ಹಮಾಸ್ ಎಂದರೇನು ..? ಅದರ ಉನ್ನತ ನಾಯಕರು ಯಾರು..? : ಸಂಕ್ಷಿಪ್ತ ಮಾಹಿತಿ…

ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ ಅಥವಾ ಅರೇಬಿಕ್‌ನಲ್ಲಿ ಹರಕತ್ ಅಲ್-ಮುಕ್ವಾಮಾ ಅಲ್-ಇಸ್ಲಾಮಿಯಾ ಎಂದೂ ಕರೆಯಲ್ಪಡುವ ಹಮಾಸ್‌ ಎಂಬುದು ಇಸ್ಲಾಮಿ ಮೂಲಭೂತವಾದಿ ಉಗ್ರಗಾಮಿ ಗುಂಪಾಗಿದೆ, ಇದನ್ನು 1987 ರಲ್ಲಿ ಗಾಜಾದಲ್ಲಿ ವಾಸಿಸುತ್ತಿದ್ದ ಪ್ಯಾಲೇಸ್ಟಿನಿಯನ್ ನಿರಾಶ್ರಿತ ಶೇಖ್ ಅಹ್ಮದ್ ಯಾಸಿನ್ ಮೊದಲ ಇಂತಿಫಾದಾ ಸಮಯದಲ್ಲಿ ಸ್ಥಾಪಿಸಿದರು. 1920 ರ ದಶಕದಲ್ಲಿ ಈಜಿಪ್ಟ್‌ನಲ್ಲಿ ಸ್ಥಾಪಿಸಲಾದ ವಿಶ್ವದ ಪ್ರಮುಖ ಸುನ್ನಿ ಮುಸ್ಲಿಂ ಗುಂಪುಗಳಲ್ಲಿ ಒಂದಾದ ಮುಸ್ಲಿಂ ಬ್ರದರ್‌ಹುಡ್‌ ನಲ್ಲಿ ಈ ಗುಂಪು ತನ್ನ ಬೇರುಗಳನ್ನು ಹೊಂದಿದೆ.
ಶೇಖ್ ಅಹ್ಮದ್ ಯಾಸಿನ್ ಒಬ್ಬ ಪ್ಯಾಲೇಸ್ಟಿನಿಯನ್ ಧರ್ಮಗುರುವಾಗಿದ್ದು, ಅವರು ಮುಸ್ಲಿಂ ಬ್ರದರ್‌ಹುಡ್‌ನ ಸ್ಥಳೀಯ ಶಾಖೆಗಳಲ್ಲಿ ಕಾರ್ಯಕರ್ತರಾಗಿದ್ದರು. ಅವರು ತಮ್ಮ ಆರಂಭಿಕ ಜೀವನವನ್ನು ಕೈರೋದಲ್ಲಿ ಇಸ್ಲಾಮಿಕ್ ವಿದ್ಯಾರ್ಥಿವೇತನದಲ್ಲಿ ಮುಂದುವರಿಸಿದರು. 1960ರ ದಶಕದ ಉತ್ತರಾರ್ಧದಲ್ಲಿ, ಯಾಸಿನ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾದಲ್ಲಿ ಚಾರಿಟೇಬಲ್‌ ಕೆಲಸ ಮಾಡಿದರು. 1967 ರ ಆರು-ದಿನದ ಯುದ್ಧದ ನಂತರ ಇಸ್ರೇಲ್ ಅರಬ್ ರಾಜ್ಯಗಳನ್ನು ವಶಪಡಿಸಿಕೊಂಡಿತು.

ಶೇಖ್ ಅಹ್ಮದ್ ಯಾಸಿನ್
ಗಾಝಾದಲ್ಲಿ 1987 ರಲ್ಲಿ ಮೊದಲ ಇಂತಿಫಾದಾದ ಹಮಾಸ್ ಅನ್ನು ಮುಸ್ಲಿಂ ಬ್ರದರ್‌ಹುಡ್‌ನ ರಾಜಕೀಯ ಅಂಗವಾಗಿ ಗಾಲಿಕುರ್ಚಿ ಬಳಸಿದ ಪಾರ್ಶ್ವವಾಯು ಪೀಡಿತ ವ್ಯಕ್ತಿ ಶೇಖ್ ಅಹ್ಮದ್ ಯಾಸಿನ್ ಸ್ಥಾಪಿಸಿದರು. ಆ ಸಮಯದಲ್ಲಿ, ಹಮಾಸ್‌ನ ಉದ್ದೇಶವು ಮತ್ತೊಂದು ಇಸ್ಲಾಮಿ ಮೂಲಭೂತವಾದಿ ಉಗ್ರಗಾಮಿ ಸಂಘಟನೆಯಾಗಿದ್ದ ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ (PIJ) ಅನ್ನು ಎದುರಿಸುವುದಾಗಿತ್ತು. ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ ಬ್ರದರ್‌ಹುಡ್‌ ಗೆ ಇದ್ದ ಪ್ಯಾಲೆಸ್ಟೀನಿಯಾದವರ ಬೆಂಬಲವನ್ನು ಸೆಳೆಯುವ ಸಲುವಾಗಿ ಇಸ್ರೇಲ್ ಅನ್ನು ಹಿಂಸಾತ್ಮಕವಾಗಿ ವಿರೋಧಿಸುವುದು ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ (PIJ) ಉದ್ದೇಶವಾಗಿತ್ತು.
ಯಾಸಿನ್, ಬಹುತೇಕ ಕುರುಡತನವಿದ್ದ ಕ್ವಾಡ್ರಿಪ್ಲೆಜಿಕ್, 12 ನೇ ವಯಸ್ಸಿನಲ್ಲಿ ಕ್ರೀಡಾ ಅಪಘಾತದಿಂದಾಗಿ ಗಾಲಿಕುರ್ಚಿಯ ಮೇಲೆ ಅವಲಂಬಿತನಾಗಿದ್ದ. 2004 ರಲ್ಲಿ, ಗಾಜಾ ನಗರದಲ್ಲಿ ಪ್ರಾರ್ಥನೆಗಾಗಿ ವೀಲಿಂಗ್ ಮಾಡುತ್ತಿದ್ದಾಗ ಇಸ್ರೇಲಿ ಗನ್‌ಶಿಪ್ ಅವನ ಮೇಲೆ ಕ್ಷಿಪಣಿಯನ್ನು ಹಾರಿಸಿದಾಗ ಕೊಲ್ಲಲ್ಪಟ್ಟ.
1988ರಲ್ಲಿ, ಹಮಾಸ್ ತನ್ನ ಚಾರ್ಟರ್ ಅನ್ನು ಪ್ರಕಟಿಸಿತು, ಇದು ಇಸ್ರೇಲಿನ ಸಂಪೂರ್ಣ ನಾಶ ಮತ್ತು ಐತಿಹಾಸಿಕ ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಇಸ್ಲಾಮಿಕ್ ಸಮಾಜದ ಸ್ಥಾಪನೆಗೆ ಕರೆ ನೀಡಿತು. 2017 ರಲ್ಲಿ, ಪಾಶ್ಚಿಮಾತ್ಯರ ಮುಂದೆ ತನ್ನ ಇಮೇಜ್ ಅನ್ನು ಸುಧಾರಣಾವಾದಿ ಆಗುವ ಪ್ರಯತ್ನದಲ್ಲಿ, ಹಮಾಸ್ ಆರು ದಿನಗಳ ಯುದ್ಧದ ಮೊದಲು ಸ್ಥಾಪಿಸಲಾದ “ಗ್ರೀನ್ ಲೈನ್” ಗಡಿಯಲ್ಲಿ ಮಧ್ಯಂತರ ಪ್ಯಾಲೇಸ್ಟಿನಿಯನ್ ರಾಜ್ಯವನ್ನು ಸ್ವೀಕರಿಸಿದ ಹೊಸ ದಾಖಲೆ ಪ್ರಸ್ತುತಪಡಿಸಿತು. ಆದಾಗ್ಯೂ, ಈ ಹೊಸ ಹಮಾಸ್ ಚಾರ್ಟರ್ ಇನ್ನೂ ಇಸ್ರೇಲ್ ಅನ್ನು ಗುರುತಿಸಲು ನಿರಾಕರಿಸಿತು.

ಸಲಾಹ್ ಶೆಹಾಡೆ
ಹಮಾಸ್‌ನ ಮಿಲಿಟರಿ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್ಸ್‌ನ ಆರಂಭಿಕ ಮಿಲಿಟರಿ ನಾಯಕರಲ್ಲಿ ಒಬ್ಬರು ಸಲಾಹ್ ಶೆಹಾಡೆ, ಅವರು 1987 ರಲ್ಲಿ ಹಮಾಸ್ ರಚನೆಯಾದಾಗಿನಿಂದ ಹಮಾಸ್‌ನ ಸದಸ್ಯರಾದರು. ಅವರು ಶೀಘ್ರವಾಗಿ ಅದರ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು ಮತ್ತು ಇಸ್ರೇಲಿ ಅಧಿಕಾರಿಗಳಿಂದ, 1984 ಮತ್ತು 1988ರಲ್ಲಿ ಎರಡು ಬಾರಿ ಬಂಧಿಸಲ್ಪಟ್ಟರು. 1996 ರಲ್ಲಿ ಯಾಹ್ಯಾ ಅಯಾಶ್ ಮರಣದ ನಂತರ, ಶೆಹಾಡೆ ಮೊಹಮ್ಮದ್ ಡೀಫ್ ಮತ್ತು ಅದ್ನಾನ್ ಅಲ್-ಘೌಲ್ ಜೊತೆಗೆ ಗುಂಪಿನಲ್ಲಿ ಅಗ್ರ ನಾಯಕನಾದ. ಜುಲೈ 22, 2002 ರಂದು ಆತನ ಮನೆಯ ಮೇಲೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಈ ಶೆಹಾಡೆ ಹತ್ಯೆಗೀಡಾದ, ದಾಳಿಯಲ್ಲಿ ಆತನ ಹೆಂಡತಿ ಮತ್ತು ಮಗಳು ಸಹ ಸತ್ತರು.
ದಶಕಗಳಲ್ಲಿ, ಹಮಾಸ್ ಇಸ್ರೇಲ್ ಅನ್ನು ನಿರ್ನಾಮ ಮಾಡಲು ಪ್ರತಿಜ್ಞೆ ಮಾಡಿದೆ ಮತ್ತು ಇಸ್ರೇಲಿ ನಾಗರಿಕರು ಮತ್ತು ಸೈನಿಕರ ವಿರುದ್ಧ ಹಲವಾರು ಆತ್ಮಹತ್ಯಾ ಬಾಂಬ್‌ಗಳು ಮತ್ತು ಇತರ ಮಾರಣಾಂತಿಕ ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿದೆ. ಇಸ್ರೇಲ್ ವಿರುದ್ಧ ಮೊದಲ ಹಮಾಸ್ ಆತ್ಮಹತ್ಯಾ ಬಾಂಬ್ ದಾಳಿಯು 1993 ರಲ್ಲಿ ನಡೆಯಿತು, ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ನಾಯಕ ಯಾಸರ್ ಅರಾಫತ್ ಮತ್ತು ಇಸ್ರೇಲಿ ಪ್ರಧಾನ ಮಂತ್ರಿ ಯಿಟ್ಜಾಕ್ ರಾಬಿನ್ ಓಸ್ಲೋ ಒಪ್ಪಂದಗಳಿಗೆ ಸಹಿ ಹಾಕುವ ಐದು ತಿಂಗಳ ಮೊದಲು ಇದು ನಡೆಯಿತು. ಐತಿಹಾಸಿಕ ಒಪ್ಪಂದವು ವೆಸ್ಟ್ ಬ್ಯಾಂಕ್ ಮತ್ತು ಗಾಜಾದ ಭಾಗಗಳಿಗೆ ಪ್ಯಾಲೇಸ್ಟಿನಿಯನ್ ಅಥಾರಿಟಿ (PA) ಎಂಬ ಹೊಸದಾಗಿ ರಚಿಸಲಾದ ಘಟಕದ ಅಡಿಯಲ್ಲಿ ಸೀಮಿತ ಸ್ವ-ಸರ್ಕಾರವನ್ನು ಸ್ಥಾಪಿಸಿತು. ಹಮಾಸ್ ಒಪ್ಪಂದಗಳನ್ನು ಖಂಡಿಸಿತು, ಆದರೆ PLO ಮತ್ತು ಇಸ್ರೇಲ್ ಪರಸ್ಪರ ಮಾನ್ಯತೆ ನೀಡಿದವು.
ಹಮಾಸ್ ಗುಂಪು, ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರೇಲಿಯಾ ಮತ್ತು ಇಸ್ರೇಲ್ ಸೇರಿದಂತೆ ಹಲವಾರು ದೇಶಗಳಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಯಾಗಿದೆ, ಆದರೂ ಕೆಲವರು ಈ ಲೇಬಲ್ ಅನ್ನು ಅದರ ಮಿಲಿಟರಿ ವಿಭಾಗಕ್ಕೆ ಮಾತ್ರ ಅನ್ವಯಿಸುತ್ತಾರೆ. ಇರಾನ್ ಅದಕ್ಕೆ ಅನೇಕ ವಿಷಯಗಳಲ್ಲಿ ಹಾಗೂ ಆರ್ಥಿಕವಾಗಿ ಬೆಂಬಲವನ್ನು ನೀಡುತ್ತದೆ. ಟರ್ಕಿ ಮತ್ತು ಕತಾರ್ ತನ್ನ ಅದರ ಕೆಲವು ಉನ್ನತ ನಾಯಕರನ್ನು ಆಶ್ರಯ ನೀಡಿದೆ ಎಂದು ವರದಿಯಾಗಿದೆ. ಪಶ್ಚಿಮ ದಂಡೆಯಲ್ಲಿ ಪ್ರಾಬಲ್ಯ ಹೊಂದಿರುವ ಹಮಾಸ್‌ ಪ್ರತಿಸ್ಪರ್ಧಿ ಪಕ್ಷವಾದ ಫತಾಹ್ ಚಳುವಳಿಯಿಂದ ರಚನೆಯಾದ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ನಂತರದಲ್ಲಿ ಹಿಂಸಾಚಾರವನ್ನು ತ್ಯಜಿಸಿದೆ.

ಹಮಾಸ್ ಗಾಜಾಪಟ್ಟಿಯಲ್ಲಿ 2006 ರ ಸಂಸತ್ತಿನ ಚುನಾವಣೆಗಳನ್ನು ಗೆದ್ದಿತು ಮತ್ತು 2007 ರಲ್ಲಿ ಪ್ರತಿಸ್ಪರ್ಧಿ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (ಫತಾಹ್ ಚಳುವಳಿ) ಪ್ರಾಬಲ್ಯ ಹೊಂದಿರುವ ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದಿಂದ ಗಾಜಾ ಪಟ್ಟಿಯ ನಿಯಂತ್ರಣವನ್ನು ಹಿಂಸಾತ್ಮಕವಾಗಿ ವಶಪಡಿಸಿಕೊಂಡಿತು. 2006 ರಲ್ಲಿ ಕೊನೆಯ ಬಾರಿಗೆ ಪ್ಯಾಲೇಸ್ಟಿನಿಯನ್ ಸಂಸತ್ತಿನ ಚುನಾವಣೆಗಳು ನಡೆದವು. ಹಮಾಸ್‌ ಗಾಜಾಪಟ್ಟಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿ ಚುನಾವಣೆಗಳು ನಡೆದಿಲ್ಲ.
ಗಾಜಾವನ್ನು ಹಮಾಸ್ ಸ್ವಾಧೀನಪಡಿಸಿಕೊಂಡ ನಂತರ, ಇಸ್ರೇಲ್ ಗಾಜಾದ ಮೇಲೆ ದಿಗ್ಬಂಧನ ವಿಧಿಸಿತು, ಹಮಾಸ್ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುವ ಉದ್ದೇಶದಿಂದ ಜನರು ಮತ್ತು ಪ್ರದೇಶದ ಒಳಗೆ ಮತ್ತು ಹೊರಗೆ ಸರಕುಗಳ ಚಲನೆಯನ್ನು ನಿರ್ಬಂಧಿಸಿತು.
ಹಮಾಸ್ ಯಾವಾಗಲೂ ಇಸ್ರೇಲ್‌ನಿಂದ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಸಾಧನವಾಗಿ ಹಿಂಸೆಯನ್ನು ಪ್ರತಿಪಾದಿಸುತ್ತದೆ ಮತ್ತು ಹಾಗೂ ಇಸ್ರೇಲ್‌ನ ಸಂಪೂರ್ಣ ವಿನಾಶಕ್ಕೆ ಕರೆ ನೀಡುತ್ತದೆ. ಹಮಾಸ್ ಹತ್ತಾರು ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿದೆ ಮತ್ತು ವರ್ಷಗಳಲ್ಲಿ ಗಾಜಾದಿಂದ ಇಸ್ರೇಲ್‌ ಮೇಲೆ ಹತ್ತಾರು ಸಾವಿರ ರಾಕೆಟ್‌ಗಳನ್ನು ಹಾರಿಸಿದೆ. ಇದು ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಗಾಜಾದಿಂದ ಈಜಿಪ್ಟ್‌ಗೆ ಭೂಗತ ಸುರಂಗಗಳ ಜಾಲವನ್ನು ಸ್ಥಾಪಿಸಿತು.
ಇತ್ತೀಚಿನ ವರ್ಷಗಳಲ್ಲಿ, ಹಮಾಸ್ ಇಸ್ರೇಲ್‌ನ ಮೇಲೆ ದಾಳಿ ಮಾಡುವುದಕ್ಕಿಂತ ಗಾಜಾವನ್ನು ಆಳುವತ್ತ ಹೆಚ್ಚು ಗಮನಹರಿಸಿತ್ತು, ಆದರೆ ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ದಾಳಿಯ ನಂತರ, ಇದು ಹಮಾಸ್‌ ನ ಕೇವಲ ಮೋಸದ ತಂತ್ರವಾಗಿದೆ ಎಂದು ತೋರುತ್ತದೆ, ಅದು ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಕೊಳ್ಳಲು ಈ ವಿರಾಮದ ಸಮಯವನ್ನು ಬಳಸಿಕೊಂಡಿತು.

ಮೊಹಮ್ಮದ್ ಡೀಫ್
ಹಮಾಸ್ ಮಿಲಿಟರಿ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್‌ನ ಮುಖ್ಯಸ್ಥ ಮೊಹಮ್ಮದ್ ಡೀಫ್ ಈ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ಅವನ ವಂಚನೆಯ ತಂತ್ರಗಳು ಹಮಾಸ್ ಸಂಘರ್ಷವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿಲ್ಲ ಮತ್ತು ಗಾಜಾದಲ್ಲಿ ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಇಸ್ರೇಲ್ ನಂಬುವಂತೆ ಮಾಡಿತು. ಆದರೆ ಇಸ್ರೇಲ್ ಗಜಾನ್ ಕಾರ್ಮಿಕರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಿದಾಗ, ಗುಂಪಿನ ಹೋರಾಟಗಾರರಿಗೆ ತರಬೇತಿ ನೀಡಲಾಯಿತು, “ನಾವು ಈ ಯುದ್ಧಕ್ಕೆ ಎರಡು ವರ್ಷಗಳ ಕಾಲ ಸಿದ್ಧತೆ ನಡೆಸಿದ್ದೇವೆ” ಎಂದು ಹಮಾಸ್‌ನ ಬಾಹ್ಯ ಸಂಬಂಧಗಳ ಮುಖ್ಯಸ್ಥ ಅಲಿ ಬರಾಕಾ ಹೇಳಿದ್ದಾರೆ..
ಪಾಲಸ್ಟೈನ್‌ ಪಶ್ಚಿಮ ದಂಡೆಯಲ್ಲಿ ಉಗ್ರಗಾಮಿಗಳ ಮೇಲೆ ಇಸ್ರೇಲಿ ನಡೆಸಿದ ದಬ್ಬಾಳಿಕೆ, ವಸಾಹತುಗಳ ನಿರಂತರ ನಿರ್ಮಾಣ, ಇಸ್ರೇಲಿ ಜೈಲುಗಳಲ್ಲಿ ಸಾವಿರಾರು ಕೈದಿಗಳು, ಗಾಜಾದ ಮೇಲೆ ನಡೆಯುತ್ತಿರುವ ದಿಗ್ಬಂಧನ ಮತ್ತು ಅಲ್-ಅಕ್ಸಾ ಮಸೀದಿಯಲ್ಲಿ ಇಸ್ರೇಲಿ ಅತಿಕ್ರಮಣ ಅಕ್ಟೋಬರ್ 7ರಂದು ದಾಳಿಗಳನ್ನು ನಡೆಸುವಂತೆ ಮಾಡಿತು ಎಂದು ಹಮಾಸ್ ನಾಯಕರು ಹೇಳುತ್ತಾರೆ.
ಆದಾಗ್ಯೂ, ಪ್ರಸ್ತುತ ಹಮಾಸ್‌ನ ಪ್ರಾಥಮಿಕ ಬೆಂಬಲಿಗರಾದ ಇರಾನ್ ತನ್ನ ಕಾರ್ಯತಂತ್ರದ ಭಾಗವಾಗಿ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಯಾವುದೇ ಸಂಭಾವ್ಯ ಒಪ್ಪಂದವನ್ನು ವಿಫಲಗೊಳಿಸುವ ಪ್ರಯತ್ನವಾಗಿ ಈ ಸಮಯದಲ್ಲಿ ಇಸ್ರೇಲ್‌ ಮೇಲೆ ಈ ದಾಳಿಗಳನ್ನು ನಡೆಸಲು ಹಮಾಸ್ ಅನ್ನು ಒತ್ತಾಯಿಸಿತು ಎಂದು ಹಲವರು ನಂಬುತ್ತಾರೆ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವಿನ ಯಾವುದೇ ಸಂಭಾವ್ಯ ಒಪ್ಪಂದ ಇರಾನ್‌ನ ಕಾರ್ಯತಂತ್ರದ ಉದ್ದೇಶಗಳಿಗೆ ಬೆದರಿಕೆ ಹಾಕುತ್ತದೆ.

ಹಮಾಸ್ ಉನ್ನತ ನಾಯಕತ್ವ
2004 ರಲ್ಲಿ ಇಸ್ರೇಲಿಗಳಿಂದ ಯಾಸಿನ್‌ನ ಹತ್ಯೆಯ ನಂತರ, ಮುಂಚಿನ ಇಸ್ರೇಲಿ ಹತ್ಯೆಯ ಪ್ರಯತ್ನದಿಂದ ಬದುಕುಳಿದ ದೇಶಭ್ರಷ್ಟ ಹಮಾಸ್ ಸದಸ್ಯ ಖಲೀದ್ ಮಶಾಲ್ ಗುಂಪಿನ ನಾಯಕನಾದ. ದೋಹಾದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ಮತ್ತು 2017 ರಲ್ಲಿ ಖಲೀದ್ ಮಶಾಲ್ ನನ್ನು ಬದಲಿಸಿದ ಇಸ್ಮಾಯಿಲ್ ಹನಿಯೆಹ್ ಹಮಾಸ್‌ನ ಪ್ರಸ್ತುತ ನಾಯಕ. ಆತ ಇರಾನ್ ಮತ್ತು ಲೆಬನಾನ್‌ನ ಹೆಜ್ಬೊಲ್ಲಾ ಸೇರಿದಂತೆ ಅದರ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಗುಂಪಿನ ನಾಯಕತ್ವವನ್ನು ಮರುಹೊಂದಿಸಿದ. ಅಂದಿನಿಂದ, ಹಮಾಸ್‌ ಗುಂಪಿನ ಅನೇಕ ನಾಯಕರು ಲೆಬನಾನ್‌ಗೆ ಸ್ಥಳಾಂತರಗೊಂಡಿದ್ದಾರೆ. ಸಿರಿಯನ್ ಅಂತರ್ಯುದ್ಧಕ್ಕೆ ಮೊದಲಿನ 2011 ರ ದಂಗೆಯಲ್ಲಿ ಪ್ಯಾಲೇಸ್ಟಿನಿಯನ್ ನಿರಾಶ್ರಿತರು ಭಾಗವಹಿಸಿದ ನಂತರ, ಸಿರಿಯಾದೊಂದಿಗಿನ ಸಂಬಂಧ ಹಳಸಿದ ನಂತರ ಹಮಾಸ್ ನಾಯಕರು ಕತಾರ್‌ನಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡರು.
ಹಮಾಸ್‌ನ ಸಾಮಾನ್ಯ ನೀತಿಯನ್ನು ಸಾಮಾನ್ಯವಾಗಿ ಪಾಲಿಟ್‌ಬ್ಯೂರೋ ಎಂದು ಕರೆಯಲಾಗುವ ಸಲಹಾ ಸಂಸ್ಥೆಯಿಂದ ರೂಪಿಸಲಾಗುತ್ತದೆ. ಇದು ದೇಶಭ್ರಷ್ಟವಾಗಿಯೇ ಕಾರ್ಯನಿರ್ವಹಿಸುತ್ತದೆ. ಸ್ಥಳೀಯ ಸಮಿತಿಗಳು ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ತಳಮಟ್ಟದ ಸಮಸ್ಯೆಗಳನ್ನು ನಿರ್ವಹಿಸುತ್ತವೆ. ಪ್ರಸ್ತುತ ಇಸ್ಮಾಯಿಲ್ ಹನಿಯೆಹ್ ನೇತೃತ್ವದ ಮತ್ತು 15 ಸದಸ್ಯರನ್ನು ಒಳಗೊಂಡಿರುವ ಪಾಲಿಟ್‌ಬ್ಯೂರೋ, ಪಾಲಿಟ್‌ಬ್ಯೂರೋವನ್ನು ಆಯ್ಕೆ ಮಾಡುವ ಸಲಹಾ ಸಂಸ್ಥೆಯಾದ ಹಮಾಸ್ ಶುರಾ ಕೌನ್ಸಿಲ್ ಅನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ. ಶುರಾ ಕೌನ್ಸಿಲ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ವ್ಯವಹಾರಗಳ ಜೊತೆಗೆ ಇಸ್ರೇಲಿ ಜೈಲುಗಳಲ್ಲಿ ಸೆರೆಯಲ್ಲಿರುವ ಪ್ಯಾಲೇಸ್ಟಿನಿಯನ್ ಡೈಯಾಸ್ಪೊರಾ ಮತ್ತು ಪ್ಯಾಲೇಸ್ಟಿನಿಯನ್ ಕೈದಿಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಹಮಾಸ್ ಮಿಲಿಟರಿ ವಿಭಾಗವಾದ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್, ಪ್ರಸ್ತುತ ಮರ್ವಾನ್ ಇಸ್ಸಾ ಮತ್ತು ಮೊಹಮ್ಮದ್ ಡೀಫ್ ನೇತೃತ್ವದಲ್ಲಿದೆ. 2002 ರಲ್ಲಿ ಗಾಜಾದಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಬ್ರಿಗೇಡ್‌ಗಳ ಸಂಸ್ಥಾಪಕ ಸಲಾಹ್ ಶೆಹಾಡೆ ಹತ್ಯೆಗೀಡಾದ.
ಅಲ್-ಕಸ್ಸಾಮ್ ಬ್ರಿಗೇಡ್‌ಗಳು ಸ್ವತಂತ್ರ ಹಮಾಸ್ ಉಗ್ರಗಾಮಿ ಕೋಶಗಳನ್ನು ಮತ್ತು ಗಾಜಾದಲ್ಲಿ ಪ್ರಧಾನಿ ಇಸಾಮ್ ಅಲ್-ದಾಲಿಸ್ ನೇತೃತ್ವದ ಹಮಾಸ್ ಸರ್ಕಾರವನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ.

ಉನ್ನತ ಹಮಾಸ್ ನಾಯಕರ ಕೆಲವು ಸಂಕ್ಷಿಪ್ತ ಪ್ರೊಫೈಲ್‌ಗಳು
ಯಾಹ್ಯಾ ಸಿನ್ವಾರ್
ಅಕ್ಟೋಬರ್ 7 ರ ದಾಳಿಯ ಎರಡು ದಿನಗಳ ನಂತರ, ಇಸ್ರೇಲ್ ಉನ್ನತ ಸೇನಾ ವಕ್ತಾರ ರಿಯರ್ ಅಡ್ಮ್ ಹಗರಿ ಪತ್ರಿಕಾಗೋಷ್ಠಿಯಲ್ಲಿ, “ಯಾಹ್ಯಾ ಸಿನ್ವಾರ್ ಅಭಿಯಾನದ ಕಮಾಂಡರ್ ಮತ್ತು ಆತ ಸತ್ತ ವ್ಯಕ್ತಿ” ಎಂದು ಹೇಳಿದರು.
ಗಾಜಾದಲ್ಲಿ ಅತ್ಯುನ್ನತ ಶ್ರೇಣಿಯ ಹಮಾಸ್ ಅಧಿಕಾರಿ ಸಿನ್ವಾರ್, ಗಾಜಾ ಪ್ರದೇಶದ ವಾಸ್ತವಿಕ ಆಡಳಿತಗಾರ ಮತ್ತು ಗುಂಪಿನ ಒಟ್ಟಾರೆ ನಾಯಕ ಇಸ್ಮಾಯಿಲ್ ಹನಿಯೆಹ್ ನಂತರ ಹಮಾಸ್‌ನ ಎರಡನೇ ಅತ್ಯಂತ ಶಕ್ತಿಶಾಲಿ ಸದಸ್ಯ.
ಸಿನ್ವಾರ್ 1962 ರಲ್ಲಿ ಗಾಜಾ ಪಟ್ಟಿಯ ದಕ್ಷಿಣದಲ್ಲಿರುವ ಖಾನ್ ಯುನಿಸ್‌ನಲ್ಲಿರುವ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ. ನಂತರದ ವರ್ಷಗಳಲ್ಲಿ, ಆತ ಇಸ್ಲಾಮಿಕ್ ಯುನಿವರ್ಸಿಟಿ ಆಫ್ ಗಾಜಾದಲ್ಲಿ ವ್ಯಾಸಂಗ ಮಾಡಿದ ಹಾಗೂ ಅಲ್ಲಿ ಅರೇಬಿಕ್ ಅಧ್ಯಯನದಲ್ಲಿ ಪದವಿ ಪಡೆದ. ವಿಶ್ವವಿದ್ಯಾನಿಲಯದ ದಿನಗಳಲ್ಲಿ ಆತನನ್ನು ಮೊದಲ ಬಾರಿಗೆ ಬಂಧಿಸಲಾಯಿತು, ಮತ್ತು ಾತ ಇಸ್ರೇಲಿ ಜೈಲಿನಲ್ಲಿದ್ದಾಗ ಪ್ಯಾಲೇಸ್ಟಿನಿಯನ್ ಕಾರ್ಯಕರ್ತರೊಂದಿಗೆ ಸ್ನೇಹ ಬೆಳೆಸಿದ ಮತ್ತು ನಂತರ ಪ್ಯಾಲೇಸ್ಟಿನಿಯನ್ ಉದ್ದೇಶಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ.

1980 ರ ದಶಕದ ಮಧ್ಯಭಾಗದ ವೇಳೆಗೆ ಆತ ಹಮಾಸ್‌ನ ಭದ್ರತಾ ವಿಭಾಗದ ಮುಖ್ಯಸ್ಥನಾದ.
ಕೊಲೆಯ ಯತ್ನದ ಆರೋಪದ ಮೇಲೆ 1988 ರಲ್ಲಿ ಇಸ್ರೇಲಿಗಳು ಆತನನ್ನು ಬಂಧಿಸಿ ಜೈಲಿನಲ್ಲಿಟ್ಟರು. ಆದರೆ 2011 ರಲ್ಲಿ ಬಿಡುಗಡೆ ಮಾಡಲಾಯಿತು. ಐದು ವರ್ಷಗಳ ಕಾಲ ಹಮಾಸ್ ಒತ್ತೆಯಾಳಾಗಿದ್ದ ಇಸ್ರೇಲಿ ಸೈನಿಕ ಗಿಲಾಡ್ ಶಾಲಿತ್‌ ಬಿಡುಗಡೆಗೆ ಬದಲಾಗಿ ಬಿಡುಗಡೆಗೊಂಡ 1000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ ಕೈದಿಗಳಲ್ಲಿ ಈತ ಸಹ ಒಬ್ಬನಾಗಿದ್ದ.
ಸಿನ್ವಾರ್, ಹಮಾಸ್ ಕಮಾಂಡರ್ ಮಹಮೂದ್ ಇಶ್ತಿವಿಯ ಚಿತ್ರಹಿಂಸೆ ಮತ್ತು ಕೊಲೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದ ಎಂದು ನಂಬಲಾಗಿದೆ. ಸಿನ್ವರ್‌ ನನ್ನು ಯಹೂದಿ ದೇಶವಾದ ಇಸ್ರೇಲ್‌ನೊಂದಿಗೆ ರಾಜಿ ಮಾಡಿಕೊಳ್ಳುವ ಅಥವಾ ಮಧ್ಯಸ್ಥಿಕೆ ವಹಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವ ಕಟ್ಟರ್‌ ವಾದಿ ಎಂದು ಕರೆಯಲಾಗುತ್ತದೆ. ಆತ ಗಾಜಾದಲ್ಲಿ ಆತನ ಜನ್ಮ ಸ್ಥಳವಾದ ಖಾನ್ ಯೂನಿಸ್‌ನಲ್ಲಿ ಇನ್ನೂ ವಾಸಿಸುತ್ತಿದ್ದಾನೆ. 2015 ರಲ್ಲಿ, ಅಮೆರಿಕ ಸರ್ಕಾರ ಸಿನ್ವಾರ್ ಅನ್ನು ಭಯೋತ್ಪಾದಕ ಎಂದು ಅಧಿಕೃತವಾಗಿ ಘೋಷಿಸಿತು.
ಅಕ್ಟೋಬರ್-7 ದಾಳಿಯ ನಂತರ, ಇಸ್ರೇಲಿ ಯುದ್ಧ ವಿಮಾನಗಳು ಆತನ ಮನೆಯ ಮೇಲೆ ಬಾಂಬ್ ದಾಳಿ ನಡೆಸಿದವು, ಆದರೆ ಹಮಾಸ್ ವೈಮಾನಿಕ ದಾಳಿಯಲ್ಲಿ ಪ್ರಾಣಹಾನಿಯಾಗಿಲ್ಲ ಎಂದು ಹೇಳಿಕೊಂಡಿದೆ. ಆತ ಇಸ್ರೇಲ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾರೆ.

ಮೊಹಮ್ಮದ್ ಡೀಫ್
ಮೊಹಮ್ಮದ್ ಡೀಫ್ ಹಮಾಸ್‌ನ ಮಿಲಿಟರಿ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್‌ನ ಒಕ್ಕಣ್ಣಿನ ಮುಖ್ಯಸ್ಥ ಮತ್ತು ಈ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ದಾಳಿಯ ಸ್ವಲ್ಪ ಸಮಯದ ನಂತರ ಆಡಿಯೊ ಟೇಪ್‌ನಲ್ಲಿ ಆತ ಭಯೋತ್ಪಾದಕ ಕಾರ್ಯಾಚರಣೆಯನ್ನು ‘ಅಲ್-ಅಕ್ಸಾ ಪ್ರವಾಹ’ ಎಂದು ಕರೆದಿದ್ದಾನೆ.
1948 ರ ಅರಬ್-ಇಸ್ರೇಲಿ ಯುದ್ಧದ ನಂತರ ಸ್ಥಾಪಿಸಲಾದ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ 1965 ರಲ್ಲಿ ಜನಿಸಿದ್ದ ಈತನ ಹೆಸರು ಮೊಹಮ್ಮದ್ ಮಸ್ರಿ, ಉಗ್ರಗಾಮಿ ನಾಯಕ ಮೊದಲ ಇಂತಿಫಾದಾ ಸಮಯದಲ್ಲಿ ಹಮಾಸ್‌ಗೆ ಸೇರಿದ ನಂತರ ಮೊಹಮ್ಮದ್ ಡೀಫ್ ಎಂದು ಕರೆಯಲ್ಪಟ್ಟ.
ಡೀಫ್ ಎಂದರೆ, ಅರೇಬಿಕ್ ಭಾಷೆಯಲ್ಲಿ “ಅತಿಥಿ” ಎಂದರ್ಥ. ಡೀಫ್ ನನ್ನು 1989 ರಲ್ಲಿ ಇಸ್ರೇಲ್ ಬಂಧಿಸಿತು ಮತ್ತು ಸುಮಾರು 16 ತಿಂಗಳ ಬಂಧನದಲ್ಲಿದ್ದ. ಆತ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವಿ ಪಡೆದ, ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಅಧ್ಯಯನ ಮಾಡಿದ.
ಹಮಾಸ್ ಶ್ರೇಣಿಯಲ್ಲಿ ಏರುತ್ತಿರುವ ಡೀಫ್ ಹಮಾಸ್‌ ಗುಂಪಿನ ಸುರಂಗಗಳ ಜಾಲವನ್ನು ಮತ್ತು ಅದರ ಬಾಂಬ್ ತಯಾರಿಕೆಯ ಪರಿಣತಿಯನ್ನು ಅಭಿವೃದ್ಧಿಪಡಿಸಿದ. ದಶಕಗಳಿಂದ ಈತ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಮತ್ತು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಡಜನ್ಗಟ್ಟಲೆ ಇಸ್ರೇಲಿಗಳ ಸಾವಿಗೆ ವೈಯಕ್ತಿಕವಾಗಿ ಕಾರಣ ಎಂದು ಹೇಳಲಾಗುತ್ತದೆ.

ಹಮಾಸ್‌ನ ಕಸ್ಸಾಮ್ ರಾಕೆಟ್ ಅನ್ನು ವಿನ್ಯಾಸಗೊಳಿಸಿದ ಹೆಗ್ಗಳಿಕೆ ಈತನದ್ದು ಎಂದು ಹೇಳಲಾಗಿದೆ. ಈ ದಿನಾಂಕದವರೆಗೆ ಸಾವಿರಾರು ಕಸ್ಸಾಮ್ ರಾಕೆಟ್ ಗಳನ್ನು ಇಸ್ರೇಲ್‌ ಮೇಲೆ ಹಾರಿಸಲಾಗಿದೆ.
ಡೀಫ್ ಗೌಪ್ಯವಾಗಿಯೇ ಉಳಿಯುತ್ತಾನೆ ಏಕೆಂದರೆ ಅವನಿಗೆ ಇದು ಜೀವನ ಅಥವಾ ಸಾವಿನ ವಿಷಯವಾಗಿದೆ. ಹಮಾಸ್ ಮೂಲಗಳು ಹೇಳುವಂತೆ ಇಸ್ರೇಲ್‌ನ ಹತ್ಯೆಯ ಯತ್ನವೊಂದರಲ್ಲಿ ಆತ ಕಣ್ಣನ್ನು ಕಳೆದುಕೊಂಡ ಮತ್ತು ಒಂದು ಕಾಲಿಗೆ ಗಂಭೀರ ಗಾಯಗಳಾಗಿವೆ. 2014 ರಲ್ಲಿ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಆತನ ಪತ್ನಿ, 7 ತಿಂಗಳ ಮಗ ಮತ್ತು 3 ವರ್ಷದ ಮಗಳು ಮೃತಪಟ್ಟಿದ್ದರು.
ಏಳು ಇಸ್ರೇಲಿ ಹತ್ಯೆಯ ಪ್ರಯತ್ನಗಳಲ್ಲಿ ಬದುಕುಳಿದ, ಡೀಫ್ ವಿರಳವಾಗಿ ಮಾತನಾಡುತ್ತಾನೆ ಮತ್ತು ಎಂದಿಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ.
ಡೀಫ್‌ ಸಾರ್ವಜನಿಕವಾಗಿ ಲಭ್ಯವಿರುವ ಮೂರು ಚಿತ್ರಗಳು ಮಾತ್ರ ಇವೆ. ಡೀಫ್ ಪ್ರಸ್ತುತ ಇರುವ ಸ್ಥಳವು ತಿಳಿದಿಲ್ಲ, ಆದರೂ ಅವನು ಗಾಜಾದಲ್ಲಿ ಸುರಂಗಗಳಲ್ಲಿ ಎಲ್ಲೋ ಅಡಗಿಕೊಂಡಿದ್ದಾನೆ ಎಂದು ನಂಬಲಾಗಿದೆ.
ಅಕ್ಟೋಬರ್ 7 ರ ದಾಳಿಯ ನಂತರ ಇಸ್ರೇಲಿ ಪ್ರತೀಕಾರದ ಸಮಯದಲ್ಲಿ, ಇಸ್ರೇಲಿ ವೈಮಾನಿಕ ದಾಳಿಗಳು ಗಾಜಾದಲ್ಲಿ ಡೀಫ್ ತಂದೆಗೆ ಸೇರಿದ ಮನೆಗಳಲ್ಲಿ ಒಂದನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. ಡೀಫ್ ಸಹೋದರ ಮತ್ತು ಇತರ ಇಬ್ಬರು ಕುಟುಂಬ ಸದಸ್ಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಆತ ಪ್ರಸ್ತುತ ಇಸ್ರೇಲ್‌ನ ಹಿಟ್‌ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾನೆ.

ಅಬು ಒಬೈದಾ
ಈತ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಪ್ರಸ್ತುತ ವಕ್ತಾರ ಮತ್ತು ಅವರು ಹಮಾಸ್ ಡಜನ್‌ಗಟ್ಟಲೆ ಇಸ್ರೇಲಿ ಸೈನಿಕರನ್ನು ಸುರಕ್ಷಿತ ಸ್ಥಳಗಳಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಮತ್ತು ಗಾಜಾ ಪಟ್ಟಿಯಲ್ಲಿರುವ ಸುರಂಗಗಳಲ್ಲಿ ಬಂಧಿತರಾಗಿದ್ದಾರೆ ಎಂದು ಘೋಷಿಸಿದ ವ್ಯಕ್ತಿ.
ಅಬು ಒಬೈದಾ ನಿಜವಾದ ಹೆಸರು ತಿಳಿದಿಲ್ಲ ಮತ್ತು ಆತನ ಹೆಚ್ಚಿನ ವೈಯಕ್ತಿಕ ವಿವರಗಳಿಲ್ಲ. ಮುಖವನ್ನು ಮುಚ್ಚುವ ಕೆಫಿಯೆಯನ್ನು ಮಾತ್ರ ಧರಿಸಿ ಕಾಣಿಸಿಕೊಳ್ಳುತ್ತಾನೆ. 2014 ರಲ್ಲಿ, ಇಸ್ರೇಲ್‌ ಮಾಧ್ಯಮಗಳಿಗೆ ಹುಜೈಫಾ ಸಮೀರ್ ಅಬ್ದುಲ್ಲಾ ಅಲ್-ಕಹ್ಲೂತ್ ಹೆಸರಿನೊಂದಿಗೆ ಅಬು ಒಬೈದಾ ಫೋಟೋವನ್ನು ಬಿಡುಗಡೆ ಮಾಡಿತು. ಆದಾಗ್ಯೂ, ಫೋಟೋ ಮತ್ತು ಹೆಸರಿನ ಸಿಂಧುತ್ವವನ್ನು ಅಲ್-ಕಸ್ಸಾಮ್ ಬ್ರಿಗೇಡ್‌ಗಳು ನಿರಾಕರಿಸಿದ್ದಾರೆ, ಅಬು ಒಬೈದಾ “ಮಾಧ್ಯಮಗಳಿಗೆ ಕಾಣಿಸಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ ಮತ್ತು ಆತ ಯಾರೆಂದು ಕೆಲವೇ ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ. 2006 ರಲ್ಲಿ ಇಸ್ರೇಲಿ ಸೈನಿಕ ಗಿಲಾಡ್ ಶಾಲಿತ್‌ನನ್ನು ಸೆರೆಹಿಡಿದಿದ್ದಾಗಿ ಘೋಷಿಸಿದಾಗ ಅಬು ಒಬೈದಾ ಮೊದಲ ಬಾರಿಗೆ ಮಾಧ್ಯಮದಲ್ಲಿ ಕಾಣಿಸಿಕೊಂಡ.

ಇಸ್ಮಾಯಿಲ್ ಹನಿಯೆಹ್
ಇಸ್ಮಾಯಿಲ್ ಹನಿಯೆಹ್ ಹಮಾಸ್‌ನ ಪ್ರಮುಖ ರಾಜಕೀಯ ನಾಯಕನಾಗಿದ್ದಾನೆ, ಕತಾರ್‌ನ ದೋಹಾದಲ್ಲಿ ಗಾಜಾದ ಹೊರಗೆ ವಾಸಿಸುತ್ತಿದ್ದಾನೆ.
ಹನಿಯೆಹ್ 1962 ರಲ್ಲಿ ಗಾಜಾ ಪಟ್ಟಿಯಲ್ಲಿರುವ ಅಲ್-ಶತಿ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ. ಆತನ ಪೋಷಕರು 1948 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲ್‌ನ ಅಶ್ಕೆಲೋನ್ ಬಳಿ ತಮ್ಮ ಮನೆಗಳನ್ನು ತೊರೆದ ನಂತರ ನಿರಾಶ್ರಿತರಾದರು.
ಆತ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ ಮತ್ತು ಆ ಸಮಯದಲ್ಲಿ ಹಮಾಸ್‌ನೊಂದಿಗೆ ತೊಡಗಿಸಿಕೊಂಡಿದ್ದ. 1987 ರಲ್ಲಿ ಅರೇಬಿಕ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ. ವಿಶ್ವವಿದ್ಯಾನಿಲಯದಲ್ಲಿದ್ದಾಗ, 1985 ರಿಂದ 1986 ರವರೆಗೆ ಮುಸ್ಲಿಂ ಬ್ರದರ್‌ಹುಡ್ ಅನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಮಂಡಳಿಯ ಮುಖ್ಯಸ್ಥನಾಗಿದ್ದ. ಇಸ್ಲಾಮಿಕ್ ಅಸೋಸಿಯೇಶನ್ ಫುಟ್ಬಾಲ್ ತಂಡದಲ್ಲಿ ಮಿಡ್‌ಫೀಲ್ಡರ್ ಆಗಿಯೂ ಆಡಿದ್ದ. ಆತ ಮೊದಲ ಇಂತಿಫಾದಾದ ಅದೇ ಸಮಯದಲ್ಲಿ ಪದವಿ ಪಡೆದ.
ಮೊದಲ ಇಂತಿಫಾದಾದಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಮತ್ತು ಇಸ್ರೇಲಿ ಮಿಲಿಟರಿ ನ್ಯಾಯಾಲಯದಿಂದ ಆತನಿಗೆ ಸಣ್ಣಪ್ರಮಾಣದ ಜೈಲು ಶಿಕ್ಷೆ ನೀಡಲಾಯಿತು. 1988 ರಲ್ಲಿ ಆತನನ್ನು ಮತ್ತೆ ಇಸ್ರೇಲ್ ಬಂಧಿಸಿತು ಮತ್ತು ಆರು ತಿಂಗಳ ಕಾಲ ಜೈಲಿನಲ್ಲಿರಿಸಲಾಯಿತು. 1989 ರಲ್ಲಿ, ಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ. 1992 ರಲ್ಲಿ ಬಿಡುಗಡೆಯಾದ ನಂತರ, ಇಸ್ರೇಲಿ ಅಧಿಕಾರಿಗಳು ಆತನನ್ನು ಹಿರಿಯ ಹಮಾಸ್ ನಾಯಕರಾದ ಅಬ್ದೆಲ್-ಅಜೀಜ್ ಅಲ್-ರಾಂಟಿಸ್ಸಿ, ಮಹಮೂದ್ ಜಹರ್, ಅಜೀಜ್ ದುವೈಕ್ ಮತ್ತು 400 ಇತರರೊಂದಿಗೆ ಲೆಬನಾನ್‌ಗೆ ಗಡೀಪಾರು ಮಾಡಿದರು. ಆತ ದಕ್ಷಿಣ ಲೆಬನಾನ್‌ನ ಮಾರ್ಜ್ ಅಲ್-ಜಹೌರ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಇದ್ದ , ಒಂದು ವರ್ಷದ ನಂತರ, ಗಾಜಾಕ್ಕೆ ಮರಳಿದ ಮತ್ತು ಇಸ್ಲಾಮಿಕ್ ವಿಶ್ವವಿದ್ಯಾಲಯದ ಡೀನ್ ಆಗಿ ನೇಮಕಗೊಂಡ.

ಇಸ್ರೇಲ್ 1997 ರಲ್ಲಿ ಅಹ್ಮದ್ ಯಾಸಿನ್ ನನ್ನು ಜೈಲಿನಿಂದ ಬಿಡುಗಡೆ ಮಾಡಿದ ನಂತರ, ಹನಿಯೆಹ್ ಆತನ ಕಚೇರಿಯ ಮುಖ್ಯಸ್ಥನಾಗಿ ನೇಮಕಗೊಂಡ. ಯಾಸಿನ್ ಜೊತೆ ಸಂಬಂಧದಿಂದಾಗಿ ಹಮಾಸ್‌ನಲ್ಲಿ ಆತನ ಪ್ರಾಮುಖ್ಯತೆ ಬೆಳೆಯಿತು ಮತ್ತು ಆತನನ್ನು ಪ್ಯಾಲೇಸ್ಟಿನಿಯನ್ ಪ್ರಾಧಿಕಾರಕ್ಕೆ ಪ್ರತಿನಿಧಿಯಾಗಿ ನೇಮಿಸಲಾಯಿತು.
ಇಸ್ರೇಲಿ ನಾಗರಿಕರ ವಿರುದ್ಧದ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಆತ ಇಸ್ರೇಲಿ ರಕ್ಷಣಾ ಪಡೆ(IDF)ಯಿಂದ ದಾಳಿಗೆ ಗುರಿಯಾಗಿದ್ದ. 2003 ರಲ್ಲಿ ಜೆರುಸಲೆಮ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ನಂತರ, ಹಮಾಸ್ ನಾಯಕತ್ವವನ್ನು ತೊಡೆದುಹಾಕಲು ಇಸ್ರೇಲಿ ವಾಯುಪಡೆಯ ದಾಳಿಯಲ್ಲಿ ಅವನ ಕೈಗೆ ಗಾಯವಾಯಿತು.
1997 ರಲ್ಲಿ ಹಮಾಸ್ ಕಚೇರಿಯ ಮುಖ್ಯಸ್ಥನಾಗಿ ನೇಮಕಗೊಂಡ ನಂತರ, ಸಂಘಟನೆಯ ಶ್ರೇಣಿಯಲ್ಲಿ ಬೆಳೆದು 2006 ರ ಪ್ಯಾಲೇಸ್ಟಿನಿಯನ್ ಶಾಸಕಾಂಗ ಚುನಾವಣೆಯಲ್ಲಿ ಗೆದ್ದ ಹಮಾಸ್ ಪಟ್ಟಿಯ ಮುಖ್ಯಸ್ಥನಾಗಿದ್ದ ಹನಿಯೆಹ್ ಪ್ರಧಾನ ಮಂತ್ರಿಯಾದ. ಫತಾಹ್-ಹಮಾಸ್ ಸಂಘರ್ಷದ ಉತ್ತುಂಗದಲ್ಲಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಜೂನ್ 2007 ರಲ್ಲಿ ಹನಿಯೆಹ್ ನನ್ನು ಕಚೇರಿಯಿಂದ ವಜಾಗೊಳಿಸಿದರು, ಆದರೆ ಹನಿಯೆಹ್ ಆದೇಶವನ್ನು ಅಂಗೀಕರಿಸಲಿಲ್ಲ ಮತ್ತು ಗಾಜಾ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ಅಧಿಕಾರವನ್ನು ಚಲಾಯಿಸುವುದನ್ನು ಮುಂದುವರೆಸಿದ ಮತ್ತು ವಿವಾದಿತ ಇಬ್ಬರು ಪ್ರಧಾನ ಮಂತ್ರಿಗಳಲ್ಲಿ ಒಬ್ಬನಾದ. ಮೇ 2017 ರಲ್ಲಿ ಖಲೀದ್ ಮಶಾಲ್ ಬದಲಿಗೆ ಹಮಾಸ್ ರಾಜಕೀಯ ಮುಖ್ಯಸ್ಥನನ್ನಾಗಿ ಹನಿಯೆ ನೇಮಕ ಮಾಡಲಾಯಿತು.

ಮಹಮೂದ್ ಅಲ್-ಜಹರ್
ಸುಮಾರು ಅರವತ್ತು ವರ್ಷ ವಯಸ್ಸಿನ ಮಹಮೂದ್ ಅಲ್-ಜಹರ್ , ಹಮಾಸ್ ಸ್ಥಾಪನೆಯಾದಾಗಿನಿಂದ ಅದರೊಂದಿಗೆ ಇದ್ದಾನೆ ಮತ್ತು ಹಮಾಸ್ ಸಂಸ್ಥಾಪಕ ಅಹ್ಮದ್ ಯಾಸಿನ್‌ಗೆ ನಿಕಟವಾಗಿದ್ದ.
ಆತ ಹಮಾಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ ಮತ್ತು ಗಾಜಾ ಪಟ್ಟಿಯಲ್ಲಿರುವ ಹಮಾಸ್ ನಾಯಕತ್ವದ ಸದಸ್ಯನಾಗಿದ್ದಾನೆ. ಅಲ್-ಜಹರ್ ಮಾರ್ಚ್ 2006 ರ ಹಮಾಸ್ ಪ್ರಾಬಲ್ಯದ ಪ್ಯಾಲೇಸ್ಟಿನಿಯನ್ ಅಥಾರಿಟಿ ಸರ್ಕಾರದಲ್ಲಿ ವಿದೇಶಾಂಗ ಸಚಿವನಾಗಿ ಸೇವೆ ಸಲ್ಲಿಸಿದ (ಮೊದಲ ಹನಿಯೆ ಸರ್ಕಾರ ಎಂದೂ ಕರೆಯುತ್ತಾರೆ) ಇದು 20 ಮಾರ್ಚ್ 2006 ರಂದು ಪ್ರಮಾಣವಚನ ಸ್ವೀಕರಿಸಿತು.
ಗಾಜಾದಲ್ಲಿ ಜನಿಸಿದ ಈತ ಕೈರೋದಲ್ಲಿ ವೈದ್ಯಕೀಯ ಅಧ್ಯಯನ ಮಾಡಿದ ಮತ್ತು ಯಾಸಿನ್‌ಗೆ ಶಸ್ತ್ರಚಿಕಿತ್ಸಕ ಮತ್ತು ವೈಯಕ್ತಿಕ ವೈದ್ಯನಾದ, ಜೊತೆಗೆ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾದರು. 1987 ರಲ್ಲಿ ಹಮಾಸ್ ರಚನೆಯಲ್ಲಿ ಅಲ್-ಜಹರ್ ಪ್ರಮುಖ ಪಾತ್ರ ವಹಿಸಿದ್ದ.
ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಆತ್ಮಹತ್ಯಾ ಬಾಂಬ್ ದಾಳಿಯ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ, 10 ಸೆಪ್ಟೆಂಬರ್ 2003 ರಂದು ಇಸ್ರೇಲಿ F-16 ಗಾಜಾದ ರಿಮಲ್ ನ ಆತನ ಮನೆಯ ಮೇಲೆ ದೊಡ್ಡ ಬಾಂಬ್ ಹಾಕಿತು, ಆಗ ಹಿರಿಯ ಮಗ ಸ್ವಲ್ಪಮಟ್ಟಿಗೆ ಗಾಯಗೊಂಡ. ವೈಯಕ್ತಿಕ ಅಂಗರಕ್ಷಕ ಕೊಲ್ಲಲ್ಪಟ್ಟ ಮತ್ತು ಆತನ ಮಗಳು ರೀಮಾ ಸೇರಿದಂತೆ ಇಪ್ಪತ್ತು ಇತರರು ಗಾಯಗೊಂಡರು. ಆತನ ಮನೆ ಸಂಪೂರ್ಣ ನಾಶವಾಯಿತು. 2008 ರ ಜನವರಿ 15 ರಂದು ಗಾಜಾದಲ್ಲಿ ಇಸ್ರೇಲಿ ಗುಂಡಿನ ದಾಳಿಯಿಂದ ಅಲ್-ಕಸ್ಸಾಮ್ ಬ್ರಿಗೇಡ್‌ನ ಸದಸ್ಯನಾದ ಆತನ ಇನ್ನೊಬ್ಬ ಮಗ ಕೊಲ್ಲಲ್ಪಟ್ಟ. ಹನಿಯೆಹ್‌ನಂತೆ, ಜಹರ್‌ನನ್ನು 1992 ರಲ್ಲಿ ಲೆಬನಾನ್‌ಗೆ ಗಡಿಪಾರು ಮಾಡಲಾಯಿತು, ಜೈಲಿನಲ್ಲಿ ಕಳೆದ ಮತ್ತು ಹತ್ಯೆಯ ಪ್ರಯತ್ನದಿಂದ ಬದುಕುಳಿದ.

ಅಬ್ದುಲ್-ಫತ್ತಾಹ್ ದುಖಾನ್
ಹಮಾಸ್‌ನ ಸ್ಥಾಪಕ ಸದಸ್ಯ “ಅಬು ಒಸಾಮಾ” ಎಂದೂ ಕರೆಯಲ್ಪಡುವ ಅಬ್ದುಲ್-ಫತ್ತಾಹ್ ದುಖಾನ್ ಮಂಗಳವಾರ ಗಾಜಾದ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಎಂದು ವರದಿಯೊಂದು ತಿಳಿಸಿದೆ. ಪ್ಯಾಲೇಸ್ಟಿನಿಯನ್ ವರದಿಯನ್ನು ಉಲ್ಲೇಖಿಸಿದ ಇಸ್ರೇಲ್‌ನ KAN ಸಾರ್ವಜನಿಕ ಪ್ರಸಾರದ ಪ್ರಕಾರ, ನುಸಿರಾತ್ ಪ್ರದೇಶದಲ್ಲಿ ಕೊಲ್ಲಲ್ಪಟ್ಟ . ಮಾಜಿ ಪ್ರಾಂಶುಪಾಲರಾದ ದುಖಾನ್ 1987 ರಲ್ಲಿ ಗುಂಪಿನ ಚಾರ್ಟರ್ ಅನ್ನು ಬರೆಯಲು ಸಹಾಯ ಮಾಡಿದರು, ಇದು ಇಸ್ರೇಲಿನ ಸಂಪೂರ್ಣ ವಿನಾಶಕ್ಕೆ ಕರೆ ನೀಡುತ್ತದೆ.
ಏತನ್ಮಧ್ಯೆ, ಇತ್ತೀಚಿನ ವಾಯುದಾಳಿಗಳಲ್ಲಿ ಇಬ್ಬರು ಉನ್ನತ ಹಮಾಸ್ ಅಧಿಕಾರಿಗಳು ಸಹ ಸಾವನ್ನಪ್ಪಿದ್ದಾರೆ ಎಂದು IDF ಹೇಳಿದೆ: ಪಾಲಿಟ್‌ಬ್ಯೂರೋದ ಹಿರಿಯ ಸದಸ್ಯ ಜಕರಿಯಾ ಅಬು ಮಾಮರ್ ಮತ್ತು ಗುಂಪಿನ ಆರ್ಥಿಕ ಸಚಿವ ಜವಾದ್ ಅಬು ಶಮಲಾ ಸಾವಿಗೀಡಾಗಿದ್ದಾರೆ. ಜಕರಿಯಾ ಅಬು ಮಾಮರ್ ಹಮಾಸ್‌ನ ಹಿರಿಯ ವೇದಿಕೆಯ ಭಾಗವಾಗಿದ್ದ ಹಾಗೂ ಸಂಘಟನೆಯ ನಿರ್ಧಾರ ಕೈಗೊಳ್ಳುವಲ್ಲಿ ಮತ್ತು ಇಸ್ರೇಲ್ ವಿರುದ್ಧ ಹಲವಾರು ಭಯೋತ್ಪಾದಕ ಚಟುವಟಿಕೆಗಳ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ.
ಅಬು ಶಮಲಾ ಸಂಘಟನೆಯ ಹಣಕಾಸುಗಳನ್ನು ನಿರ್ವಹಿಸುತ್ತಿದ್ದ ಮತ್ತು ಗಾಜಾ ಪಟ್ಟಿಯ ಒಳಗೆ ಮತ್ತು ಹೊರಗೆ ಭಯೋತ್ಪಾದನೆಗೆ ಹಣವನ್ನು ಮೀಸಲಿಟ್ಟಿದ್ದ ಎಂದು ಐಡಿಎಫ್‌ ಹೇಳಿದೆ.

5 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement