ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು…! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

ದುಬೈ : ದುಬೈ ಸೇರಿದಂತೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ ಹಲವೆಡೆ ದಿಢೀರನೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ದುಬೈನಲ್ಲಿ ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಮಂಗಳವಾರ ಏಕಾಏಕಿ ಮಳೆಯಾಗಿದ್ದು ಒಂದೂವರೆ ವರ್ಷದಲ್ಲಿ ಸುರಿಯಬೇಕಿದ್ದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಚಂಡಮಾರುತದ ಪರಿಣಾಮ ಈ ಮಳೆಯಾಗಿದೆ ಎಂದು ಹೇಳಲಾಗಿದೆ.
ಮಂಗಳವಾರದ ಅಂತ್ಯದ ವೇಳೆಗೆ, 142 ಮಿಲಿಮೀಟರ್‌ಗಳಿಗಿಂತ ಹೆಚ್ಚು (5.59 ಇಂಚುಗಳು) ಮಳೆಯಾಗಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಾಸರಿ ವರ್ಷವು 94.7 ಮಿಲಿಮೀಟರ್ (3.73 ಇಂಚುಗಳು) ಮಳೆಯಾಗಿದೆ,

ಭಾರೀ ಮಳೆಯಿಂದಾಗಿ ಜನಜೀವನ ತತ್ತರಿಸಿದ್ದು, ಸುಮಾರು 500 ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 28 ಭಾರತೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೀರು ತುಂಬಿದ ರನ್ ವೇಯಲ್ಲಿ ವಿಮಾನಗಳು ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಯುಇಎ, ಓಮನ್, ಬಹರೇನ್ ಸೇರಿದಂತೆ ಹಲವು ಅರಬ್ ದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. ಹವಾಮಾನ ಇಲಾಖೆ ಪ್ರಕಾರ 1949ರ ನಂತರ ಮಳೆಯ ಅಂಕಿ-ಅಂಶ ದಾಖಲಾತಿ ಇಡುವುದು ಆರಂಭವಾದಾಗಿನಿಂದ ಈವರೆಗೆ ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿದ್ದೇ ಇಲ್ಲ.

ಭಾರೀ ಮಳೆಯಿಂದಾಗಿ ಸ್ಥಳೀಯ ಸರ್ಕಾರ ಮಂಗಳವಾರ ಜನರನ್ನು ತಮ್ಮ ಮನೆಗಳಲ್ಲಿ ಇರುವಂತೆ ಸೂಚನೆ ನೀಡಿತ್ತು. ಶಾಲೆ, ಕಾಲೇಜುಗಳಿಗೆ ಆನ್‌ಲೈನ್‌ ತರಗತಿ ನಡೆಸುವಂತೆ ಹಾಗೂ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ನೌಕರರು ಮನೆಯಲ್ಲೇ ಕೆಲಸ ಮಾಡುವಂತೆ ಸೂಚನೆ ನೀಡಿತ್ತು.
ದುಬೈ, ಅಬುಧಾಬಿ, ಶಾರ್ಜಾ, ಕತಾರ್, ಸೌದಿ ಅರೇಬಿಯಾದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ಹಜ್ ಯಾತ್ರೆ ವೇಳೆ ಶಾಖದ ಅಲೆಯಿಂದಾಗಿ 68 ಭಾರತೀಯರು ಸೇರಿ 1000ಕ್ಕೂ ಹೆಚ್ಚು ಸಾವು ; ವರದಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement