ಲೆಬನಾನಿನ ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಇಂದು, ಶನಿವಾರ ಘೋಷಿಸಿದೆ. “ಹಸನ್ ನಸ್ರಲ್ಲಾ ಸತ್ತಿದ್ದಾರೆ” ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ X ನಲ್ಲಿ ಪ್ರಕಟಿಸಿದ್ದಾರೆ.
ಇದೇವೇಳೆ ಶುಕ್ರವಾರ ರಾತ್ರಿಯಿಂದ 64 ವರ್ಷದ ನಸ್ರಲ್ಲಾ ಅವರೊಂದಿಗಿನ ಸಂವಹನವು ಕಳೆದುಹೋಗಿದೆ ಎಂದು ಹಿಜ್ಬೊಲ್ಲಾಹ್‌ಗೆ ನಿಕಟವಾದ ಮೂಲವು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದೆ.
ಉತ್ತರ ಇಸ್ರೇಲ್ ಮೇಲೆ ಹಿಜ್ಬೊಲ್ಲಾ ಗುಂಪಿನಿಂದ ತೀವ್ರವಾದ ರಾಕೆಟ್ ದಾಳಿಯ ನಂತರ ಪೂರ್ವ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಡಜನ್‌ಗಟ್ಟಲೆ ಹಿಜ್ಬೊಲ್ಲಾ ಕೇಂದ್ರಗಳ ಮೇಲೆ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ. ಇಸ್ರೇಲಿ ಜೆಟ್‌ಗಳು ರಾತ್ರಿಯಿಡೀ ದಕ್ಷಿಣ ಬೈರುತ್‌ನಲ್ಲಿ ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್ ದಾಳಿ ಮಾಡಿ ಹಲವಾರು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದವು.
“ಹಸನ್ ನಸ್ರಲ್ಲಾ ಅವರು ಇನ್ನು ಮುಂದೆ ಜಗತ್ತನ್ನು ಭಯಭೀತಗೊಳಿಸಲು ಸಾಧ್ಯವಾಗುವುದಿಲ್ಲ” ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿದೆ. “ಇದು ನಮ್ಮ ಟೂಲ್‌ಬಾಕ್ಸ್‌ನ ಅಂತ್ಯವಲ್ಲ. ಸಂದೇಶವು ಸರಳವಾಗಿದೆ, ಇಸ್ರೇಲ್ ನಾಗರಿಕರನ್ನು ಬೆದರಿಸುವ ಯಾರಾದರೂ – ಅವರನ್ನು ಹೇಗೆ ತಲುಪಬೇಕು ಎಂದು ನಮಗೆ ತಿಳಿದಿದೆ” ಎಂದು ಲೆಫ್ಟಿನೆಂಟ್ ಜನರಲ್ ಹೆರ್ಜಿ ಹಲೆವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರ ಇಸ್ರೇಲ್‌ಗೆ ರಾಕೆಟ್‌ಗಳನ್ನು ಉಡಾವಣೆ ಮಾಡುವ ಜವಾಬ್ದಾರಿಯನ್ನು ಹಿಜ್ಬೊಲ್ಲಾ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ ಈ ಪ್ರತೀಕಾರದ ದಾಳಿ ನಡೆದಿದೆ. ಲೆಬನಾನ್‌ನಲ್ಲಿ ಅಗಾಧ ಅಧಿಕಾರವನ್ನು ಹೊಂದಿರುವ ನಸ್ರಲ್ಲಾ, ನಿರ್ದಿಷ್ಟವಾಗಿ ಅವರ ಶಿಯಾ ಬೆಂಬಲಿಗರಲ್ಲಿ, ಯುದ್ಧ ಮುನ್ನಡೆಸುವ ಅಥವಾ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯವಿರುವ ಏಕೈಕ ವ್ಯಕ್ತಿ ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ.
64 ವರ್ಷದ ಹಸನ್ ನಸ್ರಲ್ಲಾ ಮಗಳಾದ ಜೈನಾಬ್ ದಕ್ಷಿಣ ಬೈರುತ್‌ನಲ್ಲಿ ಹಿಜ್ಬುಲ್ಲಾ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯೊಂದರಲ್ಲಿ ಕೊಲ್ಲಲ್ಪಟ್ಟರು ಎಂದು ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿದೆ, ಆದಾಗ್ಯೂ, ಹಿಜ್ಬೊಲ್ಲಾ ಅಥವಾ ಲೆಬನಾನ್ ಮಾಧ್ಯಮ ಈ ಬಗ್ಗೆ ದೃಢಪಡಿಸಿಲ್ಲ.
ಇಸ್ರೇಲ್ 2006 ರಲ್ಲಿ ಲೆಬನಾನ್ ಮೇಲೆ ಆಕ್ರಮಣ ಮಾಡಿದ ನಂತರ ನಸ್ರಲ್ಲಾ ಕೊಲ್ಲಲ್ಪಟ್ಟರು ಎಂದು ವದಂತಿಗಳಿತ್ತು. ಆದಾಗ್ಯೂ, ಆತ ಗಾಯಗೊಳ್ಳದೆ ಕೆಲವು ದಿನಗಳ ನಂತರ ಮತ್ತೆ ಕಾಣಿಸಿಕೊಂಡಿದ್ದು, ಇಸ್ರೇಲಿ ದಾಳಿಯಲ್ಲಿ ಹಿಜ್ಬೊಲ್ಲಾದ ದಕ್ಷಿಣ ಮುಂಭಾಗದ ಕಮಾಂಡರ್ ಅಲಿ ಕರಾಕೆ ಮತ್ತು ಇತರ ಹಿಜ್ಬುಲ್ಲಾ ಸದಸ್ಯರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.
“ಹಿಜ್ಬೊಲ್ಲಾಹ್‌ನ ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ನಸ್ರಲ್ಲಾ 32 ವರ್ಷಗಳ ನೇತೃತ್ವದಲ್ಲಿ ಹಿಜ್ಬೊಲ್ಲಾಗಳು ಅನೇಕ ಇಸ್ರೇಲಿ ನಾಗರಿಕರು ಮತ್ತು ಸೈನಿಕರ ಹತ್ಯೆಗೆ ಮತ್ತು ಸಾವಿರಾರು ಭಯೋತ್ಪಾದಕ ಚಟುವಟಿಕೆಗಳ ಯೋಜನೆ ಮತ್ತು ಮರಣಕ್ಕೆ ಕಾರಣರಾಗಿದ್ದರು” ಎಂದು ಇಸ್ರೇಲಿ ಹೇಳಿಕೆ ತಿಳಿಸಿದೆ. “ವಿಶ್ವದಾದ್ಯಂತ ಹಸನ್ ನಸ್ರಲ್ಲಾ ಅನೇಕ ಭಯೋತ್ಪಾದಕ ದಾಳಿಗಳನ್ನು ನಿರ್ದೇಶಿಸಿದ್ದ ಮತ್ತು ಕಾರ್ಯಗತಗೊಳಿಸಿದ್ದ. ಇದರಲ್ಲಿ ವಿವಿಧ ರಾಷ್ಟ್ರೀಯತೆಗಳ ನಾಗರಿಕರು ಕೊಲ್ಲಲ್ಪಟ್ಟರು ಎಂದು ಇಸ್ರೇಲ್ ಹೇಳಿದೆ.
ಲೆಬನಾನ್ ಮೇಲೆ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ 700 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 1,18,000 ಜನರು ಸ್ಥಳಾಂತರಗೊಂಡಿದ್ದಾರೆ.
ಹಸನ ನಸ್ರಲ್ಲಾ ಯಾರು?
ಇರಾನ್ ಬೆಂಬಲದೊಂದಿಗೆ ಮೂರು ದಶಕಗಳಿಗೂ ಹೆಚ್ಚು ಕಾಲ ಹಿಜ್ಬೊಲ್ಲಾ ಮುನ್ನಡೆಸಿದ ನಸ್ರಲ್ಲಾ, ಇಸ್ರೇಲ್‌ನಿಂದ ಹತ್ಯೆಯಾಗುವ ಭಯದ ನಡುವೆ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
ತರಕಾರಿ ಮಾರಾಟಗಾರನ ಮಗನಾದ ನಸ್ರಲ್ಲಾ ನಾಯಕತ್ವವು ಲೆಬನಾನ್ ಆಕ್ರಮಿಸಿಕೊಂಡಿರುವ ಇಸ್ರೇಲಿ ಪಡೆಗಳ ವಿರುದ್ಧ ಹೋರಾಡಲು ಸ್ಥಾಪಿಸಲಾದ ಮಿಲಿಷಿಯಾದಿಂದ ಹಿಜ್ಬೊಲ್ಲಾ ಗುಂಪು ವಿಕಸನಗೊಂಡಿತು. ಬೈರುತ್‌ನ ಪೂರ್ವದ ಬೌರ್ಜ್ ಹಮ್ಮೌಡ್‌ನಲ್ಲಿ 1960 ರಲ್ಲಿ ಜನಿಸಿದ ಹಸನ ನಸ್ರಲ್ಲಾ ಒಂಬತ್ತು ಮಕ್ಕಳಲ್ಲಿ ಹಿರಿಯರಾಗಿದ್ದರು.
ನಸ್ರಲ್ಲಾ 1975 ರಲ್ಲಿ ಅಮಲ್ ಚಳುವಳಿ ಎಂಬ ಶಿಯಾ ಭಯೋತ್ಪಾದಕ ಸಂಘಟನೆ ಶೇರಿದರು. ಏಳು ವರ್ಷಗಳ ನಂತರ, ಅವರು ಮತ್ತು ಇತರ ಸದಸ್ಯರು ಈ ಗುಂಪಿನಿಂದ ಬೇರ್ಪಟ್ಟರು ಮತ್ತು ಇಸ್ಲಾಮಿಕ್ ಅಮಲ್ ಎಂಬ ಹೆಸರಿನ ಮತ್ತೊಂದು ಸಂಘಟನೆಯನ್ನು ಸ್ಥಾಪಿಸಿದರು. 1982 ರಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳ ದಾಳಿಯ ನಂತರ ಇಸ್ರೇಲ್ ಲೆಬನಾನ್ ಅನ್ನು ಆಕ್ರಮಿಸಿದ ಸ್ವಲ್ಪ ಸಮಯದ ನಂತರ ಇದನ್ನು ಸ್ಥಾಪಿಸಲಾಯಿತು.
ನಂತರ ಹಿಜ್ಬೊಲ್ಲಾ ಗುಂಪನ್ನು ರಚಿಸಿಕೊಂಡರು. ಇದಕ್ಕೆ ಇರಾನ್‌ನ ರೆವಲ್ಯೂಶ್ನರಿ ಗಾರ್ಡ್‌ಗಳಿಂದ ಗಣನೀಯ ಮಿಲಿಟರಿ ಮತ್ತು ಸಾಂಸ್ಥಿಕ ಬೆಂಬಲ ಪಡೆದರು. ಅಲ್ಪಾವಧಿಯಲ್ಲಿ, ಹಿಜ್ಬೊಲ್ಲಾ ಅತ್ಯಂತ ಪ್ರಮುಖ ಶಿಯಾ ಮಿಲಿಶಿಯಾವಾಗಿ ಹೊರಹೊಮ್ಮಿತು. 1985 ರಲ್ಲಿ ಹಿಜ್ಬೊಲ್ಲಾ ಅಧಿಕೃತವಾಗಿ ತನ್ನ ಸ್ಥಾಪನೆಯನ್ನು ಘೋಷಿಸಿತು ಮತ್ತು ಇಸ್ರೇಲಿನ “ನಿರ್ಮೂಲನೆ” ಗಾಗಿ ಕರೆ ನೀಡುವ ಬಹಿರಂಗ ಪತ್ರವನ್ನು ಪ್ರಕಟಿಸಿತು, ಅದು ಮುಸ್ಲಿಂ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿತು ಎಂದು ಬಿಬಿಸಿ ವರದಿ ಮಾಡಿದೆ.
1992 ರಲ್ಲಿ ಇಸ್ರೇಲಿ ಹೆಲಿಕಾಪ್ಟರ್ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಅಬ್ಬಾಸ್ ಅಲ್-ಮುಸಾವಿ ಸಾವಿಗೀಡಾದ ನಂತರ, ನಸ್ರಲ್ಲಾ ತನ್ನ 32 ನೇ ವಯಸ್ಸಿನಲ್ಲಿ ಮುಖ್ಯಸ್ಥನ ಸ್ಥಾನವನ್ನು ವಹಿಸಿಕೊಂಡರು.
ಉತ್ತರ ಇಸ್ರೇಲ್‌ಗೆ ರಾಕೆಟ್ ದಾಳಿ ಮಾಡಲು ಆದೇಶಿಸುವ ಮೂಲಕ ತಾವು ಮುಖ್ಯಸ್ಥ ಎಂಬುದನ್ನು ಘೋಷಿಸಿಕೊಂಡಿದ್ದು, ಟರ್ಕಿಯಲ್ಲಿ ಇಸ್ರೇಲಿ ರಾಯಭಾರ ಕಚೇರಿಗಳು ಮತ್ತು ಅರ್ಜೆಂಟೀನಾದ ಬ್ಯೂನಸ್ ಐರಿಸ್ ಮೇಲೆ ದಾಳಿಗೆ ಸಂಚುರೂಪಿಸಿದ ಆರೋಪವಿದೆ. ಅರ್ಜೆಂಟೀನಾದಲ್ಲಿ ನಡೆದ ದಾಳಿಯಲ್ಲಿ 29 ಜನರು ಸಾವಿಗೀಡಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ