ಅಂಕೋಲಾ: ಖ್ಯಾತ ಸಾಹಿತಿ ವಿಷ್ಣು ನಾಯ್ಕ ಇನ್ನಿಲ್ಲ

ಅಂಕೋಲಾ : ಖ್ಯಾತಸಾಹಿತಿ, ಪ್ರಕಾಶಕ, ಪತ್ರಕರ್ತರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವಿಷ್ಣು ನಾಯ್ಕ (81) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಅಂಕೋಲಾದ ಅಂಬಾರಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು 1944ರಲ್ಲಿ ತಾಲ್ಲೂಕಿನ ಅಂಬಾರಕೊಡ್ಲಾದಲ್ಲಿ ಜನಿಸಿದರು. ಎಂ.ಎ ಪದವೀಧರರಾಗಿದ್ದು, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರದಲ್ಲಿ ಕೆನರಾ ವೆಲಫೆರ್ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ವಿಷ್ಣು ನಾಯ್ಕ ಅವರು ಜನಪದ 50 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 25 ಸಂಪಾದಿತ ಕೃತಿಗಳನ್ನು ಒಳಗೊಂಡು 66ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಕವನ, ನಾಟಕ, ಅಂಕಣ, ವಿಮರ್ಶೆ, ಕಥಾಸಂಕಲನ ಮತ್ತು ಜೀವನ ಪರಿಚಯಗಳ ಕೃತಿಗಳನ್ನು ಬರೆದಿದ್ದಾರೆ. 2007ರಲ್ಲಿ ಭಟ್ಕಳದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ಸಕಾಲಿಕ ಪತ್ರಿಕೆ ನಡೆಸಿದ್ದರು. ಅಲ್ಲದೆ, ತಮ್ಮ ರಾಘವೇಂದ್ರ ಪ್ರಕಾಶನದ ಮೂಲಕ ಜೊತೆಗೆ ಹಲವು ಬರಹಗಾರರ ಕೃತಿಗಳನ್ನು ಪ್ರಕಟಿಸಿದ್ದರು. ಉದಯೋನ್ಮುಖ ಬರಹಗಾರರ ಅನೇಕ ಕೃತಿಗಳನ್ನೂ ತಮ್ಮ ಪ್ರಕಾಶನದ ಮೂಲಕ ಹೊರತಂದಿದ್ದರು. ರಂಗಭೂಮಿ ಕಲಾವಿದರೂ ಆಗಿದ್ದರು. ಅವರು 180ಕ್ಕೂ ಹೆಚ್ಚು ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದರು. ಮುಂಗಾರು ಪತ್ರಿಕೆಯ ವರದಿಗಾರರೂ ಆಗಿದ್ದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ವಿಷ್ಣು ನಾಯ್ಕ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೇಂದ್ರೆ ಕಾವ್ಯ ಪುರಸ್ಕಾರ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ, , ಅತ್ಯುತ್ತಮ ಗ್ರಂಥ ಪ್ರಕಾಶಕ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ವಿಷ್ಣು ನಾಯ್ಕ ನಿಧನಕ್ಕೆ ಕೆನರಾ ವೆಲಫೇರ್ ಟ್ರಸ್ಟ್ , ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್, ದಿನಕರ ವೇದಿಕೆ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement