ಹಮಾಸ್ ಗುಂಪಿನ ಶಸ್ತ್ರಸಜ್ಜಿತ ಸದಸ್ಯರು ತಮ್ಮ ಸೆರೆಯಲ್ಲಿರುವ ಶಿಶುಗಳಿಗೆ ಆರೈಕೆ ಮಾಡುವ ವೀಡಿಯೊವನ್ನು ಟೆಲಿಗ್ರಾಮ್‌ನಲ್ಲಿ ಚಾನೆಲ್‌ನಲ್ಲಿ ಪ್ರಸಾರ ಮಾಡಿದೆ.
ಶನಿವಾರ ಇಸ್ರೇಲ್ ಮೇಲೆ ಭಯೋತ್ಪಾದಕ ದಾಳಿ ಪ್ರಾರಂಭಿಸಿದ ಮತ್ತು ಹಲವಾರು ರಾಷ್ಟ್ರಗಳ ಸುಮಾರು 150 ಜನರನ್ನು ಒತ್ತೆಯಾಳಾಗಿ ಗಾಜಾಕ್ಕೆ ಕರೆದೊಯ್ದ ಸಶಸ್ತ್ರ ಗುಂಪು ತಾವು ಒತ್ತೆಯಾಳಾಗಿ ಇರಿಸಿಕೊಂಡಿರುವ ಶಿಶುಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದೇವೆಂದು ತೋರಿಸಲುಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ.
ವೀಡಿಯೊದಲ್ಲಿ ಒಂದು ಶಿಶು ತಳ್ಳುಗಾಡಿಯಲ್ಲಿ ಕಾಣಿಸಿಕೊಂಡರೆ, ಇತರರು ನಾಲ್ಕರಿಂದ ಆರು ವಯೋಮಾನದವರಂತೆ ಕಾಣುತ್ತಾರೆ. ತಮ್ಮ ಮುಖವನ್ನು ಮರೆಮಾಡಿ ವೀಡಿಯೊ ಮಾಡಿರುವ ಅವರು ಯುದ್ಧದ ಉಡುಪಿನಲ್ಲಿ ಎಕೆ ಸರಣಿಯ ಆಕ್ರಮಣಕಾರಿ ರೈಫಲ್ ಅನ್ನು ಹಿಡಿದಿರುವ ವ್ಯಕ್ತಿಯೊಬ್ಬನು ಮಗುವನ್ನು ಹಿಡಿದುಕೊಂಡಿರುವುದು ಕಂಡುಬರುತ್ತದೆ. ಶಿಶುವಿನ ಬೆನ್ನಿನ ಭಾಗವು ಬಂದೂಕಿನ ಮೇಲೆ ನಿಂತಿದೆ. ಅದೇ ವೀಡಿಯೊದಲ್ಲಿ, ಅಳುತ್ತಿರುವ ಶಿಶುವನ್ನು ಸಮಾಧಾನಪಡಿಸಲು ಮತ್ತೊಬ್ಬ ಹಮಾಸ್ ತಳ್ಳುಗಾಡಿಯನ್ನು ದೂಡುತ್ತಿರುವುದನ್ನು ಸಹ ಕಾಣಬಹುದು.
ವೀಡಿಯೊದ ಕೊನೆಯಲ್ಲಿ, ಹಮಾಸ್ ಸದಸ್ಯರು ಚಿಕ್ಕ ಮಗುವಿಗೆ ಒಂದು ಕಪ್ ನೀರನ್ನು ನೀಡುವಾಗ “ಬಿಸ್ಮಿಲ್ಲಾ” ಎಂದು ಹೇಳಲು ಮಗುವಿಗೆ ಸೂಚಿಸುವುದು ಕಂಡುಬರುತ್ತದೆ. ಮಗು ಅದನ್ನು ಹೇಳುತ್ತದೆ ಮತ್ತು ಕಪ್ ತೆಗೆದುಕೊಳ್ಳುತ್ತದೆ. ವೀಡಿಯೊದ ಆರಂಭದಲ್ಲಿ ಅದೇ ಮಗು ಬೆಂಚ್ ಮೇಲೆ ಕುಳಿತು ಅಳುತ್ತಿರುವುದು ಕಂಡುಬಂದಿದೆ. ಆ ಹುಡುಗುನ ಕಾಲಿಗೆ ಬ್ಯಾಂಡೇಜ್ ಇದೆ. ಹಮಾಸ್ ಸದಸ್ಯ ಮಗುವಿನ ಪಾದದ ಸುತ್ತಲೂ ಬ್ಯಾಂಡೇಜ್ ಅನ್ನು ಸುತ್ತುತ್ತಿರುವುದು ಕಂಡುಬರುತ್ತದೆ.
ವಿಶ್ವದ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಗಾಜಾ ಪಟ್ಟಿಯಾದ್ಯಂತ ಹಮಾಸ್ ಅಡಗುತಾಣಗಳಲ್ಲಿ ಇರಿಸಲಾಗಿದೆ ಎಂದು ನಂಬಲಾದ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ತಮ್ಮ ಶಕ್ತಿಯಿಂದ ಎಲ್ಲವನ್ನೂ ಮಾಡಲು ಇಸ್ರೇಲ್ ಮತ್ತು ಅಮೆರಿಕ ಪ್ರತಿಜ್ಞೆ ಮಾಡಿವೆ.
ಇಸ್ರೇಲ್ ಸೈನಿಕರು ಹಮಾಸ್ ವಿರುದ್ಧ ಭೂ ಆಕ್ರಮಣಕ್ಕೆ ಮುಂಚಿತವಾಗಿ ಉತ್ತರ ಗಾಜಾವನ್ನು ತೊರೆಯುವಂತೆ ಜನರಿಗೆ ಸೂಚನೆ ನೀಡಿದ ನಂತರ ಸಾವಿರಾರು ಪ್ಯಾಲೆಸ್ಟೀನಿಯನ್ನರು ಆಶ್ರಯವನ್ನು ಹುಡುಕಿಕೊಂಡು ದಕ್ಷಿಣ ಗಾಜಾಕ್ಕೆ ಪಲಾಯನ ಮಾಡಿದ್ದಾರೆ. ಹಮಾಸ್ ತನ್ನ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿಗಳನ್ನು ಕೊಂದಿತು. ಅವರಲ್ಲಿ ಹೆಚ್ಚಿನವರು ಸಾಮಾನ್ಯ ನಾಗರಿಕರು.
ಇದಕ್ಕೆ ಪ್ರತೀಕಾರವಾಗಿ ನಡೆದ ಇಸ್ರೇಲ್ ದಾಳಿಯಲ್ಲಿ ಸುಮಾರು ಗಾಜಾದ ಸುಮಾರು1,800ಕ್ಕೂ ಹೆಚ್ಚು ಪ್ಯಾಲಿಸ್ತೈನ್ ಜನರು ಸಾವಿಗೀಡಾಗಿದ್ದಾರೆ. ಅವರಲ್ಲಿಯೂ ಹೆಚ್ಚಿನವರು ನಾಗರಿಕರು ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಹೇಳಿದೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ 150 ಒತ್ತೆಯಾಳುಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಬಾಂಬ್ ದಾಳಿಯಲ್ಲಿ ನಾಲ್ವರು ಒತ್ತೆಯಾಳುಗಳು ಸಾವಿಗೀಡಾಗಿದ್ದಾರೆ ಎಂದು ಅದು ಹಿಂದೆ ಹೇಳಿತ್ತು. ಇಂದು ಇಸ್ರೇಲ್‌ಗೆ ಭೇಟಿ ನೀಡಿದ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್, ಹಮಾಸ್ ಗಾಜಾದ ನಿವಾಸಿಗಳನ್ನು ತನ್ನ “ಗುರಾಣಿ”ಯಾಗಿ ಬಳಸುತ್ತಿದೆ ಎಂದು ಹೇಳಿದ್ದಾರೆ.
“ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಪ್ರದೇಶವನ್ನು ಸ್ವಚ್ಛಗೊಳಿಸಲು” ಮತ್ತು “ಕಾಣೆಯಾದ ವ್ಯಕ್ತಿಗಳನ್ನು” ಹುಡುಕಲು ಪ್ರಯತ್ನಿಸಲು ಇಸ್ರೇಲಿ ಭೂ ಪಡೆಗಳು ಕಳೆದ 24 ಗಂಟೆಗಳಲ್ಲಿ ಗಾಜಾದಲ್ಲಿ “ಸ್ಥಳೀಯ” ದಾಳಿಗಳನ್ನು ಆರಂಭಿಸಿದೆ ಎಂದು ಸೇನೆ ಹೇಳಿದೆ.
ದಕ್ಷಿಣ ಲೆಬನಾನ್‌ನಲ್ಲಿ ರಾಯಿಟರ್ಸ್ ವೀಡಿಯಿ ಪತ್ರಕರ್ತ ಸಾವಿಗೀಡಾಗಿದ್ದಾನೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಅಲ್-ಜಜೀರಾದ ಇಬ್ಬರು ಸೇರಿದಂತೆ ಹಲವಾರು ಇತರ ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಪ್ರಸಾರಕರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ