ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

ಉತ್ಸಾಹ ಮತ್ತು ಸಾಧನೆಗೆ ಯಾವುದೇ ಮಿತಿಯಿಲ್ಲ. ಇದಕ್ಕೆ ಜಿಲುಮೋಲ್ ಮೇರಿಯೆಟ್ ಥಾಮಸ್ ಉತ್ತಮ ಉದಾಹರಣೆಯಾಗಿದ್ದಾರೆ. ಎರಡೂ ಕೈಗಳಿಲ್ಲದ ಕೇರಳದ 32 ವರ್ಷದ ಈ ಮಹಿಳೆ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಿಲುಮೋಲ್ ಮೇರಿಯೆಟ್ ಥಾಮಸ್ ಅವರು ತನ್ನ ಪಾದಗಳ ಮೂಲಕ ಕಾರನ್ನು ಓಡಿಸುತ್ತಾರೆ.
ಆರು ವರ್ಷಗಳ ಸುದೀರ್ಘ ಕಾಯುವಿಕೆ ಹಾಗೂ ಹೋರಾಟದ ನಂತರ, ಅವರು ಅಂತಿಮವಾಗಿ 2023 ರಲ್ಲಿ ತಮ್ಮ ನಾಲ್ಕು ಚಕ್ರ ವಾಹನಗಳ ಚಾಲನಾ ಪರವಾನಗಿ ಪಡೆದರು, ಚಾಲನಾ ಪರವಾನಗಿಯನ್ನು ಸ್ವತಃ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲಕ್ಕಾಡ್‌ನಲ್ಲಿ ವೈಯಕ್ತಿಕವಾಗಿ ಥಾಮಸ್‌ ಅವರಿಗೆ ನೀಡಿದರು.

ಜಿಲುಮೋಲ್ ಮೇರಿಯೆಟ್ ಥಾಮಸ್ ಎರಡು ಕೈ ತೋಳುಗಳಿಲ್ಲದೆ ಜನಿಸಿದರು. ಆದರೆ ಅವರ ಧೈರ್ಯ ಮತ್ತು ದೃಢಸಂಕಲ್ಪ ಅವರನ್ನು ಈ ಸಾಧನೆಗೆ ಅವರನ್ನು ಪ್ರೇರೇಪಿಸಿತು. ಕೇರಳ ರಾಜ್ಯ ಅಂಗವಿಕಲರ ಆಯೋಗ ಮತ್ತು ಕೊಚ್ಚಿಯಲ್ಲಿರುವ ಖಾಸಗಿ ಕಂಪನಿಯ ಸಹಾಯದಿಂದ ಅವರು ವಾಹನ ಚಾಲನೆ ಅನುಕೂಲವಾಗುವ ರೀತಿಯಲ್ಲಿ ಕಾರನ್ನು ಮಾರ್ಪಡಿಸಿಕೊಂಡರು.
ಜಿಲುಮೋಲ್ ಮೇರಿಯೆಟ್ ಥಾಮಸ್ ಯಾವಾಗಲೂ ಕಾರನ್ನು ಓಡಿಸುವ ಕನಸು ಕಾಣುತ್ತಿದ್ದರು. ಅದಕ್ಕಾಗಿ ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದರು. ಆದರೆ ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು. ಆದರೆ ಚಾಲನಾ ಪರವಾನಗಿ ಪಡೆಯುವ ತಮ್ಮ ಮಹಾತ್ವಾಕಾಂಕ್ಷೆಯಿಂದ ಹಿಂದೆ ಸರಿಯಲಿಲ್ಲ. ನಂತರ ಅವರು ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ನ್ಯಾಯಾಲಯದ ಮಧ್ಯಪ್ರವೇಶಿಸಿದ ನಂತರ, ಥಾಮಸ್ ಅವರು ಚಾಲನಾ ಪರೀಕ್ಷೆ ತೆಗೆದುಕೊಂಡರು ಮತ್ತು ಮಾರ್ಪಡಿಸಿದ ಕಾರನ್ನು MVD ಅಧಿಕಾರಿಗಳ ಮುಂದೆ ಓಡಿಸಿದರು. ಆದರೆ, ಆಕೆಗೆ ಚಾಲನಾ ಪರವಾನಗಿ ನೀಡಲು ಅಧಿಕಾರಿಗಳು ಮತ್ತೆ ನಿರಾಕರಿಸಿದರು. ಅಂತಿಮವಾಗಿ, ಅವರು ವಿಕಲಾಂಗ ವ್ಯಕ್ತಿಗಳ ಕೇರಳ ರಾಜ್ಯ ಆಯೋಗವನ್ನು ಸಂಪರ್ಕಿಸಿದರು. ನಂತರ ಇಂದೋರ್‌ನ ವಿಕ್ರಮ ಅಗ್ನಿಹೋತ್ರಿ ಅವರಿಗೆ ಲೈಸನ್ಸ್‌ ನೀಡಿದ ಉದಾಹರಣೆಯನ್ನು ಆಯೋಗವು ಉಲ್ಲೇಖಿಸಿತು. ವಿಕ್ರಮ ಅಗ್ನಿಹೋತ್ರಿ ಅವರು ಡ್ರೈವಿಂಗ್ ಲೈಸೆನ್ಸ್ ಪಡೆದ ತೋಳಿಲ್ಲದ ಭಾರತದ ಮೊದಲ ವ್ಯಕ್ತಿಯಾಗಿದ್ದಾರೆ.
ಇದನ್ನು ಅನುಸರಿಸಿ, ಅಂತಿಮವಾಗಿ ಅವರಿಗೆ ಪರವಾನಗಿ ನೀಡಲಾಯಿತು. “ಚಲನಶೀಲತೆ ನನ್ನ ದೊಡ್ಡ ನ್ಯೂನತೆಯಾಗಿದೆ ಮತ್ತು ಈಗ ನಾನು ಪರವಾನಗಿ ಪಡೆದಿದ್ದೇನೆ ಮತ್ತು ನನಗಿದ್ದ ದೊಡ್ಡ ತೊಂದರೆಯನ್ನು ನಿವಾರಿಸಿಕೊಂಡಿದ್ದೇನೆ ಎಂದು ನನಗೆ ಸಂತೋಷವಾಗಿದೆ” ಎಂದು ಥಾಮಸ್ ತಿಳಿಸಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಲೈಸೆನ್ಸ್ ಪಡೆಯಬೇಕು ಮತ್ತು ಇಷ್ಟು ವರ್ಷಗಳ ನಂತರ ಛಲ ಬಿಡಬಾರದು ಎಂಬ ಆಕೆಯ ಸಂಕಲ್ಪ ಅನೇಕರಿಗೆ ಸ್ಫೂರ್ತಿಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement