
ವಾಷಿಂಗ್ಟನ್: ಅಮೆರಿಕದಲ್ಲಿರುವ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್, ಕ್ರಿಕೆಟ್ ಅಭಿಮಾನಿಯೊಬ್ಬರ ಮೇಲೆ ಹಲ್ಲೆ ಮಾಡಲು ಹೋದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ನಂತರ ಆ ತಂಡದ ಕೆಲ ಆಟಗಾರರು ಅಮೆರಿಕದಲ್ಲಿ ಸಮಯ ಕಳೆಯುತ್ತಿದ್ದು, ರೌಫ್ ಕೂಡ ತಮ್ಮ ಕುಟುಂಬದೊಂದಿಗೆ ಫ್ಲೊರಿಡಾದಲ್ಲಿ ತಂಗಿದ್ದಾರೆ. ಪತ್ನಿಯೊಂದಿಗೆ ವಿಹಾರಕ್ಕೆ ಹೋದ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬ ರೌಫ್ ಅವರನ್ನು ಉದ್ದೇಶಿಸಿ ಏನೋ ಹೇಳಿರುವುದು ರೌಫ್ ಅವರು ಕೋಪ ನೆತ್ತಿಗೇರುವಂತೆ ಮಾಡಿದೆ.
ತಕ್ಷಣ ಆ ವ್ಯಕ್ತಿಗೆ ಕಡೆಗೆ ನುಗ್ಗಿದ ರೌಫ್ ಅವರನ್ನು ಪತ್ನಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಪತ್ನಿಯಿಂದ ಬಿಡಿಸಿಕೊಂಡು ಮುನ್ನುಗ್ಗಿದ್ದಾರೆ ರೌಫ್. ಆತನಿಗೆ ʼನೀನು ಭಾರತೀಯನಾ? ಎಂದು ಕೇಳಿದ್ದಾರೆ. ಇದಕ್ಕೆ ಆತ ‘ಅಲ್ಲ.. ನಾನು ಪಾಕಿಸ್ತಾನದವನು’ ಎಂದು ಹೇಳಿದ್ದಾನೆ. ರೌಫ್ ಮತ್ತು ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಆತನ ಮೇಲೆ ಏರಿ ಹೋದ ರೌಫ್ ಅವರನ್ನು ತಡೆಯಲು ಹಲವರು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

“ನೀವು ನನ್ನ ತಂದೆಯನ್ನು ಹೇಗೆ ನಿಂದಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ ರೌಫ್. ನಂತರ ಆತ ಖಂಡಿತವಾಗಿಯೂ ಭಾರತೀಯ ಎಂದು ಅಲ್ಲಿಂದ ಹೋಗುವ ಮೊದಲು ರೌಫ್ ಹೇಳುವುದನ್ನು ಕೇಳಬಹುದು.
ವೀಡಿಯೊ ವೈರಲ್ ಆದ ನಂತರ, ರೌಫ್ ತನ್ನ ಕುಟುಂಬದ ವಿಷಯಕ್ಕೆ ಬಂದಾಗ, ಅಂತಹವುಗಳಿಗೆ ಪ್ರತಿಕ್ರಿಯಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
“ನಾನು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ತರದಿರಲು ನಿರ್ಧರಿಸಿದ್ದೆ, ಆದರೆ ಈಗ ವೀಡಿಯೊ ಹೊರಬಂದಿದೆ, ಇದನ್ನು ಪರಿಹರಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ. ಸಾರ್ವಜನಿಕ ವ್ಯಕ್ತಿಗಳಾಗಿ, ನಾವು ನಮ್ಮನ್ನು ಬೆಂಬಲಿಸಿ ಅಥವಾ ಟೀಕಿಸಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಮುಕ್ತರಾಗಿದ್ದೇವೆ ಎಂದು ರೌಫ್ ಬರೆದಿದ್ದಾರೆ. ಅದೇನೇ ಇದ್ದರೂ, ನನ್ನ ತಂದೆ-ತಾಯಿ ಮತ್ತು ನನ್ನ ಕುಟುಂಬದ ವಿಷಯಕ್ಕೆ ಬಂದಾಗ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ನಾನು ಹಿಂಜರಿಯುವುದಿಲ್ಲ. ಜನರು ಮತ್ತು ಅವರ ಕುಟುಂಬಗಳಿಗೆ ಅವರ ವೃತ್ತಿಯನ್ನು ಲೆಕ್ಕಿಸದೆ ಗೌರವವನ್ನು ತೋರಿಸುವುದು ಮುಖ್ಯವಾಗಿದೆ, ”ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಿಂದ ಗುಂಪು ಹಂತದಲ್ಲಿ ಹೊರಬಿದ್ದ ನಂತರ ಪಾಕಿಸ್ತಾನದ ಆಟಗಾರರು ಕಟುವಾದ ಟೀಕೆಗಳಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್, ಮೊಹಮ್ಮದ್ ಅಮೀರ್, ಇಮಾದ್ ವಾಸಿಮ್, ಹ್ಯಾರಿಸ್ ರೌಫ್, ಶಾದಾಬ್ ಖಾನ್ ಮತ್ತು ಅಜಮ್ ಖಾನ್ ಸೇರಿದಂತೆ ಐದು ಇತರ ಆಟಗಾರರು ತಂಡವು T20 ವಿಶ್ವಕಪ್ ನಿಂದ ಹೊರಬಿದ್ದ ನಂತರ ಪಾಕಿಸ್ತಾನಕ್ಕೆ ಹಿಂದಿರುಗುವ ಮೊದಲು ಲಂಡನ್‌ನಲ್ಲಿ ತಮ್ಮ ರಜಾದಿನಗಳನ್ನು ಕಳೆಯಲು ನಿರ್ಧರಿಸಿದ್ದಾರೆ. ಆರು ಆಟಗಾರರು ಮಂಗಳವಾರ ತಂಡದ ಉಳಿದ ಆಟಗಾರರೊಂದಿಗೆ ಪಾಕಿಸ್ತಾನಕ್ಕೆ ಬಂದಿಲ್ಲ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನಲ್ಲಿನ ವರದಿಯ ಪ್ರಕಾರ ಕೆಲವರು ಯುನೈಟೆಡ್ ಕಿಂಗ್‌ಡಂನಲ್ಲಿ ಸ್ಥಳೀಯ ಲೀಗ್‌ಗಳಲ್ಲಿ ಆಡುವ ಬಗ್ಗೆ ಯೋಚಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ