ವಿವಾದಾತ್ಮಕ ಹೇಳಿಕೆಯೊಂದರಲ್ಲಿ, ಶಿವಸೇನಾ (ಏಕನಾಥ ಶಿಂಧೆ ಬಣ) ಶಾಸಕ ಸಂಜಯ ಗಾಯಕ್ವಾಡ್ ಅವರು ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಕುರಿತು ನೀಡಿದ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಗಾಯಕ್ವಾಡ ಅವರು ತಮ್ಮ ವಿಲಕ್ಷಣ ಹೇಳಿಕೆಯಲ್ಲಿ, “ ವಿದೇಶದಲ್ಲಿದ್ದಾಗ, ರಾಹುಲ್ ಗಾಂಧಿ ಅವರು ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಮುಗಿಸಲು ಬಯಸುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖವನ್ನು ಬಯಲು ಮಾಡಿದೆ ಎಂದು ಹೇಳಿದ್ದಾರೆ.
“ಇತ್ತೀಚಿನ ಅಮೇರಿಕಾ ಪ್ರವಾಸದ ವೇಳೆ ರಾಹುಲ್ ಗಾಂಧಿಯವರು ಮೀಸಲಾತಿಯನ್ನು ಅಂತ್ಯಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಇದು ಮೀಸಲಾತಿಯನ್ನು ಅಂತರ್ಗತವಾಗಿ ವಿರೋಧಿಸುವ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿಯವರ ನಾಲಿಗೆಯನ್ನು ಕತ್ತರಿಸುವ ಯಾರಿಗಾದರೂ ನಾನು 11 ಲಕ್ಷ ರೂಪಾಯಿಗಳನ್ನು ನೀಡುತ್ತೇನೆ” ಎಂದು ಗಾಯಕ್ವಾಡ್ ಹೇಳಿದರು. ರಾಹುಲ್ ಗಾಂಧಿಯವರ ಹೇಳಿಕೆಗಳು ಜನತೆಗೆ ದೊಡ್ಡ ದ್ರೋಹದ ಹೇಳಿಕೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಗಾಯಕ್ವಾಡ್, “ರಾಹುಲ್ ಗಾಂಧಿ ಅವರು ಸಂವಿಧಾನದ ಪುಸ್ತಕವನ್ನು ತೋರಿಸಿ ಬಿಜೆಪಿ ಅದನ್ನು ಬದಲಾಯಿಸುತ್ತದೆ ಎಂದು ಸುಳ್ಳು ಕಥೆಯನ್ನು ಹರಡುತ್ತಿದ್ದರು. ಆದರೆ ದೇಶವನ್ನು 400 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲು ಕಾಂಗ್ರೆಸ್ ಯೋಜಿಸುತ್ತಿದೆ” ಎಂದು ಹೇಳಿದ್ದಾರೆ.
ಗಾಯಕ್ವಾಡ್ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಶಿವಸೇನೆಯ ಮೈತ್ರಿಕೂಟದ ಪಾಲುದಾರ ಬಿಜೆಪಿ ಕೂಡ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಶಾಸಕ ಸಂಜಯ ಗಾಯಕ್ವಾಡ್ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ. “ನಾನು ಗಾಯಕ್ವಾಡ್ ಅವರ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಅಥವಾ ಅನುಮೋದಿಸುವುದಿಲ್ಲ ಎಂದು ಬವಾಂಕುಲೆ ಹೇಳಿದರು.
ಮೀಸಲಾತಿ ನೀಡುವುದು ಎಂದರೆ ಮೂರ್ಖರನ್ನು ಬೆಂಬಲಿಸುವುದು ಎಂದು ರಾಜೀವ್ ಗಾಂಧಿ ಹೇಳಿದ್ದರು. ಈಗ ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ಕೊನೆಗೊಳಿಸುವುದಾಗಿ ಹೇಳುತ್ತಾರೆ ಎಂದು ಬಿಜೆಪಿ ನಾಯಕ ಚಂದ್ರಶೇಖರ ಬಾವಂಕುಲೆ ಹೇಳಿದರು. “ನಾವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಜಾಗೃತಗೊಳಿಸುತ್ತೇವೆ ಮತ್ತು ನೆಹರು, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಅಭಿಪ್ರಾಯಗಳ ಬಗ್ಗೆ ಅವರಿಗೆ ತಿಳಿಸುತ್ತೇವೆ, ಮರಾಠ ಕೋಟಾ ಹೋರಾಟಗಾರ ಮನೋಜ ಜಾರಂಜ್ ಕೂಡ ಈ ಬಗ್ಗೆ ಯೋಚಿಸಬೇಕು” ಎಂದು ಅವರು ಹೇಳಿದರು.
ಗಾಯಕ್ವಾಡ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಗಾಯಕ್ವಾಡ್ ವಿರುದ್ಧ ಹರಿಹಾಯ್ದಯ, ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಅವರು, “ಸಂಜಯ ಗಾಯಕ್ವಾಡ್ ಅವರು ಸಮಾಜ ಮತ್ತು ರಾಜಕೀಯದಲ್ಲಿ ಬದುಕಲು ಅರ್ಹರಲ್ಲ. ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಗಾಯಕ್ವಾಡ್ ವಿರುದ್ಧ ನರಹತ್ಯೆಯ ಆರೋಪವನ್ನು ಹೊರಿಸುತ್ತಾರೆಯೇ ಎಂಬುದನ್ನು ನಾವು ನೋಡಬೇಕಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪರಿಷತ್ ಸದಸ್ಯ ಭಾಯಿ ಜಗತಾಪ ಸಹ ಗಾಯಕ್ವಾಡ್ ವಿರುದ್ಧ ವಾಗ್ದಾಳಿ ನಡೆಸಿದರು, “ನಾನು ಅಂತಹ ಜನರು ಮತ್ತು ಕಾಮೆಂಟ್‌ಗಳನ್ನು ಖಂಡಿಸುತ್ತೇನೆ. ಈ ಜನರು ರಾಜ್ಯದ ರಾಜಕೀಯವನ್ನು ಹಾಳು ಮಾಡಿದ್ದಾರೆ” ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ