ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರೂಪಕಿ ಅಪರ್ಣಾ (57 ಇಂದು, ಗುರುವಾರ (ಜುಲೈ 11) ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ವಿವಾಹವಾಗಿದ್ದರು. ಬೆಂಗಳೂರು ದೂರದರ್ಶನದಲ್ಲಿ ಸಿನೀಯರ್ ಗ್ರೇಡ್ ನಿರೂಪಕಿಯಾಗಿದ್ದರು. ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್ (Lung cancer) ಇರುವುದು ತಪಾಸಣೆಯಲ್ಲಿ ಗೊತ್ತಾಗಿತ್ತು. ಗೊತ್ತಾಗುವಾಗ ಅದು ನಾಲ್ಕನೇ ಹಂತದಲ್ಲಿತ್ತು, ವೈದ್ಯರು ಆರು ತಿಂಗಳು ಬದುಕಬಹುದು ಎಂದು ಹೇಳಿದ್ದರು, ಆದರೆ ಅವಳು ಒಂದೂವರೆ ವರ್ಷ ಆ ರೋಗದ ವಿರುದ್ಧ ಹೋರಾಡಿದರು ಎಂದು ಅವರ ಪತಿ ನಾಗರಾಜ ವಸ್ತಾರೆ ತಿಳಿಸಿದ್ದಾರೆ.
ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದರು. ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಸೃಜನ್ ಲೋಕೇಶ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಎಲ್ಲರ ಮನಗೆದ್ದಿದ್ದರು. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಟಿವಿ ಶೋಗಳನ್ನು ನಡೆಸಿದ್ದ ಅವರು ಜನಪ್ರಿಯ ಧಾರಾವಾಹಿ ‘ಮುಕ್ತ’ದಲ್ಲಿ ಶೀಲಾ ಪ್ರಸಾದ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದರು. ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದರು. 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ