ಮಂಗಳೂರು : ದರೋಡೆ ಕೃತ್ಯ ನಡೆದ 5 ತಾಸಿನಲ್ಲೇ ಚಡ್ಡಿ ಗ್ಯಾಂಗ್‌ ಬಂಧಿಸಿದ ಪೊಲೀಸರು

ಮಂಗಳೂರು : ನಗರದ ಕೋಟೆಕಣಿಯ ಮನೆಗೆ ನುಗ್ಗಿ ಮನೆಮುಂದಿಯನ್ನು ಬೆದರಿಸಿ ದರೋಡೆ ಮಾಡಿದ್ದ ಚಡ್ಡಿ ಗ್ಯಾಂಗ್‌ ಅನ್ನು ಘಟನೆ ನಡೆದ 5 ತಾಸಿನಲ್ಲೇ ಹಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿತರನ್ನು ಮಧ್ಯಪ್ರದೇಶ ಮೂಲದ ರಾಜು ಸಿಂಘಾನಿಯಾ(24), ಮಯೂರ(30), ಬಾಲಿ(22), ಮತ್ತು ವಿಕ್ಕಿ(21) ಎಂದು ಗುರುತಿಸಲಾಗಿದೆ.
ಮಂಗಳವಾರ ನಸುಕಿನ 4 ಗಂಟೆಯ ಸುಮಾರಿಗೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಗ್ರಾಮದ ಕೋಟೆಕಣಿ ರಸ್ತೆಯ ವಿಕ್ಟರ್ ಮೆಂಡೋನ್ಸಾ ಎಂಬವರ ಮನೆಯ ಕಿಟಕಿಯ ಗ್ರಿಲ್ ತುಂಡರಿಸಿ ಬರ್ಮುಡಾ ಮತ್ತು ಬನಿಯನ್ ಧರಿಸಿದ ಚಡ್ಡಿ ಗ್ಯಾಂಗಿಗೆ ಸೇರಿದ ನಾಲ್ವರು ದರೋಡೆಕೋರರು ಒಳ ಪ್ರವೇಶಿಸಿ ಮನೆಯವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿದ ಬಳಿಕ ಅದೇ ಮನೆಯ ಕಾರಿನಲ್ಲಿ ಪರಾರಿಯಾಗಿದ್ದರು.

ದರೋಡೆಕೋರರು ಕಾರನ್ನು ಮುಲ್ಕಿ ಬಸ್‌ ನಿಲ್ದಾಣದ ಸಮೀಪ ನಿಲ್ಲಿಸಿ ಪರಾರಿಯಾಗಿದ್ದರು. ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಮಂಗಳೂರು ಕಡೆಗೆ ಪ್ರಯಾಣಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಿ ಬೆಳಗಿನ ಜಾವ ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಕೆ.ಎಸ್.ಅರ್.ಟಿ.ಸಿ ಬಸ್ಸುಗಳ ಮಾಹಿತಿ ಪಡೆಯಲಾಯಿತು. ಆಗ ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ಸಿ ಆ ಸಮಯದಲ್ಲಿ ಮಂಗಳೂರಿಗೆ ಬಂದಿದ್ದು, ಅದರ ನಿರ್ವಾಹಕರು ಅವರ ಬಸ್ಸಿನಲ್ಲಿ ಮುಲ್ಕಿಯಿಂದ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ವ್ಯಕ್ತಿಗಳು ಅವರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸಿನ ಬಗ್ಗೆ ಮಾಹಿತಿ ಕೇಳಿದ್ದರು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರಿ ಮಳೆ ಮುನ್ಸೂಚನೆ ; ಕರ್ನಾಟಕದ ಐದು ಜಿಲ್ಲೆಗಳಿಗೆ ಇಂದು ರೆಡ್‌ ಅಲರ್ಟ್‌

ಬಳಿಕ ಪೊಲೀಸರು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿ, ಸಕಲೇಶಪುರ ಡಿವೈಎಸ್ಪಿ, ಸಿಪಿಸಿ ಹಾಗೂ ಸಿಬ್ಬಂದಿ ತಂಡ ಸಕಲೇಶಪುರ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಅದರಲ್ಲಿದ್ದ ಪ್ರಯಾಣಿಸುತ್ತಿದ್ದ ನಾಲ್ಕು ಮಂದಿ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆಯ ವೇಳೆ ನಾಲ್ವರು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೋಟೆಕಣಿಯಲ್ಲಿ ಸುಲಿಗೆ ಮಾಡಿದ್ದ ಎಲ್ಲಾ ಚಿನ್ನ ಹಾಗೂ ವಜ್ರದ ಆಭರಣಗಳು, ವಾಚ್ ಗಳು ಹಾಗೂ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement