ಬೆಂಗಳೂರು: ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರೊಬ್ಬರ ಕೈಯಲ್ಲಿ ಬೂಟುಗಳನ್ನು ತೆಗೆಸಿಕೊಂಡಿದ್ದಾರೆ ಹಾಗೂ ಆ ಸಂದರ್ಭದಲ್ಲಿ ಕಾರ್ಯಕರ್ತ ಕೈಯಲ್ಲಿ ರಾಷ್ಟ್ರ ಧ್ವಜ ಹಿಡಿದುಕೊಂಡೇ ಶೂ ಬಿಚ್ಚಿರುವುದು ಈಗ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಇದರ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನ ಗಾಂಧಿ ಸ್ಮಾರಕಕ್ಕೆ ಆಗಮಿಸಿ ನಮನ ಸಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ ಅವರು ಬೂಟು ತೆಗೆಯಲು ಮುಂದಾದರು. ಆಗ ಕಾರ್ಯಕರ್ತರೊಬ್ಬರು ಬಂದು ಮುಖ್ಯಮಂತ್ರಿಗೆ ಸಹಾಯ ಮಾಡಿದ್ದಾರೆ. ಅವರು ಬೂಟು ತೆಗೆಯಲು ಮುಂದಾದಾಗ ಅವರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದರು. ಅಲ್ಲಿದ್ದವರು ಅದನ್ನು ನೋಡಿ ಅವರಿಂದ ಧ್ವಜವನ್ನು ತೆಗೆದುಕೊಂಡಿದ್ದು ಕಂಡುಬಂದಿದೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕೆ ಅನೇಕರು ಆಕ್ಷೇಪಿಸಿದ್ದಾರೆ. ಅನೇಕರು ಸೂಕ್ತತೆ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಈ ವೀಡಿಯೊ ತ್ವರಿತವಾಗಿ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಬಿಜೆಪಿಯು ಎಕ್ಸ್‌ನಲ್ಲಿ ವೀಡಿಯೊ ಹಂಚಿಕೊಂಡಿದ್ದು, ಕಾಂಗ್ರೆಸ್ ಪಕ್ಷವು ದೇಶ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದೆ ಎಂದು ಆರೋಪಿಸಿದೆ. “ಕಾಂಗ್ರೆಸ್ ಪಕ್ಷಕ್ಕೆ ದೇಶದ ಮೇಲೆ ಗೌರವವಿಲ್ಲ, ರಾಷ್ಟ್ರಧ್ವಜಕ್ಕೂ ಗೌರವವಿಲ್ಲ. ರಾಜಕೀಯ ಜೀವನದ ಮುಸ್ಸಂಜೆಯಲ್ಲಿರುವ ಸಿದ್ದರಾಮಯ್ಯನವರಿಗೆ ಕುರ್ಚಿ ಉಳಿಸಿಕೊಳ್ಳುವ ಚಿಂತೆ, ಹೀಗಾಗಿ ರಾಷ್ಟ್ರಧ್ವಜ ಕೈಯಲ್ಲಿ ಹಿಡಿದರೂ ಮೈಮರೆತಿದ್ದಾರೆ” ಎಂದು ಬಿಜೆಪಿ ಬರೆದುಕೊಂಡಿದೆ.
ತ್ರಿವರ್ಣ ಧ್ವಜಕ್ಕೆ ಅಗೌರವ ತೋರುತ್ತಿರುವ ವೈರಲ್ ವಿಡಿಯೋ ಕುರಿತು ನೆಟಿಜನ್‌ಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಲವರು ಇದನ್ನು ರಾಷ್ಟ್ರದ ಹೆಮ್ಮೆಗೆ ಅವಮಾನವೆಂದು ಹೇಳಿದರೆ ಇತರರು ಈ ಬಗ್ಗೆ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ