಪ್ರದೇಶದಲ್ಲಿ ಭಾರೀ ಹೋರಾಟದ ನಂತರ ಈ ಹೇಳಿಕೆ ಬಂದಿದೆ. ಮಹಿಳೆಯರ ಮೇಲೆ ಇಸ್ರೇಲಿ ಪಡೆಗಳ ದಾಳಿಗಳು, ಜೆರುಸಲೆಂನ ಅಲ್-ಅಕ್ಸಾ ಮಸೀದಿಯ ‘ಅಪವಿತ್ರತೆ’ ಮತ್ತು ಗಾಜಾದ ನಡೆಯುತ್ತಿರುವ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಇತ್ತೀಚಿನ ದಾಳಿಯನ್ನು ನಡೆಸಲಾಗಿದೆ ಎಂದು ಹಮಾಸ್ ಗುಂಪಿನ ನಾಯಕ ಹೇಳಿಕೊಂಡಿದ್ದಾನೆ.

ಅಂದಿನಿಂದ, ಈವರೆಗೆ ಇಸ್ರೇಲ್‌ನಲ್ಲಿ 900 ಮತ್ತು ಗಾಜಾದಲ್ಲಿ 700 ಕ್ಕೂ ಹೆಚ್ಚು ಜನರು ಸೇರಿದಂತೆ ಎರಡೂ ಕಡೆಗಳಲ್ಲಿ 1,600 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ. 100 ಕ್ಕೂ ಹೆಚ್ಚು ಜನರನ್ನು ಹಮಾಸ್ ಉಗ್ರಗಾಮಿಗಳು ಸೆರೆಹಿಡಿದಿದ್ದಾರೆ, ಅಲ್ಲದೆ, ಇಸ್ರೇಲ್‌ ಎಚ್ಚರಿಕೆ ನೀಡದೆ ಗಾಜಾ ನಾಗರಿಕರ ಮೇಲೆ ವೈಮಾನಿಕ ದಾಳಿ ನಡೆಸಿದರೆ ಈ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಮೊಹಮ್ಮದ್ ಡೀಫ್ ಬಗ್ಗೆ ಬಹಳ ಕಡಿಮೆ ತಿಳಿದಿದೆ, ಆತ ‘ನೆರಳಿನ ವ್ಯಕ್ತಿ (shadowy figure)’ ಎಂದು ಹೇಳುತ್ತಾರೆ ಮತ್ತು ವಿರಳವಾಗಿ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಾನೆ. ಇಸ್ರೇಲ್ ವಿರುದ್ಧ ನಿಮಿತ ದಾಳಿಗಳಿಗೆ ಆತನ ಕೊಡುಗೆ ಉಲ್ಲೇಖಿಸಿ ಹಮಾಸ್ ಮಿಲಿಟರಿ ನಾಯಕನನ್ನು ಹೊಸ ‘ಒಸಾಮಾ ಬಿನ್ ಲಾಡೆನ್’ ಎಂದು ಕರೆಯಲಾಗುತ್ತದೆ.

ಹಾಗಾದರೆ ಮೊಹಮ್ಮದ್ ಡೀಫ್ ಯಾರು…?
ಮೊಹಮ್ಮದ್ ಡೀಫ್, ಪ್ಯಾಲೇಸ್ಟಿನಿಯನ್ ಉಗ್ರಗಾಮಿ, 2002 ರಲ್ಲಿ ಹಮಾಸ್ ಮಿಲಿಟರಿ ವಿಭಾಗದ ನಾಯಕನಾದ. ಆತ 1965 ರಲ್ಲಿ ಗಾಜಾದ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ ಈತನ ಹೆಸರು ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ. ನಂತರ ಆ ಪ್ರದೇಶವನ್ನು ಈಜಿಪ್ಟ್ ಆಕ್ರಮಿಸಿಕೊಂಡಿತು ಮತ್ತು ಬಡತನದ ಕುಟುಂಬದಲ್ಲಿ ಬೆಳೆದ. ಕೆಲವು ವರದಿಗಳ ಪ್ರಕಾರ, ಆತನ ಕುಟುಂಬದ ಕೆಲವು ಸದಸ್ಯರು ಸಾಂದರ್ಭಿಕವಾಗಿ ಶಸ್ತ್ರಸಜ್ಜಿತ ಪ್ಯಾಲೇಸ್ಟಿನಿಯನ್ನರ ದಾಳಿಗಳಲ್ಲಿ ಭಾಗವಹಿಸಿದ್ದರು.
1987ರಲ್ಲಿ ಹಮಾಸ್ ಗುಂಪಿನ ಸ್ಥಾಪನೆಯ ನಂತರ, ಆತ 1990ರಲ್ಲಿ ಸಶಸ್ತ್ರ ಗುಂಪಿಗೆ ಸೇರಿದ. ಮತ್ತು ಅರೇಬಿಕ್ ಭಾಷೆಯ ‘ಡೀಫ್’ (ಅತಿಥಿ) ಎಂಬ ಪದ ಅಳವಡಿಸಿಕೊಂಡ. ಹಮಾಸ್ ನಾಯಕ ಅತ್ಯಂತ ಲೊ-ಪ್ರೊಫೈಲ್ ಜೀವನಕ್ಕೆ ಹೆಸರುವಾಸಿಯಾಗಿದ್ದಾನೆ ಮತ್ತು ಪ್ಯಾಲೇಸ್ಟಿನಿಯನ್ ಜನರಲ್ಲಿ ಮರೆಯಾಗಿದ್ದಾನೆ. ಆತ ವಿವಿಧ ಪಾಸ್‌ಪೋರ್ಟ್‌ಗಳು ಮತ್ತು ಗುರುತುಗಳನ್ನು ಬಳಸುತ್ತಾನೆ ಮತ್ತು ನಿರಂತರವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುತ್ತಿರುತ್ತಾನೆ.
ಮೊಹಮ್ಮದ್‌ ಡೀಫ್ ಹಮಾಸ್ ಭಯೋತ್ಪಾದಕ ಯಾಹ್ಯಾ ಅಯಾಶ್ ಎಂಬಾತನ ಅಡಿಯಲ್ಲಿ ತರಬೇತಿ ಪಡೆದಿದ್ದಾನೆ ಮತ್ತು ಹಲವಾರು ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿದ್ದಾನೆ, ಇಸ್ರೇಲಿ ಸೈನಿಕರನ್ನು ಅಪಹರಿಸುವುದು ಮತ್ತು ಇಸ್ರೇಲ್‌ ವಿರುದ್ಧ ರಾಕೆಟ್ ದಾಳಿಗಳನ್ನು ಆಯೋಜನೆ ಮಾಡುವುದು ಮೊದಲಾದವುಗಳಲ್ಲಿ ಈತ ಭಾಗಿಯಾಗಿದ್ದಾನೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಶಾಂತಿ ಒಪ್ಪಂದಕ್ಕೆ ಈ ಮೊಹಮ್ಮದ್‌ ಡೀಫ್ ದೊಡ್ಡ ಅಡಚಣೆಯಾಗಿದ್ದಾನೆ ಎಂದು ಹಲವರು ವಿಶ್ಲೇಷಿಸುತ್ತಾರೆ.

ಪ್ರಮುಖ ಸುದ್ದಿ :-   ಪೇಜರ್ ಗಳು ಸ್ಫೋಟಗೊಂಡ ಒಂದು ದಿನದ ನಂತರ ಹಿಜ್ಬೊಲ್ಲಾ ಭದ್ರಕೋಟೆಯಲ್ಲಿ ವಾಕಿ ಟಾಕಿ ಸ್ಫೋಟ; 3 ಸಾವು

ಮೊಹಮ್ಮದ್‌ ಡೀಫ್ ಹೇಗೆ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ವ್ಯಕ್ತಿಯಾದ ?
ಮೊದಲ ಇಂತಿಫಾದಾದಿಂದ ಹಲವಾರು ಇಸ್ರೇಲಿ ಸೈನಿಕರು ಮತ್ತು ನಾಗರಿಕರನ್ನು ಕೊಂದ ಆತ್ಮಹತ್ಯಾ ಬಾಂಬ್ ದಾಳಿಗೆ ಡೀಫ್ ಜವಾಬ್ದಾರನಾಗಿದ್ದಾನೆ. 1996 ರಲ್ಲಿ, ಸುಮಾರು 50 ಇಸ್ರೇಲಿಗಳು ಈ ಮೊಹಮ್ಮದ್‌ ಡೀಫ್ ಮತ್ತು ಅಯಾಶ್ ಆಯೋಜಿಸಿದ ಬಸ್ ಬಾಂಬ್ ದಾಳಿಯಲ್ಲಿ ಕೊಲ್ಲಲ್ಪಟ್ಟರು, ನಂತರ ಅವರನ್ನು ಬಂಧಿಸಲಾಗಿತ್ತು. 2001ರಲ್ಲಿ ಬಿಡುಗಡೆ ಮಾಡಲಾಯಿತು.
1990 ರ ದಶಕದ ಮಧ್ಯ ಅಥವಾ ಕೊನೆಯಲ್ಲಿ ಇಸ್ರೇಲ್‌ನಲ್ಲಿ ನಡೆದ ಬಾಂಬ್ ಸ್ಫೋಟಗಳು, 1993 ರಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ನಡುವೆ ಸ್ವತಂತ್ರ ಪ್ಯಾಲೇಸ್ಟಿನಿಯನ್ ರಾಜ್ಯಕ್ಕಾಗಿ ಸಹಿ ಮಾಡಿದ ಓಸ್ಲೋ ಶಾಂತಿ ಒಪ್ಪಂದಗಳಿಗೆ ಪ್ರತೀಕಾರವಾಗಿ ಇದನ್ನು ನಡೆಸಲಾಗಿದೆ. ಹಮಾಸ್ ಪ್ಯಾಲೆಸ್ಟೀನಿಯಾದ ಭೂಪ್ರದೇಶದ ಕಡಿಮೆಯಾಗುವುದನ್ನು ಉಲ್ಲೇಖಿಸಿ ಈ ಒಪ್ಪಂದವನ್ನು ವಿರೋಧಿಸಿತು.

ಬಿಡುಗಡೆಯ ನಂತರ, ಡೀಫ್ ಎರಡನೇ ಇಂತಿಫಾದಾದ ಸಮಯದಲ್ಲಿ ಮಾರಣಾಂತಿಕ ಬಾಂಬ್ ದಾಳಿಯ ಸರಣಿಯನ್ನು ಆಯೋಜಿಸಿದ, ಅದು ಮತ್ತೆ ಅನೇಕ ಇಸ್ರೇಲಿಗಳನ್ನು ಕೊಂದಿತು. 1996 ರಲ್ಲಿ ಇಸ್ರೇಲ್‌ನಿಂದ ಅಯ್ಯಾಶ್ ಹತ್ಯೆಯಾದ ನಂತರ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ಸಂಘಟಿಸಲು ಆತ ನೇರ ಹೊಣೆಗಾರನೆಂದು ಆರೋಪಿಸಲಾಗಿದೆ. ಈಜಿಪ್ಟ್‌ನಿಂದ ಶಸ್ತ್ರಾಸ್ತ್ರಗಳು, ಇಂಧನ ಮತ್ತು ಇತರ ಸರಕುಗಳನ್ನು ತರಲು, ಹಾಗೂ ಗಾಜಾದಲ್ಲಿ ಸುರಂಗಗಳ ನಿರ್ಮಾಣದ ಹಿಂದೆ ಈತ ಇದ್ದಾನೆ ಎಂದು ಇಸ್ರೇಲಿ ಮಿಲಿಟರಿ ಪರಿಗಣಿಸಿದೆ.
ಹಮಾಸ್‌ನ ಮಿಲಿಟರಿ ವಿಭಾಗವಾದ ಕಸ್ಸಾಮ್ ಬ್ರಿಗೇಡ್ಸ್‌ನ ಮಿಲಿಟರಿ ಕಮಾಂಡರ್ ಸ್ಥಾನವನ್ನು ವಹಿಸಿಕೊಂಡ ನಂತರ ಡೀಫ್ ಇಸ್ರೇಲ್‌ನ ಮೋಸ್ಟ್-ವಾಂಟೆಡ್ ವ್ಯಕ್ತಿಯಾದ ಮತ್ತು ಎರಡು ದಶಕಗಳಿಂದ ಅಲ್ಲಿಯೇ ಇದ್ದ. ಆತನನ್ನು ಅಮೆರಿಕ ಕೂಡ ಭಯೋತ್ಪಾದಕ ಎಂದು ಘೋಷಿಸಿದೆ.

ಪ್ರಮುಖ ಸುದ್ದಿ :-   ಹಿಜ್ಬೊಲ್ಲಾ ಗುಂಪು ಬಳಸುತ್ತಿದ್ದ ನೂರಾರು ವಾಕಿ-ಟಾಕೀ, ಪೇಜರ್‌ಗಳು ಸ್ಫೋಟ ; 32 ಜನರು ಸಾವು, 3,250 ಕ್ಕೂ ಹೆಚ್ಚು ಮಂದಿಗೆ ಗಾಯ

ಡೀಫ್ ಮೇಲೆ ಹತ್ಯೆಯ ಪ್ರಯತ್ನಗಳು
ಆತನ ಸ್ಥಾನಮಾನವು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದಂತೆ, ಇಸ್ರೇಲ್‌ನ ಮಿಲಿಟರಿ ಮತ್ತು ಗುಪ್ತಚರ ಬಾಹ್ಯ ಬೇಹುಗಾರಿಕಾ ಸಂಸ್ಥೆ ಮೊಸ್ಸಾದ್ ಆತನನ್ನು ಹಲವಾರು ಬಾರಿ ಹತ್ಯೆ ಮಾಡಲು ಪ್ರಯತ್ನಿಸಿತು, ಆದರೆ ವಿಫಲವಾಯಿತು. ಇಸ್ರೇಲ್‌ನ ಭದ್ರತಾ ಪಡೆಗಳು 2021 ರ ಮೊದಲು ಕನಿಷ್ಠ ಐದು ಬಾರಿ ಆತನನ್ನು ಕೊಲ್ಲಲು ಪ್ರಯತ್ನಿಸಿದವು. ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಸಮಯದಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು (IDF) ಮತ್ತೊಮ್ಮೆ ಆತನನ್ನು ಎರಡು ಬಾರಿ ಕೊಲ್ಲಲು ಪ್ರಯತ್ನಿಸಿದವು.
ಮೊದಲ ಹತ್ಯೆಯ ಪ್ರಯತ್ನವು 2001 ರಲ್ಲಿ ನಡೆಯಿತು, ಮತ್ತು ಮುಂದಿನ ವರ್ಷದಲ್ಲಿ, ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಡೀಫ್ ಕಣ್ಣನ್ನು ಕಳೆದುಕೊಂಡ. 2006 ರಲ್ಲಿ, ಇಸ್ರೇಲ್ ಮತ್ತೊಂದು ವೈಮಾನಿಕ ದಾಳಿಯನ್ನು ನಡೆಸಿತು, ಇದರಲ್ಲಿ ಡೀಫ್ ತನ್ನ ಎರಡೂ ಕಾಲುಗಳು ಮತ್ತು ತೋಳನ್ನು ಕಳೆದುಕೊಂಡ. ಆತ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದ.

2014 ರಲ್ಲಿ, ಆತನನ್ನು ಗುರಿಯಾಗಿಸಿ ವೈಮಾನಿಕ ದಾಳಿಯು ಆತನ ಪತ್ನಿ ವಿದಾದ್ ಅಸ್ಫೌರಾ, ಆತನ ನವಜಾತ ಮಗ ಮತ್ತು ಆತನ ಮೂರು ವರ್ಷದ ಮಗಳನ್ನು ಕೊಂದಿತು. ಡೀಫ್ ಸಹ ಕೊಲ್ಲಲ್ಪಟ್ಟ ಎಂದು ಇಸ್ರೇಲ್ ನಂಬಿದ್ದರೂ, ಆತ ದಾಳಿಯಿಂದ ಬದುಕುಳಿದ ಎಂದು ನಂತರ ತಿಳಿದುಬಂದಿದೆ ಎಂದು ಇಸ್ರೇಲ್‌ ಟೈಮ್ಸ್ ವರದಿ ಮಾಡಿದೆ.
2021ರಲ್ಲಿ ನಡೆದ 11-ದಿನಗಳ ಸಂಘರ್ಷದ ಸಮಯದಲ್ಲಿ ಇಸ್ರೇಲ್‌ನ ಆಪರೇಷನ್ ಗಾರ್ಡಿಯನ್ಸ್ ಆಫ್ ದಿ ವಾಲ್‌ನಲ್ಲಿನ ಎರಡು ದಾಳಿಗಳಿಂದ ಆತ ಪಾರಾಗಿದ್ದಾನೆ. ಡೀಫ್ ನನ್ನು ಹಮಾಸ್ ಮತ್ತು ಪ್ಯಾಲೆಸ್ಟೀನಿಯಾದವರು ಹೆಚ್ಚು ಗೌರವಿಸುತ್ತಾರೆ ಎಂದು ವರದಿಯಾಗಿದೆ.
ಇದು ಭೂಮಿಯ ಮೇಲಿನ ಕೊನೆಯ ಅತಿಕ್ರಮಣವನ್ನು ಕೊನೆಗೊಳಿಸುವ ಮಹಾನ್ ಯುದ್ಧದ ದಿನವಾಗಿದೆ” ಎಂದು ಆತ ಶನಿವಾರ ಹೇಳಿದ್ದಾನೆ. ತೀವ್ರ ಸಾವುನೋವುಗಳು ಮತ್ತು ಎರಡೂ ಕಡೆಯಿಂದ ನಿರಂತರ ಹೋರಾಟದ ನಡುವೆ ಇಸ್ರೇಲ್‌ನಿಂದ ಸ್ವಾತಂತ್ರ್ಯವನ್ನು ಸಾಧಿಸಲು ಹಮಾಸ್ ದೀರ್ಘಾವಧಿ ಹೋರಾಟದಲ್ಲಿದೆ ಎಂದು ಸೂಚಿಸಿದ್ದಾನೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement