ವಾಯವ್ಯ ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; 5 ಚೀನೀ ಪ್ರಜೆಗಳು ಸೇರಿ 6 ಮಂದಿ ಸಾವು

ಪೇಶಾವರ: ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಆತ್ಮಾಹುತಿ ಬಾಂಬರ್‌ ದಾಳಿಯಲ್ಲಿ ಐವರು ಚೀನಾ ಪ್ರಜೆಗಳು ಸಾವಿಗೀಡಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ಲಾಮಾಬಾದಿನಿಂದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ದಾಸುನಲ್ಲಿರುವ ತಮ್ಮ ಶಿಬಿರಕ್ಕೆ ತೆರಳುತ್ತಿದ್ದ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ವಾಹನಕ್ಕೆ ಆತ್ಮಾಹುತಿ ಬಾಂಬರ್ ತನ್ನ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಅಲಿ ಗಂದಾಪುರ್ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ, ಮಂಗಳವಾರದ ದಾಳಿಯ ಹೊಣೆಯನ್ನು ಈವರೆಗೆ ಯಾರೂ ವಹಿಸಿಕೊಂಡಿಲ್ಲ.

ದಾಳಿಯಲ್ಲಿ ಐವರು ಚೀನಿ ಪ್ರಜೆಗಳು ಮತ್ತು ಅವರ ಪಾಕಿಸ್ತಾನಿ ಚಾಲಕ ಸಾವಿಗೀಡಾಗಿದ್ದಾರೆ ಎಂದು ಮೊಹಮ್ಮದ್ ಅಲಿ ಗಂಡಾಪುರ ಹೇಳಿದ್ದಾರೆ. ಖೈಬರ್ ಪಖ್ತುಂಖ್ವಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಗಾವಲು ಪಡೆಯಲ್ಲಿದ್ದ ಉಳಿದವರಿಗೆ ರಕ್ಷಣೆ ನೀಡಲಾಗಿದೆ ಎಂದು ಮೊಹಮ್ಮದ್ ಅಲಿ ಗಂಡಾಪುರ ತಿಳಿಸಿದ್ದಾರೆ.

ಚೀನಾದ ಪ್ರಜೆಗಳ ಮೇಲಿನ ದಾಳಿಯು ಪಾಕಿಸ್ತಾನದ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಗಂಭೀರ ಬೆದರಿಕೆಯಾಗಿದೆ ಎಂದು ವೀಕ್ಷಕರು ಹೇಳಿದ್ದಾರೆ. ಬೀಜಿಂಗ್ ತನ್ನ ನಾಗರಿಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಪಾಕಿಸ್ತಾನ ಸೇನೆಗೆ ಹಲವು ಬಾರಿ ಮನವಿ ಮಾಡಿದೆ. ಆದರೂ ಇಂತಹ ಘಟನೆಗಳು ಸಂಭವಿಸುತ್ತಿವೆ. ದಾಸು ಪ್ರದೇಶವು ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ಪ್ರಮುಖ ಅಣೆಕಟ್ಟಿನ ತಾಣವಾಗಿದ್ದು, ಈ ಪ್ರದೇಶದಲ್ಲಿ ಈ ಹಿಂದೆಯೂ ದಾಳಿ ನಡೆದಿತ್ತು. 2021ರಲ್ಲಿ ಬಸ್‌ನಲ್ಲಿ ನಡೆದ ಸ್ಫೋಟದಲ್ಲಿ ಒಂಬತ್ತು ಚೀನಾ ಪ್ರಜೆಗಳು ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement