ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಹ್ಯಾಂಡ್ಲೊವಾ: ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ.
ರಾಜಧಾನಿ ಬ್ರಟಿಸ್ಲಾವಾದಿಂದ ಉತ್ತರಕ್ಕಿರುವ ಹ್ಯಾಂಡ್ಲೊವಾದಲ್ಲಿ ಆಯೋಜನೆಗೊಂಡಿದ್ದ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡ ನಂತರ ಹೊರಬರುತ್ತಿದ್ದ ಅವರ ಮೇಲೆ ವ್ಯಕ್ತಿಯೊಬ್ಬ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ. ಫಿಕೊ ಅವರ ಹೊಟ್ಟೆಗೆ ಗುಂಡುಗಳು ಹೊಕ್ಕಿರುವುದರಿಂದ ಅಲ್ಲಿಯೇ ಅವರು ಕುಸಿದು ಬಿದ್ದರು. ತಕ್ಷಣ ಅವರನ್ನು ಹೆಲಿಕಾಪ್ಟರ್ ಮೂಲಕ ಬನಾಸ್ಕಾ ಬಿಸ್ಟಾರಿಕಾ ಆಸ್ಪತ್ರೆಗೆ ಸಾಗಿಸಲಾಯಿತು.ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.

ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಸ್ಲೊವಾಕಿಯಾದ ಪ್ರಧಾನಿಯಾಗಿ 4ನೇ ಬಾರಿಗೆ ಫಿಕೊ ಮರು ಆಯ್ಕೆಯಾಗಿದ್ದರು. ಐರೋಪ್ಯ ಪರ ಹಾಗೂ ರಾಷ್ಟ್ರೀಯವಾದಿಗಳ ನಡುವಿನ ಮಾರ್ಗವನ್ನು ಆಯ್ದುಕೊಂಡಿದ್ದ ಫಿಕೊ ಅವರು, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದ ನೀತಿಗೆ ವಿರುದ್ಧವಾದ ಹೆಜ್ಜೆ ಇಟ್ಟಿದ್ದರು. ಇದಕ್ಕಾಗಿ ಸಾರ್ವಜನಿಕರ ಅಭಿಪ್ರಾಯ ಮತ್ತು ಬದಲಾದ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಹೆಜ್ಜೆ ಇಡುವ ಇಂಗಿತ ವ್ಯಕ್ತಪಡಿಸಿದ್ದರು. ಐರೋಪ್ಯ ಒಕ್ಕೂಟದ ವಲಸೆ ಕೋಟಾವನ್ನು ಅವರು ತಿರಸ್ಕರಿಸಿದ್ದರು ಎನ್ನಲಾಗಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಯೋಜನೆ ಹೊಂದಿದ್ದ ವಿರೋಧ ಪಕ್ಷವು ಘಟನೆ ನಂತರ ಅದನ್ನು ಕೈಬಿಟ್ಟಿದೆ. ಜರ್ಮನಿಯ ಚಾನ್ಸಲರ್ ಓಲಾಫ್‌ ಸ್ಕೋಲ್ಜ್ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಯುರೋಪಿಯನ್ ಕಮಿಷನ್‌ನ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯನ್ ಅವರು ಘಟನೆಯನ್ನು ಖಂಡಿಸಿದ್ದಾರೆ. ಯುರೋಪ್‌ನ ರಾಜಕೀಯದಲ್ಲಿ ಹಿಂಸೆಗೆ ಜಾಗವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement