ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪಗಢದ ಪೊಲೀಸರು ಕೆಲ ದಿನಗಳ ಹಿಂದೆ ತನ್ನ ಮಾಲೀಕನ ಮನೆಯಿಂದ ನಾಪತ್ತೆಯಾಗಿದ್ದ ಎಮ್ಮೆಯೊಂದು ಯಾರಿಗೆ ಸೇರಿದ್ದು ಎಂದು ನಿರ್ಧರಿಸಲು ವಿಶಿಷ್ಟವಾದ ಮಾರ್ಗೋಪಾಯದ ಮೂಲಕ ಕಳೆದು ಹೋದ ಎಮ್ಮೆಯ ಮಾಲೀಕ ಯಾರು ಎಂದು ಕಂಡುಹಿಡಿದಿದ್ದಾರೆ.
ಎಮ್ಮೆ ಯಾರಿಗೆ ಸೇರಿದ್ದು ಎಂಬ ಸಮಸ್ಯೆ ಬಗೆಹರಿಸುವಲ್ಲಿ ಪಂಚಾಯ್ತಿ ವಿಫಲವಾದ ಕಾರಣ ಪೊಲೀಸರು ಎಮ್ಮೆಯ ನಿಜವಾದ ಮಾಲೀಕನನ್ನು ಪತ್ತೆ ಹಚ್ಚಲು ಈ ವಿಶಿಷ್ಟ ವಿಧಾನವನ್ನು ಅನುಸಿರಿಸಿದರು. ಎಮ್ಮೆಯನ್ನು ರಸ್ತೆಗೆ ಬಿಡಲಾಯಿತು. ಎಮ್ಮೆ, ಸ್ವಲ್ಪ ಸಮಯದ ನಂತರ ಅದರ ಮಾಲೀಕನ ಮನೆಗೆ ನಡೆದುಕೊಂಡು ಹೋಯಿತು. ಅಲ್ಲಿಗೆ ಬಗೆಹರಿಯದೇ ಇದ್ದ ಸಮಸ್ಯೆಯೂ ಬಗೆಹರಿಯಿತು.
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಮಹೇಶಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನಪುರ ಗ್ರಾಮದ ನಿವಾಸಿ ನಂದಲಾಲ ಸರೋಜ ಎಂಬವರ ಎಮ್ಮೆ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಅದು ದಾರಿತಪ್ಪಿ ಪುರೆ ಹರಿಕೇಶ ಗ್ರಾಮಕ್ಕೆ ಹೋಗಿತ್ತು. ಅಲ್ಲಿಗೆ ಹೋದ ಎಮ್ಮೆಯನ್ನು ಅಲ್ಲಿನ ಹನುಮಾನ ಸರೋಜ ಎಂಬವರು ಕಟ್ಟಿಹಾಕಿದ್ದರು ಎಂದು ಹೇಳಲಾಗುತ್ತದೆ.
ಮೂರು ದಿನಗಳ ತೀವ್ರ ಹುಡುಕಾಟದ ನಂತರ ನಂದಲಾಲ ಸರೋಜ ಅಂತಿಮವಾಗಿ ತನ್ನ ಎಮ್ಮೆ ಎಲ್ಲಿದೆ ಎಂದು ಪತ್ತೆ ಹಚ್ಚಿದರು. ಆದರೆ ಹನುಮಂತ ಎಂಬವರು ಎಮ್ಮೆಯನ್ನು ನಂದಲಾಲ ಅವರಿಗೆ ಎಮ್ಮೆ ಹಿಂದಿರುಗಿಸಲು ನಿರಾಕರಿಸಿದರು. ನಂತರ ನಂದಲಾಲ ಅವರು ಮಹೇಶಗಂಜ್ ಪೊಲೀಸ್ ಠಾಣೆಗೆ ತೆರಳಿ ಹನುಮಾನ ಸರೋಜ ವಿರುದ್ಧ ದೂರು ದಾಖಲಿಸಿದರು.
ನಂತರ ಇಬರನ್ನೂ ಪೊಲೀಸರು ಗುರುವಾರ ಠಾಣೆಗೆ ಕರೆಸಿದರು. ಆದರೆ, ಈ ವಿಚಾರವಾಗಿ ಹಲವು ಗಂಟೆಗಳ ಕಾಲ ಪಂಚಾಯ್ತಿ ನಡೆದರೂ ಇಬ್ಬರೂ ಎಮ್ಮೆ ತಮ್ಮದು ಎಂದು ಪಟ್ಟು ಹಿಡಿದು ಕುಳಿತರು. ಹೀಗಾಗಿ ಪೊಲೀಸರಿಗೆ ಈ ಸಮಸ್ಯೆ ಬಗೆಹರಿಸುವುದು ಬಹುದೊಡ್ಡ ತಲೆನೋವಾಗಿ ಪರಿಣಮಿಸಿತು. ನಂತರ ಮಹೇಶಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶ್ರವಣಕುಮಾರ ಸಿಂಗ್ ಈ ಸಮಸ್ಯೆ ಬಗೆಹರಿಸಲು ಮಾರ್ಗೋಪಾಯವೊಂದನ್ನು ಕಂಡುಕೊಂಡರು. ತನ್ನ ಮಾಲೀಕರ ಯಾರು ಎಂದು ನಿರ್ಧಾರ ಮಾಡುವುದನ್ನು ಎಮ್ಮೆಗೆ ಬಿಡಬೇಕು ಎಂದು ಅವರು ಸಲಹೆ ನೀಡಿದರು. ಅದು ಹೇಗೆಂದು ಅವರು ವಿವರಿಸಿದರು.
ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಡುವುದು ಮತ್ತು ಅದು ಯಾರನ್ನು ಹಿಂಬಾಲಿಸುತ್ತದೆಯೋ ಅವರನ್ನೇ ಅದರ ಮಾಲೀಕ ಎಂದು ಘೋಷಿಸಲಾಗುತ್ತದೆ ಎಂದು ಅವರು ಹೇಳಿದರು.ಗ್ರಾಮಸ್ಥರು ಸಹ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು.ನಂತರ ನಂದಲಾಲ ಮತ್ತು ಹನುಮಾನ ಇಬ್ಬರಿಗೂ ತಮ್ಮ ತಮ್ಮ ಗ್ರಾಮಗಳಿಗೆ ಹೋಗುವ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಲ್ಲುವಂತೆ ಸೂಚಿಸಲಾಯಿತು.
ನಂತರ ಪೊಲೀಸ್ ಠಾಣೆಯ ಮುಂದೆ ಕಟ್ಟಿದ್ದ ಎಮ್ಮೆಯನ್ನು ಬಿಡಲಾಯಿತು. ಅದು ನೇರವಾಗಿ ನಂದಲಾಲ ಬಳಿ ಹೋಯಿತು. ಹಾಗೂ ಅವರನ್ನು ಅನುಸರಿಸಿ ತನ್ನ ಗ್ರಾಮವಾದ ರಾಯ್ ಅಸ್ಕರನಪುರಕ್ಕೆ ಹೋಗುವ ದಾರಿ ಹಿಡಿದು ತೆರಳಿತು. ಎಮ್ಮೆಯೇ ತನ್ನ ಮಾಲೀಕ ಯಾರೆಂದು ನಿರ್ಧರಿಸಿದ ಪ್ರಕಾರವಾಗಿ ಎಮ್ಮೆಯನ್ನು ನಂದಲಾಲ ಅವರಿಗೆ ಒಪ್ಪಿಸಲಾಯಿತು. ನಂತರ ಈ ಎಮ್ಮೆ ತನ್ನದೆಂದು ಸುಳ್ಳು ಹೇಳಿದ್ದ ಮತ್ತೊಬ್ಬನಿಗೆ ಪೊಲೀಸರು ಮತ್ತು ಗ್ರಾಮಸ್ಥರು ಛೀಮಾರಿ ಹಾಕಿದರು.
ನಿಮ್ಮ ಕಾಮೆಂಟ್ ಬರೆಯಿರಿ