ವೀಡಿಯೊ..| ಕುಮಟಾ : ಮನೆ ಬಾಗಿಲಿಗೇ ಬಂದು ನಾಯಿ ಹೊತ್ತೊಯ್ದ ಚಿರತೆ…!

ಕುಮಟಾ : ಮನೆಯಂಗಳಕ್ಕೇ ಬಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಹೊಲನಗದ್ದೆಯ ಬೆಳ್ಳಕ್ಕಿ ಎಂಬಲ್ಲಿ ದತ್ತಾತ್ರೇಯ ಭಟ್ಟ ಎಂಬವರ ಮನೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು ಭಯಬೀತರಾಗಿದ್ದಾರೆ.
ರಾತ್ರಿ ಮನೆಯ ಅಂಗಳಕ್ಕೇ ಬಂದ ಚಿರತೆ ನಾಯಿ ಹಿಡಿಯಲು ಪ್ರಯತ್ನಿಸಿದೆ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ರಾತ್ರಿ ವೇಳೆ ಚಿರತೆ ಮನೆಯಂಗಳಕ್ಕೆ ಬಂದು ನಾಯಿ ಬೇಟೆಯಾಡಲು ಹೊಂಚು ಹಾಕಿ ಕುಳಿತಿರುವುದು ಕಂಡುಬರುತ್ತದೆ. ವೀಡಿಯೊ ಕ್ಲಿಪ್‌ನಲ್ಲಿ ರಾತ್ರಿ ಸಮಯದಲ್ಲಿ ಮನೆಯ ಹೊರಗಿನ ಮೆಟ್ಟಿಲುಗಳ ಮೇಲೆ ಎರಡು ನಾಯಿಗಳಿರುವುದು ಕಾಣುತ್ತದೆ. ಸದ್ದಿಲ್ಲದೆ ಬಂದ ಚಿರತೆ  ಸ್ವಲ್ಪವೇ ದೂರದಲ್ಲಿ ನಾಯಿ ಹಿಡಿಯಲು ಹೊಂಚು ಹಾಕಿ ಕುಳಿತಿರುವುದು ಕಂಡುಬರುತ್ತದೆ.

ಎಚ್ಚರಗೊಂಡಿದ್ದ ನಾಯಿಯೊಂದು ಕೆಲವೇ ಕ್ಷಣದಲ್ಲಿ ಅಲ್ಲಿದ್ದ ಚಿರತೆಯನ್ನು ಗುರುತಿಸಿದೆ. ಹಾಗೂ ನಾಯಿಗಳು ಜಾಗೃತವಾಗಿವೆ. ಆದರೆ ನಾಯಿಗಳು ಬೊಗಳಬೇಕೋ ಬೇಡವೋ ಎಂಬ ಗೊಂದಲದ ಸ್ಥಿತಿಯಲ್ಲಿರುವಾಗಲೇ ಚಿರತೆ ಅವುಗಳ ಮೇಲೆ ದಾಳಿ ಮಾಡಿದೆ. ನಾಯಿಗಳು ತಕ್ಷಣವೇ ಅಲ್ಲಿಂದ ಪರಾರಿಯಾಗಿ ಅವಿತುಕೊಂಡಿವೆ. ಹೀಗಾಗಿ ಚಿರತೆಗೆ ಮೊದಲ ಪ್ರಯತ್ನದಲ್ಲಿ ನಾಯಿ ಹಿಡಿಯಲು ಸಾಧ್ಯವಾಗಲಿಲ್ಲ. ಒಂದು ನಾಯಿ ಅಂಗಳದ ಹಿಂಬದಿ ಪಕ್ಕದಲ್ಲಿದ್ದ ವಾಷಿಂಗ್ ಮೆಷಿನ್ ಪಕ್ಕದಲ್ಲಿ ಅವಿತುಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಸ್ವಲ್ಪಸಮಯದ ನಂತರ ನಾಯಿ ಹುಡುಕುತ್ತ ಬಂದ ಚಿರತೆ ಅಲ್ಲಿಗೂ ನುಗ್ಗಿ ನಾಯಿಯನ್ನು ಹೊತ್ತೊಯ್ದಿದೆ. ಆದರೆ ಅದು ಮನೆಯ ಮತ್ತೊಂದು ಪಕ್ಕದಲ್ಲಿ ನಡೆದಿದ್ದರಿಂದ ಸಿಸಿಟಿವಿ ಕ್ಯಾಮರಾ ವ್ಯಾಪ್ತಿಗೆ ಅದು ಸಿಗದ ಕಾರಣ ದೃಶ್ಯ ಸೆರೆಯಾಗಿಲ್ಲ.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಮಾರನೆ ದಿನ  ಬೆಳಿಗ್ಗೆ ಕೆಲ ಸಮಯದವರೆಗೂ ನಾಯಿಯೊಂದು ಕಾಣದ ಕಾರಣ  ಮನೆಯವರು ಅದನ್ನು ಹುಡುಕಿದ್ದಾರೆ. ಎಲ್ಲಿಯೂ ಅದು ಪತ್ತೆಯಾಗದ ಕಾರಣ ಸಿಸಿಟಿವಿ ಪರಿಶೀಲನೆ ಮಾಡಿದಾಗ ಮನೆಯಂಗಳಕ್ಕೇ ಚಿರತೆ ಬಂದಿರುವುದು ಅದರಲ್ಲಿ ಕಂಡುಬಂದಿದೆ.
ಬೆಳಕ್ಕಿಯ ದತ್ತಾತ್ರೇಯ ಭಟ್ಟರ ಮನೆ ಒಂಟಿ ಮನೆಯಲ್ಲ. ಅವರ ಮನೆಯ ಸುತ್ತಮುತ್ತ ಕೆಲಮನೆಗಳಿವೆ ಆದರೂ ಚಿರತೆ ಮನೆ ಅಂಗಳಕ್ಕೆ ಬಂದು ನಾಯಿ ಹೊತ್ತೊಯ್ದಿರುವುದು ಸ್ಥಳೀಯರಿಗೆ ಭಯವನ್ನುಂಟು ಮಾಡಿದೆ. ಇದಲ್ಲದೆ, ಈ ಘಟನೆ ನಡೆಯುವ ಮೂರ್ನಾಲ್ಕು ದಿನಗಳ ಮೊದಲು ಗ್ರಾಮದ ಮತ್ತೊಬ್ಬರು ಚಿರತೆಯನ್ನು ನೋಡಿದ್ದರಂತೆ. ಹೀಗಾಗಿ ಕಳೆದು ಕೆಲವು ದಿನಗಳಿಂದ ಚಿರತೆ ಗ್ರಾಮದಲ್ಲಿ ಓಡಾಡುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಚಿರತೆಯನ್ನು ತಕ್ಷಣ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement