ಮುಂಬೈ : ಉದ್ಧವ್ ಠಾಕ್ರೆ ಮತ್ತು ಅವರ ಶಿವಸೇನೆ ಬಣವು ತಮ್ಮ ಸ್ವಾರ್ಥ ಸಾಧಿಸಲು ಭಯೋತ್ಪಾದಕ ಗುಂಪುಗಳಾದ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ಜೊತೆಯೂ ಕೈಜೋಡಿಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಆಜಾದ್ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ರ್ಯಾಲಿಯಲ್ಲಿ ಮಾತನಾಡಿದ ಶಿಂಧೆ, “ತಮ್ಮ ಸ್ವಾರ್ಥಕ್ಕಾಗಿ ಅವರು ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾದೊಂದಿಗೂ ಮೈತ್ರಿ ಮಾಡಿಕೊಳ್ಳಬಹುದು” ಎಂದು ಹೇಳಿದರು.
ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್‌ನ ಭಾಗವಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಏಕನಾಥ ಶಿಂಧೆ ಈ ಹೇಳಿಕೆ ನೀಡಿದ್ದಾರೆ.
2004ರಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪ್ರತಿಕೃತಿಗೆ ಹೊಡೆಯಲು ಚಪ್ಪಲಿ ತಂದಿದ್ದರು. ಮಣಿಶಂಕರ್ ಅಯ್ಯರ್ ಅವರ ಫೋಟೋಕ್ಕೆ ಶೂನಿಂದ ಹೊಡೆದಿದ್ದಾರೆ, ಇಂದು ಅವರು (ಶಿವಸೇನೆ (ಯುಬಿಟಿ ಶಿವಸೇನೆ ) ಕಾಂಗ್ರೆಸ್‌ನ ಬೂಟುಗಳನ್ನು ಎತ್ತಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಅಖಿಲೇಶ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಏಕೆ ಎಂದು ಶಿಂಧೆ ಪ್ರಶ್ನಿಸಿದರು, ಉದ್ಧವ್ ಠಾಕ್ರೆಯವರು “ಕರಸೇವಕರನ್ನು ಗುಂಡುಗಳಿಂದ ಹೊಡೆಸಿದ” ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು 1990 ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರು ಬಾಬರಿ ಮಸೀದಿಯ ಕಡೆಗೆ ಹೋಗುವುದನ್ನು ತಡೆಯಲು ಅವರ ಮೇಲೆ ಗುಂಡು ಹಾರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರ ಬಗ್ಗೆ ಇದು ಉಲ್ಲೇಖವಾಗಿದೆ.
ಶಿವಸೇನೆಯ ವಿವಿಧ ಬಣಗಳ ನೇತೃತ್ವ ವಹಿಸಿರುವ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ ಅವರು ಮಂಗಳವಾರ ದಸರಾ ಸಂದರ್ಭದಲ್ಲಿ ಪ್ರತ್ಯೇಕ ರ್ಯಾಲಿಗಳನ್ನು ನಡೆಸಿದರು.
ನಿಮ್ಮ ಕಾಮೆಂಟ್ ಬರೆಯಿರಿ