
ಬೆಂಗಳೂರು : ಬೆಂಗಳೂರಿನ ಟೆಕ್ ಉದ್ಯಮ ದಂಪತಿ ಆನ್‌ಲೈನ್ ಟ್ರೇಡಿಂಗ್ ಹಗರಣದಲ್ಲಿ ಕಳೆದುಕೊಂಡಿದ್ದ ಹಣದ ಹೆಚ್ಚಿನ ಭಾಗವನ್ನು ಯಶಸ್ವಿಯಾಗಿ ಮರುಪಡೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ. ಬೆಂಗಳೂರು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೆಂಗಳೂರಿನ ದಂಪತಿ ಆನ್‌ಲೈನ್ ಹೂಡಿಕೆ ಮಾಡಲು ವಂಚಕರಿಂದ ಕಳೆದುಕೊಂಡಿದ್ದ 1.53 ಕೋಟಿ ರೂ.ಗಳಲ್ಲಿ 1.4 ಕೋಟಿ ರೂ.ಗಳನ್ನು ವಾಪಸ್ ಪಡೆದಿದ್ದಾರೆ.
ಬಾಣಸವಾಡಿಯಲ್ಲಿ ನೆಲೆಸಿರುವ ದಂಪತಿ ತಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ನೀಡುವುದಾಗಿ ಆಮಿಷ ಒಡ್ಡಿದ್ದ ವಂಚಕರ ಜಾಲದ ಆಮಿಷಕ್ಕೆ ಬಲಿಯಾಗಿ ಇಷ್ಟೊಂದು ಹಣ ಕಳೆದುಕೊಂಡಿದ್ದರು. ವಂಚಕನ ಮಾತು ನಂಬಿದ ದಂಪತಿ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು. ವಿದೇಶದಲ್ಲಿ ಕುಳಿತೇ ಈ ವಂಚನೆ ಜಾಲವನ್ನು ನಡೆಸುತ್ತಿದ್ದವರು ಪ್ರಾರಂಭದಲ್ಲಿ ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಅದಕ್ಕೆ ಭಾರಿ ಲಾಭಾಂಶ ನೀಡಿ ಲಾಭದ ಆಸೆ ತೋರಿಸಿದ್ದರು.

ನಂತರ 2.66 ಕೋಟಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಬ್ರಿಟನ್‌ನ ವಂಚಕರು, ಉತ್ತರ ಭಾರತದ ಜನರಿಂದ ಬಾಡಿಗೆಗೆ ಪಡೆದ ‘ಖಾತೆ’ಗಳ ಜಾಲ ಬಳಸಿಕೊಂಡು ಹಣವನ್ನು ಲಪಟಾಯಿಸಿದ್ದರು. ದಂಪತಿಯನ್ನು ಮತ್ತಷ್ಟು ವಂಚಿಸಲು, ವಂಚಕರು ನಕಲಿ ವೆಬ್‌ಸೈಟ್ ಅನ್ನು ರಚಿಸಿದರು. ಶೇರ್ ಮಾರ್ಕೆಟ್ ಬ್ರೋಕರೇಜ್ ರೀತಿಯ ನಕಲಿ ವೆಬ್‌ಸೈಟ್ ರಚನೆ ಮಾಡಿದ್ದಾರೆ. ಈ ವೆಬ್‌ಸೈಟ್ ಅನ್ನು ದಂಪತಿ ಮಾಡಿದ ಹೂಡಿಕೆಗಳಲ್ಲಿ ಹಣ ಹೆಚ್ಚುತ್ತಿರುವಂತೆ ತೋರಿಸುವ ರೀತಿಯಲ್ಲಿ ಅವರು ರಚಿಸಿದ್ದರು ಎಂದು ದಿ ಹಿಂದೂ ವರದಿ ಮಾಡಿದೆ.
ಆರಂಭದಲ್ಲಿ, ದಂಪತಿ ತಮ್ಮ ಹೂಡಿಕೆಯಿಂದ ಬಂದ ಲಾಭಕ್ಕೆ ಸಂತೋಷಪಟ್ಟರು. ಆದಾಗ್ಯೂ, ಕೆಲವು ತಿಂಗಳುಗಳ ನಂತರ, ಅವರು ತಮ್ಮ ಕೆಲವು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ವೆಬ್‌ಸೈಟ್ ತಮ್ಮನ್ನು ನಿರ್ಬಂಧಿಸಿರುವುದು ಗೊತ್ತಾಯಿತು. ಆ ವೆಬ್‌ಸೈಟಿಗೆ ತಕ್ಷಣವೇ ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆಗ ಅವರಿಗೆ ತಾವು ಮೋಸ ಹೋಗಿರುವುದರ ಅರಿವಾಯಿತು.
ವಂಚನೆ ಗೊತ್ತಾದ ನಂತರ, ದಂಪತಿ ಘಟನೆಯ ಬಗ್ಗೆ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದರು. ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ನಡೆಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದಾರೆ. ಸುಮಾರು ಐವತ್ತು ಅಕೌಂಟ್ಗಳಿಗೆ ಹಣ ಹೋಗಿರುವುದು ಪತ್ತೆಯಾಗಿದ್ದು, ಹಂತ ಹಂತವಾಗಿ ಒಟ್ಟು ಒಂದು ಕೋಟಿ ಐದು ಲಕ್ಷ ರೂ. ಪೊಲೀಸರು ಫ್ರೀಜ್ ಮಾಡಿದ್ದು, ಅವರ ಪ್ರಯತ್ನಗಳಿಂದಾಗಿ ಹಗರಣಕ್ಕೆ ಸಂಬಂಧಿಸಿದ 50 ಕ್ಕೂ ಹೆಚ್ಚು ಖಾತೆಗಳನ್ನು ಫ್ರೀಜ್ ಮಾಡಲು ಸಾಧ್ಯವಾಯಿತು ಹಾಗೂ ಕದ್ದ ಹಣದ ದೊಡ್ಡ ಭಾಗವನ್ನು ಮರಳಿ ಪಡೆಯಲು ಸಾಧ್ಯವಾಯಿತು.
ವಂಚಕರು ದಂಪತಿಗೆ ಮೊದಲಿಗೆ ಕರೆ ಮಾಡಿ ಯುಟ್ಯೂಬ್ನಲ್ಲಿ ವೀಡಿಯೊ ನೋಡಿ ಸಬ್ಸ್ಕ್ರೈಬ್ ಮಾಡಿದರೆ 50 ರೂ. ನೀಡುವುದಾಗಿ ಹೇಳಿದ್ದರು. ವೀಡಿಯೊ ಸಬ್ಸ್ಕ್ರೈಬ್ ಮಾಡಿದ್ದ ಟೆಕ್ಕಿ ದಂಪತಿಗೆ ಹಣ ನೀಡಿದ್ದರು. ನಂತರ ಟೆಲಿಗ್ರಾಂ ಗ್ರೂಪ್ಗೆ ಆ್ಯಡ್ ಮಾಡಿ ಹೂಡಿಕೆ ಮಾಡಿದರೆ ಡಬಲ್ ಹಣ ನೀಡುವುದಾಗಿ ದಂಪತಿಗೆ ಆಮಿಷ ಒಡ್ಡಲಾಯಿತು ಎನ್ನಲಾಗಿದೆ. ಮೊದಲಿಗೆ 2-3 ಲಕ್ಷ ರೂ.ಗಳ ವರೆಗೆ ಹೂಡಿಕೆ ಮಾಡಿದಾಗ ಲಾಭಾಂಶ ನೀಡಿದ್ದಾರೆ. ನಂತರ ಹಂತಹಂತವಾಗಿ 2.6 ಕೋಟಿ ರೂ. ಹೂಡಿಕೆ ಮಾಡುವಂತೆ ಮಾಡಿದ್ದಾರೆ. ನಂತರ ದಂಪತಿ ಹಣ ವಾಪಸ್ಸು ಪಡೆಯಲು ಮುಂದಾದಾಗ ಬಂದಿಲ್ಲ. ಹೀಗಾಗಿ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆನ್‌ಲೈನ್ ಹೂಡಿಕೆ ಬಗ್ಗೆ ವ್ಯವಹರಿಸುವಾಗ ಜಾಗರೂಕರಾಗಿರಿ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ವಿಳಂಬ ಮಾಡದೆ ವರದಿ ಮಾಡಲು ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ