ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದು14 ಮಂದಿ ಸಾವು

ನವದೆಹಲಿ : ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಋಷಿಕೇಶ-ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ 26 ಜನರಿದ್ದ ಟೆಂಪೋ ಟ್ರಾವೆಲರ್ ರಸ್ತೆಯಿಂದ ಸ್ಕಿಡ್ ಆಗಿ ಅಲಕನಂದಾ ನದಿಗೆ ಬಿದ್ದ ಪರಿಣಾಮ ಕನಿಷ್ಠ 14 ಪ್ರವಾಸಿಗರು ಮೃತಪಟ್ಟಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ತಿಳಿಸಿದ್ದಾರೆ.
ಇನ್ಸ್‌ಪೆಕ್ಟರ್ ಜನರಲ್ ಗರ್ವಾಲ್ ಕರಣ್ ಸಿಂಗ್ ನಾಗ್ನ್ಯಾಲ್ ಅವರು, “ಟೆಂಪೋ ಟ್ರಾವೆಲರ್ ನೋಯ್ಡಾದಿಂದ (ಯುಪಿ) ರುದ್ರಪ್ರಯಾಗದ ಕಡೆಗೆ ಬರುತ್ತಿತ್ತು… ಅದು 150-200 ಮೀಟರ್ ಆಳದ ಕಮರಿಗೆ ಬಿದ್ದಿದೆ” ಎಂದು ಹೇಳಿದ್ದಾರೆ. ಘರ್ವಾಲ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್ ಕೆಎಸ್ ನಾಗ್ನ್ಯಾಲ್ ಅವರು ಅಪಘಾತದಲ್ಲಿ ಮೃತಪಟ್ಟವರು ಚೋಪ್ಟಾಗೆ ಭೇಟಿ ನೀಡುವ ಪ್ರವಾಸಿಗರು. ವಾಹನದಲ್ಲಿ 26 ಜನರು ಇದ್ದರು, ಅವರಲ್ಲಿ ಹೆಚ್ಚಿನವರು ದೆಹಲಿ ನಿವಾಸಿಗಳು ಎಂದು ಹೇಳಿದರು.
ಉತ್ತರಾಖಂಡ ಎಸ್‌ಡಿಆರ್‌ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಮಾತನಾಡಿ, 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ತಲಾ ಇಬ್ಬರು ರಿಷಿಕೇಶದ ಏಮ್ಸ್ ಮತ್ತು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.12 ಮಂದಿ ಗಾಯಗೊಂಡಿದ್ದು, ಐವರು ರಿಷಿಕೇಶದ ಏಮ್ಸ್ ನಲ್ಲಿ ಮತ್ತು ಏಳು ಮಂದಿ ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಅವರ ಸೂಚನೆಯ ಮೇರೆಗೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಏಳು ಜನರನ್ನು ಹೆಲಿ-ಆಂಬುಲೆನ್ಸ್ ಮೂಲಕ ರಿಷಿಕೇಶದ ಏಮ್ಸ್‌ಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ ಸಿಂಗ್ ರಾಜ್ವರ್ ಅವರು ಮಾತನಾಡಿ, ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ರಸ್ತೆಯಿಂದ ಸುಮಾರು 250 ಮೀಟರ್ ಕೆಳಗೆ ಅಲಕನಂದಾ ನದಿಯ ದಡದಲ್ಲಿ ವಾಹನ ಬಿದ್ದಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಇದು “ಹೃದಯ ವಿದ್ರಾವಕ” ಎಂದು ಬಣ್ಣಿಸಿದ್ದಾರೆ. ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಡೆದ ರಸ್ತೆ ಅಪಘಾತ ಹೃದಯವಿದ್ರಾವಕವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಇದರೊಂದಿಗೆ ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಲ್ಲಿ ತೊಡಗಿದೆ ಎಂದು ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಧಾಮಿ ರಿಷಿಕೇಶದ ಏಮ್ಸ್‌ಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿಯಾದರು.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement