ನವದೆಹಲಿ : ಭಾರತವು ಧರ್ಮಶಾಲಾದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಗೆದ್ದ ಒಂದು ದಿನದ ನಂತರ, ರೋಹಿತ್ ಶರ್ಮಾ ತಂಡವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಭಾನುವಾರ ವಿಶ್ವ ಕ್ರಿಕೆಟ್ ಆಡಳಿತ ಮಂಡಳಿ(ಐಸಿಸಿ)ಯು ಬಿಡುಗಡೆ ಮಾಡಿದ ಇತ್ತೀಚಿನ ಪೆಕಿಂಗ್ ಆರ್ಡರ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೆ ಏರಿದೆ.
ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಈಗ ಕ್ರಿಕೆಟ್ ಆಟದ ಎಲ್ಲ ಮೂರು ಸ್ವರೂಪಗಳಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದೆ.
ಪ್ರಸ್ತುತ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್‌ನ ಫಲಿತಾಂಶ ಯಾವುದೇ ಬಂದರೂ ಭಾರತದ ತಂಡವು ತಂಡವು ಅಗ್ರಸ್ಥಾನದಲ್ಲಿ ಉಳಿಯುತ್ತದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ಆಸ್ಟ್ರೇಲಿಯಾವು ವೆಲ್ಲಿಂಗ್‌ಟನ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 172 ರನ್‌ಗಳ ಜಯಗಳಿಸಿದ ನಂತರ ಎರಡು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
122 ಐಸಿಸಿ ರೇಟಿಂಗ್ ಅಂಕಗಳೊಂದಿಗೆ ಭಾರತ ಅಗ್ರಸ್ಥಾನಕ್ಕೆ ಏರಿದ್ದು, ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾಕ್ಕಿಂತ ಐದು ಅಂಕ ಮುಂದಿದೆ. 117 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನಲ್ಲಿದ್ದರೆ ಇಂಗ್ಲೆಂಡ್ 111 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಏಕದಿನದ(ODI) ಪಂದ್ಯಗಳಲ್ಲಿ, ಭಾರತ 121 ರೇಟಿಂಗ್ ಅಂಕಗಳನ್ನು ಪಡೆದು ಮೊದಲನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ 118 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಟಿ20ಯಲ್ಲಿ ಭಾರತ 266 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದು ಮೊದಲನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ (256) ಎರಡನೇ ಸ್ಥಾನದಲ್ಲಿದೆ.
ಭಾರತವು ಸೆಪ್ಟೆಂಬರ್ 2023 ರಿಂದ ಜನವರಿ 2024 ರವರೆಗೆ ವಿಶ್ವದ ನಂ.1 ಟೆಸ್ಟ್ ತಂಡವಾಗಿತ್ತು, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಡ್ರಾ ನಂತರ ಎರಡನೇ ಸ್ಥಾನಕ್ಕೆ ಕುಸಿದಿತ್ತು. ತವರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ ಟೆಸ್ಟ್ ಶ್ರೇಯಾಂಕದಲ್ಲಿ ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತ್ತು.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತವು ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 28 ರನ್‌ಗಳಿಂದ ಸೋತಿತು. ಆದರೆ ನಂತರ ಆತಿಥೇಯ ತಂಡ ಭಾರತವು ಉಳಿದ ನಾಲ್ಕು ಟೆಸ್ಟ್‌ಗಳನ್ನು ಭರ್ಜರಿ ಗೆಲುವು ಸಾಧಿಸಿತು. ವಿಶಾಖಪಟ್ಟಣಂ, ರಾಜಕೋಟ್, ರಾಂಚಿ ಮತ್ತು ಧರ್ಮಶಾಲಾದಲ್ಲಿನ ನಡೆದ ಟೆಸ್ಟ್ ಪಂದ್ಯಗಳ ಗೆಲುವುಗಳು ಭಾರತವು ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಮರಳಿ ಪಡೆಯಲು ಸಹಾಯ ಮಾಡಿತು.
ನಿಮ್ಮ ಕಾಮೆಂಟ್ ಬರೆಯಿರಿ