ಭಾರತದ ವಿರುದ್ಧ ಗುಟುರು ಹಾಕಿ ಈಗ ಮೆತ್ತಗಾದ ಮಾಲ್ಡೀವ್ಸ್ ಅಧ್ಯಕ್ಷ : ಸಾಲ ತೀರಿಸಲು ವಿನಾಯಿತಿ ನೀಡಿ ಎಂದು ಅಂಗಲಾಚಿದ ಮುಯಿಝ್ಝು

ಮಾಲೆ: ಚೀನಾ ಜೊತೆ ಸ್ನೇಹ ಬೆಳೆಸಲು ಭಾರತ ವಿರೋಧಿ ಧೋರಣೆಗಳನ್ನು ಬಲವಾಗಿ ಪ್ರತಿಪಾದಿಸುವ ಮೂಲಕ ಸುದ್ದಿಯಲ್ಲಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝ್ಝು ಈಗ ಮೆತ್ತಗಾದಂತೆ ತೋರುತ್ತಿದೆ. ಭಾರತವು ತನ್ನ ದೇಶದ ‘ಅತಿ ಆಪ್ತ ಮಿತ್ರದೇಶ’ವಾಗಿ ಉಳಿಯಲಿದೆ ಎಂದು ಹೇಳಿರುವ ಮುಯಿಝ್ಝು, ಭಾರತವು ನೀಡಿದ್ದ ಸಾಲದ ಮೇಲೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ವರ್ಷದ ಅಂತ್ಯಕ್ಕೆ ಭಾರತಕ್ಕೆ ಮಾಲ್ಡೀವ್ಸ್ ಅಂದಾಜು 400.9 ಮಿಲಿಯನ್ ಡಾಲರ್ ಸಾಲ ಬಾಕಿ ಉಳಿಸಿಕೊಳ್ಳಲಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಪದಗ್ರಹಣ ಮಾಡಿದ ಚೀನಾ ಪರ ಒಲವುಳ್ಳ ಮುಯಿಝ್ಝು, ತನ್ನ ನೆಲದಲ್ಲಿರುವ ಭಾರತೀಯ ಸೇನೆ ಹೊರ ನಡೆಯಬೇಕು, ಮಾಲ್ಡೀವ್ಸ್‌ನ ಮೂರು ವಿಮಾನಯಾನ ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸುತ್ತಿರುವ ಭಾರತೀಯ ಸೇನಾ ಸಿಬ್ಬಂದಿ ಮೇ 10ರ ಒಳಗೆ ತಮ್ಮ ದೇಶದಿಂದ ಜಾಗ ಖಾಲಿ ಮಾಡಬೇಕು ಎಂದು ತಾಕೀತು ಮಾಡಿ ಗಡುವು ನೀಡಿದ್ದರು. ಇದರ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು.

ಈವರೆಗೆ ಭಾರತದ ವಿರುದ್ಧ ಗುಟುರು ಹಾಕಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್ ಮುಯಿಝ್ಝು ಅಧಿಕಾರ ವಹಿಸಿಕೊಂಡ ಬಳಿಕ ಗುರುವಾರ ಸ್ಥಳೀಯ ಮಾಧ್ಯಮಕ್ಕೆ ತಮ್ಮ ಮೊದಲ ಸಂದರ್ಶನ ನೀಡಿದ್ದು, ಮಾಲ್ಡೀವ್ಸ್‌ಗೆ ನೆರವು ಒದಗಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ ಮತ್ತು ಅಪಾರ ಸಂಖ್ಯೆಯ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಭಾರತವನ್ನು ಪ್ರಶಂಸಿಸುವ ಮೂಲಕ ರಾಗ ಬದಲಿಸಿದ್ದಾರೆ.
ಭಾರತವು ಮಾಲ್ಡೀವ್ಸ್‌ನ ಅತ್ಯಂತ ಆಪ್ತ ಮಿತ್ರದೇಶವಾಗಿ ಇರುವುದು ಮುಂದುವರಿಯಲಿದೆ. ಇದರಲ್ಲಿ ಬೇರೆ ಯಾವ ಪ್ರಶ್ನೆಯೂ ಇಲ್ಲ ಎಂದು ಅವರು ಹೇಳಿದ್ದಾರೆ. ಮಾಲ್ಡೀವ್ಸ್‌ನ ತನ್ನ ‘ಮಿಹಾರು’ದಲ್ಲಿ ದ್ವಿವೇಹಿ ಭಾಷೆಯಲ್ಲಿ ಪ್ರಕಟವಾದ ಅಧ್ಯಕ್ಷರ ಭಾಷಣದ ಕೆಲವು ಭಾಗಗಳನ್ನು ಸುದ್ದಿ ಪೋರ್ಟಲ್ ಎಡಿಷನ್.ಎಂವಿ ಪ್ರಕಟಿಸಿದೆ.
ಯೋಜನೆಯಂತೆ ಭಾರತದ ಸೇನಾ ಪಡೆಯ ಮೊದಲ ಬ್ಯಾಚ್, ಈ ತಿಂಗಳಲ್ಲಿ ದ್ವೀಪ ರಾಷ್ಟ್ರದಿಂದ ಮರಳಿದ ಬಳಿಕ ಭಾರತವನ್ನು ಪ್ರಶಂಸಿಸುವ ಹೇಳಿಕೆ ಹೊರಬಿದ್ದಿದೆ.

ಪ್ರಮುಖ ಸುದ್ದಿ :-   'ಅಜ್ಞಾನ, ಸೋಮಾರಿತನ, ದುರಹಂಕಾರ' ಇದುವೇ ಕಾಂಗ್ರೆಸ್‌ ಯಶಸ್ಸು ಪಡೆಯಲು ಇರುವ ಅಡ್ಡಿ : ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ ಅಭಿಪ್ರಾಯ

ಈ ಹಿಂದಿನ ಸರ್ಕಾರಗಳು ಭಾರತದಿಂದ ಸತತವಾಗಿ ಪಡೆದುಕೊಂಡಿರುವ ಭಾರಿ ಮೊತ್ತದ ಸಾಲವನ್ನು ಮರುಪಾವತಿ ಮಾಡಲು ಮಾಲ್ಡೀವ್ಸ್‌ಗೆ ಸಾಲ ವಿನಾಯಿತಿ ಕ್ರಮಗಳನ್ನು ಒದಗಿಸುವಂತೆ ಭಾರತಕ್ಕೆ ಮುಯಿಝ್ಝು ಮನವಿ ಮಾಡಿದ್ದಾರೆ. ನಾವು ಹಿಂದಿನಿಂದ ಭಾರಿ ದೊಡ್ಡ ಪ್ರಮಾಣದ ಸಾಲವನ್ನು ಭಾರತದಿಂದ ತೆಗೆದುಕೊಂಡಿದ್ದೆವು. ಹೀಗಾಗಿ ಈ ಸಾಲದ ಮರುಪಾವತಿ ಮಾಡುವ ನಿಟ್ಟಿನಲ್ಲಿ ವಿನಾಯಿತಿಗಳನ್ನು ಪಡೆಯಲು ನಾವು ಚರ್ಚೆಗಳನ್ನು ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಭಾರತವು ಮಾಲ್ಡೀವ್ಸ್‌ ನಲ್ಲಿ ಪ್ರಸ್ತುತ ನಡೆಯುತ್ತಿರುವ ಯಾವುದೇ ಯೋಜನೆಗಳನ್ನು ತಡೆಹಿಡಿಯದೆ, ಅದೇ ವೇಗದಲ್ಲಿ ಅವುಗಳನ್ನು ಮುಂದುವರಿಸಬೇಕಿದೆ. ಭಾರತ ಮತ್ತು ಮಾಲ್ಡೀವ್ಸ್ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವ ಯಾವುದೇ ಕಾರಣ ನನಗೆ ಕಾಣುತ್ತಿಲ್ಲ” ಎಂದು ಹೇಳಿದ್ದಾರೆ.

ಭಾರತದಿಂದ ಮಾಲ್ಡೀವ್ಸ್ ವಿಪರೀತ ಸಾಲಗಳನ್ನು ಪಡೆದಿದೆ. ಸಂಬಂಧ ಹಳಸಿದ ನಂತರ ಭಾರತದ ಪ್ರವಾಸಿಗರು ಕಡಿಮೆಯಾಗಿ ಅದರ ಪ್ರವಾಸೋದ್ಯಮವೂ ಕುಗ್ಗಿದೆ. ಭಾರತದಿಂದ ಪಡೆದ ಸಾಲ ಮಾಲ್ಡೀವ್ಸ್ಗೆ ಭರಿಸಲು ಸಾಧ್ಯವಾಗದಷ್ಟು ಇದೆ. ಈ ಸಲುವಾಗಿ ಅವರು ಮಾಲ್ಡೀವ್ಸ್‌ನ ಆರ್ಥಿಕ ಸಾಮರ್ಥ್ಯಕ್ಕೆ ತಕಕಂತೆ ಭಾರತದ ಸಾಲದ ಮರುಪಾವತಿಗೆ ವಿನಾಯತಿ ಕಂಡುಕೊಳ್ಳಲು ಭಾರತ ಸರ್ಕಾರದ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅವರ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.
ಈ ಹಿಂದಿನ ಭಾರತ ಪರವಾಗಿದ್ದ ಇಬ್ರಾಹಿಂ ಮೊಹಮದ್ ಸಾಲಿಹ್ ಅವರ ಸರ್ಕಾರವು ಎಕ್ಸ್‌ಪೋರ್ಟ್ ಆಂಡ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಕ್ಸಿಮ್ ಬ್ಯಾಂಕ್) 1.4 ಮಿಲಿಯನ್ ಡಾಲರ್ ಸಾಲ ಪಡೆದಿತ್ತು. ಜೊತೆಗೆ ಮಾಲ್ಡೀವ್ಸ್ ಈ ವರ್ಷದ ಅಂತ್ಯಕ್ಕೆ ಭಾರತಕ್ಕೆ ಮರಳಿ ಕೊಡಬೇಕಾದ ಹಣವು 6.2 ಬಿಲಿಯನ್ ಮಾಲ್ಡೀವಿಯನ್ ರುಫಿಯಾದಷ್ಟು ಇರಲಿದೆ ಎಂದು ಮುಯಿಝ್ಝು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಶವವಾಗಿ ಪತ್ತೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement