ಕಳೆದ ಎಂಟು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರೂ ಗುಜರಾತಿನ ಬನಸ್ಕಾಂತದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ರಾಜ್ಯ ಸರ್ಕಾರದಿಂದ ವೇತನ ಪಡೆಯುತ್ತಲೇ ಇದ್ದಾರೆ….!
ಶಿಕ್ಷಕಿ ಭಾವನಾ ಪಟೇಲ್ ಹಲವು ವರ್ಷಗಳಿಂದ ಶಾಲೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ದೂರು ನೀಡಿದ ನಂತರ ವಿಷಯ ಎಲ್ಲರಿಗೂ ಗೊತ್ತಾಗಿದೆ. ಪ್ರಸ್ತುತ ಐದನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ಮೂರನೇ ತರಗತಿಯಲ್ಲಿದ್ದಾಗ ಪಟೇಲ್ ಅವರನ್ನು ಕೊನೆಯ ಬಾರಿಗೆ ನೋಡಿದ್ದಾಗಿ ತಿಳಿಸಿದ್ದಾರೆ. ಆದರೆ ಶಿಕ್ಷಕರ ಗೈರುಹಾಜರಿಯ ಹೊರತಾಗಿಯೂ ವೇತನದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಪಟ್ಟಿ ಮಾಡಲಾಗಿದೆ..!
ಆಕೆಯ ಸುದೀರ್ಘ ಗೈರಿನ ಹೊರತಾಗಿಯೂ, ಪಟೇಲ್ ಇನ್ನೂ ಶಾಲೆಯ ವೇತನದಾರರ ಪಟ್ಟಿಯಲ್ಲಿದ್ದಾರೆ. ಅವರು ಅಂಬಾಜಿಯ ಪಂಚಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದಾರೆ, 2013 ರಿಂದ ಚಿಕಾಗೋದಲ್ಲಿ ವಾಸಿಸುತ್ತಿದ್ದಾರೆ ಹಾಗೂ ಅಮೆರಿಕದ ಗ್ರೀನ್ ಕಾರ್ಡ್ ಹೊಂದಿದ್ದಾರೆಂದು ವರದಿಯಾಗಿದೆ.
ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಮಾತ್ರ ಆಕೆ ಗುಜರಾತ್ಗೆ ಭೇಟಿ ನೀಡುತ್ತಾರೆ. ಆದರೆ ಆಗ ಶಾಲೆಗೆ ರಜೆ ಇರುತ್ತಿತ್ತು. ಆ ಸಮಯದಲ್ಲಿ ಅವರು ಶಾಲೆಗೆ ಭೇಟಿ ನೀಡುತ್ತಿರಲಿಲ್ಲ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರಲಿಲ್ಲ. ಆದಾಗ್ಯೂ ಶಾಲೆಯ ಪಟ್ಟಿಯಲ್ಲಿ ಹಾಗೂ ವೇತನದಾರರ ಪಟ್ಟಿಯಲ್ಲಿ ಅವರ ಹೆಸರಿದೆ ಎಂದು ವರದಿಯಾಗಿದೆ.
ವರದಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತನ್ನ ಗಮನಕ್ಕೆ ಇದು ಬಂದ ಕೂಡಲೇ ಈ ಕುರಿತು ತಾಲೂಕು ಶಿಕ್ಷಣಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ರಾಜ್ಯ ಶಿಕ್ಷಣ ಸಚಿವರಿಗೆ ದೂರು ನೀಡಲಾಗಿದೆ ಎಂದು ಆದರೆ, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಭಾರಿ ಪ್ರಾಂಶುಪಾಲರಾದ ಪಾರುಲ್ ಮೆಹ್ತಾ ಹೇಳಿದ್ದಾರೆ.
ಪ್ರಾಥಮಿಕ ಶಿಕ್ಷಣಾಧಿಕಾರಿ ಪಟೇಲ್ 2023ರ ಜನವರಿಯಲ್ಲಿ ಶಾಲೆಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದರು. ಈ ವರ್ಷದಿಂದ ವೇತನ ರಹಿತ ರಜೆಯಲ್ಲಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಶಿಕ್ಷಕಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ