ಅಂಕೋಲಾ : ಶಿರೂರು ಬಳಿ ಗುಡ್ಡ ಕುಸಿತ ; ನಾಲ್ವರ ಮೃತದೇಹ ಪತ್ತೆ, ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತದ ದುಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮೃತ ದೇಹಗಳು ಪತ್ತೆಯಾಗಿವೆ. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಕುಮಟಾ- ಕಾರವಾರ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಬಳಿ ಮಂಗಳವಾರ ಗುಡ್ಡ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಂಚಾರ ಪೂರ್ಣ ಬಂದ್‌ ಆಗಿದೆ.
ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗೆಕೊಳ್ಳ ದುಬ್ಬನಸಸಿ ಕಡಲ ತೀರದಲ್ಲಿ ನಾಲ್ಕು ಮೃತ ದೇಹಗಳು ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಶಿರೂರಿನ ಈ ದುರಂತ ಸ್ಥಳದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ಬೊಮ್ಮಯ್ಯ ನಾಯ್ಕ, ಅವರ ಪತ್ನಿ ಶಾಂತಿ ಲಕ್ಷ್ಮಣ ನಾಯ್ಕ, ಮಗ ರೋಶನ ಲಕ್ಷ್ಮಣ ನಾಯ್ಕ ಅವರ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಮೃತ ದೇಹ ಪತ್ತೆಯಾಗಿದ್ದು ಅವರ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಯಾವುದೋ ಲಾರಿ ಚಾಲಕ ಇರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯಲ್ಲಿ ಶಿರೂರಿನ ಒಂದೇ ಕುಟುಂಬದ ಐದು ಜನರು ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಈಗ ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆಯಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ: 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಇನ್ನೂ ಕೆಲವರು ಮಣ್ಣಿನ ಅಡಿ ಸಿಲುಕಿರಬಹುದು ಅಥವಾ ನೀರಿನಲ್ಲಿ ಕೊಚ್ಚಿ ಹೋಗಿರುವ ಊಹೆ ಮಾಡಲಾಗಿದೆ. ಯಾಕೆಂದರೆ ಇನ್ನೂ ನಾಲ್ಕೈದು ಜನರು ನಾಪತ್ತೆಯಾಗಿದ್ದಾರೆ.  ಕೆಲವು ವಾಹನಗಳು ಮಣ್ಣಿನ ಅಡಿ ಸಿಲುಕಿರುವ ಸಾಧ್ಯತೆ ಇದೆ. ಚಹಾ ಹೋಟೆಲ್ ಬಳಿ ಎಷ್ಟು ಜನರು ಇದ್ದರು ಎನ್ನುವುದು ಇದುವರೆಗೆ ಖಚಿತವಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ. ಹೆದ್ದಾರಿ ಪಕ್ಕದ ಗುಡ್ಡ ಇನ್ನೂ ಕುಸಿಯುವ ಅಪಾಯವಿದ್ದು, ಹೀಗಾಗಿ ಜಿಲ್ಲಾಡಳಿತ 1.ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಿದೆ. ಅವ್ಯಾಹತ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗುತ್ತಿದೆ.

ಗುಡ್ಡದ ಮಣ್ಣಿನ ಜೊತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಗ್ಯಾಸ್ ಟ್ಯಾಂಕರ್ ಗಳು ಪಕ್ಕದ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇದರಿಂದ ಗ್ಯಾಸ್ ಸೋರಿಕೆ ಭೀತಿ ಎದುರಾಗಿದೆ. ಹೀಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಅಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು, ಸಹಾಯಕ ಆಯುಕ್ತರು ಕೂಡಲೇ ಮುನ್ನೆಚರಿಕೆ ಕ್ರಮವಾಗಿ ನದಿ ದಡದಲ್ಲಿರುವ ಎಲ್ಲ ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಾದ ಕಾಳಜಿ ಕೇಂದ್ರದಲ್ಲಿ ಸ್ಥಳಾಂತರಿಸಿ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ.
ಅಂಕೋಲಾ ಪೊಲೀಸರು, ಅಗ್ನಿಶಾಮಕ, ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿಗಳು ಮಣ್ಣು ತೆರುವು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಗುಡ್ಡ ಕುಸಿದು ಬಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣ ಅಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಭೇಟಿ ನೀಡಿ ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದರು..

ಪ್ರಮುಖ ಸುದ್ದಿ :-   ಕರ್ನಾಟಕದ 8 ಜಿಲ್ಲೆಗಳಲ್ಲಿ ಇನ್ನೂ 3 ದಿನ ಭಾರಿ ಗಾಳಿ ಮಳೆಯ ಮುನ್ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement