ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಮಿರ್ಜಾನ-ಕೋಡ್ಕಣಿಯ ಹೆಸರಾಂತ ವೈದ್ಯರಾಗಿದ್ದ ಡಾ. ರತ್ನಾಕರ ರಾಮ ಶಾನಭಾಗ (77) ಗುರುವಾರ ತಡರಾತ್ರಿ ನಿಧನರಾಗಿದ್ದಾರೆ.
ಕಳೆದ ವಾರ ಮಿರ್ಜಾನ ಬಳಿ ನಡೆದ ರಿಕ್ಷಾ ಅಪಘಾತದಲ್ಲಿ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಅಪಾರ ಬಂಧು ಬಳಗ ಹಾಗೂ ಅಭಿಮಾನಿಗಳನ್ನು ಅಗದ್ದಾರೆ.
ಕೋಡ್ಕಣಿಯ ಬಾಳೇರಿ ಕುಟುಂಬದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣ ಕೊಡ್ಕಣಿಯಲ್ಲಿ, ಮಾಧ್ಯಮಿಕ ಶಿಕ್ಷಣ ಗಿಬ್ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದರು. 1963ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 13ನೇ ರ್ಯಾಂಕ್ ಗಳಿಸಿದ್ದರು. ನಂತರ ವೈದಕೀಯ ಶಿಕ್ಷಣವನ್ನು ಹುಬ್ಬಳ್ಳಿಯ ಕೆ.ಎಂ.ಸಿಯಲ್ಲಿ ಅಧ್ಯಯನ ಮಾಡಿದ್ದರು. ನಗರದಲ್ಲಿ ಲಕ್ಷಾಂತರ ರೂಪಾಯಿಗಳ ಸಂಪಾದನೆಗೆ ಅವಕಾಶ ಇದ್ದರೂ ಊರಲ್ಲಿ ಜನ ಸೇವೆ ಮಾಡಬೇಕೆಂಬ ಹಂಬಲದಿಂದ ತಮ್ಮ ತಂದೆ ತಾಯಿಯವರ ಹೆಸರಲ್ಲಿ ಸೀತಾರಾಮ ಕ್ಲಿನಿಕ್ ಪ್ರಾರಂಭಿಸಿ ಹಳ್ಳಿಯ ಜನರಿಗೆ ವೈದ್ಯಕೀಯ ಸೇವೆ ನೀಡಿದ್ದ ಧೀಮಂತ ವ್ಯಕ್ತಿತ್ವ ಅವರದ್ದು.
ಪ್ರತಿಷ್ಠಿತ ಕೆನರಾ ಎಜುಕೇಶನ್ ಸೊಸೈಟಿಯ ಸದಸ್ಯರಾಗಿ ನಂತರ 1994 ರಿಂದ ಸುಮಾರು ಎರಡು ದಶಕಗಳ ಕಾಲ ಕಾರ್ಯಾಧ್ಯಕ್ಷರಾಗಿ ಅನಂತರ ಅಧ್ಯಕ್ಷರಾಗಿ ಗಿಬ್ ಸಮೂಹ ಸಂಸ್ಥೆಯ ಎಲ್ಲಾ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಇವರ ನೇತೃತ್ವದಲ್ಲಿ ಗಿಬ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಪ್ರಾರಂಭ ಹಾಗೂ 2009ರಲ್ಲಿ ಗಿಬ್ ಹೈಸ್ಕೂಲಿನ ಶತಮಾನೋತ್ಸವ ಅರ್ಥಪೂರ್ಣವಾಗಿ ನಡೆದಿತ್ತು. ಕೋಡ್ಕಣಿಯ ಪ್ರಾಥಮಿಕ ಶಾಲೆ ಹಾಗೂ ಜನತಾ ವಿದ್ಯಾಲಯ ಕೋಡ್ಕಣಿಯ ಪ್ರಾಥಮಿಕ ಶಾಲೆ ಹಾಗೂ ಮಿರ್ಜಾನ ಜನತಾ ವಿದ್ಯಾಲಯದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ, ಕೋಡ್ಕಣಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ, ಕೋಡ್ಕಣಿಯ ವೀರ ವಿಠಲ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಹೆರವಟ್ಟಾ ಶ್ರೀ ಗುರು ರಾಘವೇಂದ್ರ ಮಠದ ಸದಸ್ಯರಾಗಿ, ಕೋಡ್ಕಣಿಯ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ