ಶಿರಸಿ : ಸುಗಾವಿ ಶಾಲೆ ʼಶತಮಾನೋತ್ಸವ ಸಂಭ್ರಮʼ ಉದ್ಘಾಟನೆ-ವಿದ್ಯಾರ್ಥಿಗಳಿದ್ದರೆ ಶಾಲೆಯಲ್ಲಿ ಇಂಗ್ಲಿಷ್‌ ಮೀಡಿಯಂಗೆ ಅನುಮತಿ ನೀಡಲು ಸಿದ್ಧ ಎಂದ ಡಿಡಿಪಿಐ

ಶಾಲಾ ಶಿಕ್ಷಕರು ಹಾಗೂ ಶಾಲೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಶಿಕ್ಷಕರಿಗೆ ಸನ್ಮಾನ

ಶಿರಸಿ : 114 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನ ಸಂಭ್ರಮ ಕಾರ್ಯಕ್ರಮಕ್ಕೆ ಭಾನುವಾರ ಫೆ.25 ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಶಾಲೆಯ ನೂತನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ ಪಿ. ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಈಗ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಅಥವಾ ಅದಕ್ಕಿಂತ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಆದರೂ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ, ಪ್ರತಿವರ್ಷ ಕೆಲ ಶಾಲೆಗಳಲ್ಲಿ ಶೂನ್ಯ ಹಾಜರಾತಿಯಿಂದಾಗಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈಗ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಸೌಲಭ್ಯದ ಕೊರತೆಯಿಲ್ಲ. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಅಥವಾ ಅದಕ್ಕಿಂತ ಉನ್ನತ ಮಟ್ಟದ ಸೌಲಭ್ಯ ನೀಡಲಾಗುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆ ನೀಗಿಸಲು ಬಿಸಿಯೂಟ, ಮೊಟ್ಟೆ ಹಾಗೂ ಬಾಳೆಹಣ್ಣು, ರಾಗಿ ಮಾಲ್ಟ್‌ ಸಹ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಅನೇಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರಿದ್ದಾರೆ. ಅನೇಕ ಕಡೆ ಪದವೀಧರ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳು ಈಗ ಯಾವುದೇ ಶಾಲೆಗಳಿಗೆ ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳು ನಿಮ್ಮ ಸೇವೆಗೆ ಸದಾ ಸಿದ್ಧವಾಗಿದೆ. ಸಮಾಜ ಹಾಗೂ ಪಾಲಕರು ಸರ್ಕಾರಿ ಶಾಲೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಸುಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಕೆಗೆ ಅನುಮತಿ ನೀಡಬೇಕು ಎಂದು ಗ್ರಾಮದವರಿಂದ ಪ್ರಸ್ತಾವನೆ ಇದೆ. ನಾವು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಕೆಗೆ ಅನುಮತಿ ನೀಡಲು ತಯಾರಿದ್ದೇವೆ. ಆದರೆ ನೀವು ನಮಗೆ ೩೦ ಮಕ್ಕಳನ್ನು ಕೊಡಿ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಬಸವರಾಜ ಪಿ. ಹೇಳಿದರು.
ಸುಗಾವಿ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಬೇಕಾದ ಶಿಕ್ಷಕರ ಸಂಖ್ಯೆ ಇದೆ. ಅತ್ಯುತ್ತಮ ಸೌಕರ್ಯವೂ ಇದೆ. ಒಂದು ವೇಳೆ ಶಿಕ್ಷಕರು ಬೇಕಾದರೆ ಅವರನ್ನೂ ನಾವು ಒದಗಿಸಬಹುದು. ಯಾಕೆಂದರೆ ಶಿರಸಿ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಬಹುತೇಕ ಇಲ್ಲ. ಶಾಲೆಗೆ ಉತ್ತಮ ಪರಿಸರ ಇದೆ. ಈ ಬಗ್ಗೆ ನಾನು ಮೇಲಧಿಕಾರಿಗಳಿಗೆ ವರದಿಯನ್ನೂ ಕೊಡುತ್ತೇವೆ. ಆದರೆ ಇಂಗ್ಲಿಷ್‌ ಮೀಡಿಯಂ ಆರಂಭಿಸಲು ಬೇಕಾದ ೩೦ ವಿದ್ಯಾರ್ಥಿಗಳ ಸಂಖ್ಯೆಯಿದ್ದರೆ ಈ ಬಗ್ಗೆ ಖಂಡಿತ ಪರಿಶೀಲಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ಪ್ರಮುಖ ಸುದ್ದಿ :-   ಸವದತ್ತಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿದ 46 ಮಂದಿ ಅಸ್ವಸ್ಥ
ಶ್ರೀಪಾದರಾವ್‌ ಕಲ್ಗುಂಡಿಕೊಪ್ಪ ಸ್ಮರಣಾರ್ಥ ರಂಗ ಮಂದಿರಕ್ಕೆ ದೇಣಿಗೆ : ಜಯದೇವ ರಾವ್‌ ಕಲ್ಗೊಂಡುಕೊಪ್ಪ ಅವರಿಗೆ ಸನ್ಮಾನ

ಶಾಲೆಯ ನೂತನ ರಂಗ ಮಂದಿರಕ್ಕೆ ತಬಲಾ ವಾದಕ, ದಿವಂಗತ ಶ್ರೀಪಾದರಾವ್‌ ಕಲ್ಗುಂಡಿಕೊಪ್ಪ ಅವರ ಹೆಸರನ್ನು ಇಡಲಾಗಿದ್ದು, ಅವರ ಪುತ್ರ ಜಯದೇವ ರಾವ್‌ ಮಾತನಾಡಿ, ನನ್ನ ತಂದೆ ಶ್ರೀಪಾದರಾವ್‌ ಕಲ್ಗುಂಡಿಕೊಪ್ಪ ಅವರು ಕೇವಲ ಆರನೇ ತರಗತಿ ವರೆಗೆ ಮಾತ್ರ ಓದಿದ್ದರು. ಆದರೆ ಅವರಿಗೆ ಆರು ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವಿತ್ತು. ಅವರು ಸಂಗೀತ, ಕೃಷಿ, ಸಾಹಿತ್ಯ, ಇತಿಹಾಸ, ಭೂಗೋಳ ಹಾಗೂ ಅಧ್ಯಾತ್ಮದಲ್ಲಿ ಅಪಾರ ಜ್ಞಾನ ಹೊಂದಿದ್ದರು. ಅವರು ಗುರುಕುಲ ಶಿಕ್ಷಣ ಪದ್ಧತಿಯಡಿ ಅನೇಕ ಸಂಗೀತದ ವಿದ್ಯಾರ್ಥಿಗಳನ್ನು ಮನೆಯಲ್ಲಿಟ್ಟುಕೊಂಡು ಊಟ ಹಾಕಿ ಸಂಗೀತ ಶಿಕ್ಷಣ ನೀಡಿದ್ದಾರೆ. ತಂದೆಯವರು ಕೇವಲ ಆರನೇ ತರಗತಿ ವರೆಗೆ ಓದಿದ್ದರೂ ಅವರಿಂದ ತಬಲಾ ಹಾಗೂ ಸಂಗೀತ ಕಲಿತವರು ಎಂ.ಎ.ಹಾಗೂ ಪಿಎಚ್‌ಡಿ ಮಾಡಿದ್ದಾರೆ ಎಂದು ಹೇಳುತ್ತ ಭಾವುಕರಾದರು.

ಡಯಟ್‌ ಪ್ರಾಂಶುಪಾಲರಾದ ಎಂ.ಎಸ್‌.ಹೆಗಡೆ ಮಾತನಾಡಿ, ಯಾವುದೇ ಶಾಲೆ ಅಥವಾ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಜನರ ಸಹಭಾಗಿತ್ವ ಮುಖ್ಯ. ಸರ್ಕಾರಿ ಶಾಲೆಗಳ ಶಿಕ್ಷಕರ ಗುಣಮಟ್ಟವೂ ಉತ್ತಮವಾಗಿರುತ್ತದೆ. ಯಾಕೆಂದರೆ ಸರ್ಕಾರಿ ಶಾಲೆ ಶಿಕ್ಷಕರಾಗಲು ಸಿಇಟಿ ಹಾಗೂ ಟಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಹೀಗಾಗಿ ಸರ್ಕಾರಿ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ಸಿ.ನಾಯ್ಕ, ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಸಾಗರ ಕಾಲೇಜಿನ ಪ್ರಾಂಶುಪಾಲರಾದ ಎ.ಎಸ್‌.ಲಕ್ಷ್ಮೀಶ ಅವರು ಮಾತನಾಡಿದರು.

ಪ್ರಮುಖ ಸುದ್ದಿ :-   ಮೈಸೂರು: ಮಲಗಿದ್ದ ಸ್ಥಿತಿಯಲ್ಲೇ ಒಂದೇ ಕುಟುಂಬದ ನಾಲ್ವರು ಸಾವು

ಗ್ರಾಪಂ ಅಧ್ಯಕ್ಷೆ ಲಲಿತಾ ಅನಂತ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಮಧುಕೇಶ್ವರ ಡಿ.ಚನ್ನಯ್ಯ, ಗ್ರಾಪಂ ಸದಸ್ಯರಾದ ಗಣೇಶ ಎನ್‌.ಜೋಶಿ, ಲಲಿತಾ ಎಂ.ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಯಂಕ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಅಧ್ಯಕ್ಷ ಸುರೇಶ ಪಟಗಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರ ಎನ್‌.ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ವಿ.ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿಜಯಕುಮಾರ ಎಸ್‌. ರಾವ್‌ ಸ್ವಾಗತಿಸಿದರು. ಶಿಕ್ಷಕ ಅಶೋಕ ಪಟಗಾರ ಶಾಲೆಯ ಬಗ್ಗೆ ಪರಿಚಯ ಮಾಡಿಕೊಟ್ಟರು.ಆಕಾಶ ನಾಗೇಶ ಶೇಟ್‌ ಕಾರ್ಯಕ್ರಮ ನಿರೂಪಿಸಿದರು.
ರಂಗ ಮಂದಿರವನ್ನು ಜಯದೇವ ರಾವ್‌ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಶಾಲೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಶಿಕ್ಷಕರನ್ನು, ಶಾಲೆಯ ರಂಗ ಮಂದಿರಕ್ಕೆ ದೇಣಿಗೆ ನೀಡಿದ ಜಯದೇವ ರಾವ್‌ ಕಲ್ಗೊಂಡುಕೊಪ್ಪ ಅವರನ್ನು ಹಾಗೂ ಶತಮಾನೋತ್ಸವಕ್ಕಾಗಿ ಕೆಲಸ ಮಾಡಿದವರನ್ನು ಸನ್ಮಾನಿಸಲಾಯಿತು.

ಬಾಕ್ಸ್‌….

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement