ಹೈದರಾಬಾದ್ : ಆಂಧ್ರಪ್ರದೇಶ ರಾಜಕೀಯ ಪಾತಾಳಕ್ಕೆ ಕುಸಿದಿದ್ದು, ಈಗ ‘ನಿರೋಧ’ ರಾಜಕೀಯದ ವರೆಗೆ ಬಂದುನಿಂತಿದೆ ಎಂದು ಹೇಳಬಹುದಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ರಾಜಕೀಯ ಪಕ್ಷಗಳು ಮತದಾರರನ್ನು ಒಲಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳನ್ನು ದೂಷಿಸಲು ವಿನೂತನ ರಣತಂತ್ರವನ್ನು ಮಾಡುತ್ತಿವೆ.
ಈಗ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳು ಕಾಂಡೋಮ್ ಪ್ಯಾಕೆಟ್‌ಗಳ ತಮ್ಮ ಲೋಗೋ ಮುದ್ರಿಸಿ ಸಾರ್ವಜನಿಕರಿಗೆ ಹಂಚುತ್ತಿವೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಪರಸ್ಪರ ಸ್ಪರ್ಧೆಗೆ ಇಳಿದಿದ್ದು, ಪರಸ್ಪರ ದೂಷಣೆಯಲ್ಲಿಯೂ ತೊಡಗಿವೆ. ಚುನಾವಣಾ ಪ್ರಚಾರ ನಡೆಸುತ್ತಿರುವ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ವಿವಿಧ ಕಿಟ್‌ಗಳನ್ನು ಹಂಚುತ್ತಿದ್ದು, ಅದರಲ್ಲಿ ಕಾಂಡೋಮ್ ಪೊಟ್ಟಣಗಳೂ ಸೇರಿವೆ.
ಕಾಂಡೋಮ್ ವಿತರಣೆ : ಆರೋಪ-ಪ್ರತ್ಯಾರೋಪಗಳು
ಟಿಡಿಪಿ ತನ್ನ ಪಕ್ಷದ ಚಿಹ್ನೆಯಿರುವ ಕಾಂಡೋಮ್ ಪ್ಯಾಕೆಟ್‌ಗಳನ್ನು ವಿತರಿಸಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅದರ ನಂತರ, ತೆಲುಗು ದೇಶಂ ಪಕ್ಷವು ವೈಎಸ್‌ಆರ್ ಕಾಂಗ್ರೆಸ್ ಅನ್ನು ಟೀಕಿಸಿತು ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷದ ಚಿಹ್ನೆ ಮುದ್ರಿಸಿ ಕಾಂಡೋಮ್ ಪ್ಯಾಕೆಟ್‌ಗಳನ್ನು ವಿತರಿಸಿದೆ ಎಂದು ಹೇಳಿಕೊಂಡಿದೆ. ಎರಡೂ ಪಕ್ಷಗಳು ತಮ್ಮ ಪ್ರತಿಸ್ಪರ್ಧಿ ಪಕ್ಷಗಳ ಮತದಾರರಿಗೆ ಕಾಂಡೋಮ್ ಹಂಚುತ್ತಿದ್ದಾರೆ ಎಂದು ಪರಸ್ಪರ ಆರೋಪ ಮಾಡುತ್ತಿವೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ ಮತ್ತು “ಅಂತಿಮವಾಗಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ತೆಲುಗು ದೇಶಂ ಪಕ್ಷ(ಟಿಡಿಪಿ)ವು ಜನರಿಗೆ ಕಾಂಡೋಮ್ಗಳನ್ನು ವಿತರಿಸುತ್ತಿದೆ. ಪ್ರಚಾರದ ಹುಚ್ಚು ಎಲ್ಲಿ ವರೆಗೆ ಬಂತು? ಮುಂದಿನ ದಿನಗಳಲ್ಲಿ ವಯಾಗ್ರಗಳನ್ನು ಹಂಚಿಕೊಳ್ಳುತ್ತದೆಯೇ? ಕನಿಷ್ಠ ಅಲ್ಲಿಗೆ ನಿಲ್ಲುತ್ತದೆಯೇ ಎಂದು ಟೀಕಿಸಿದೆ.
ತೆಲುಗು ದೇಶಂ ಪಕ್ಷವೂ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಕಾಂಡೋಮ್ ಹಂಚಿದ ಬಗ್ಗೆ ವೀಡಿಯೊ ಶೇರ್ ಮಾಡಿದ್ದು, “ನೀವು ತಯಾರಿ..ಸಿದ್ಧತೆ ಎಂದು ಏಕೆ ಕೂಗುತ್ತಿದ್ದೀರಿ? ಇಂತಹ ಕೆಟ್ಟ ಪ್ರಚಾರಗಳನ್ನು ಮಾಡುವ ಬದಲು ನಾವು ಶವಗಳಿಗೆ ಹಣ ಖರ್ಚು ಮಾಡಬಹುದು” ಎಂದು ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊಗಳು ಹರಿದಾಡುತ್ತಿವೆ ವೈಎಸ್ಆರ್ ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬುಧವಾರ (ಫೆಬ್ರವರಿ 21) ಸಂಜೆ 4 ಗಂಟೆ ಸುಮಾರಿಗೆ ವೀಡಿಯೊವನ್ನು ಬಿಡುಗಡೆ ಮಾಡಿದೆ. ಅದಕ್ಕೆ ಪ್ರತಿಯಾಗಿ ತೆಲುಗು ದೇಶಂ ಪಕ್ಷವು ಅದೇ ದಿನ ಸಂಜೆ 6 ಗಂಟೆಗೆ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ ಪ್ರತಿಕ್ರಿಯಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ