ಬೆಳಗಾವಿ: ಕೌಟುಂಬಿಕ ಆಸ್ತಿ ಕಲಹದಿಂದ ಗ್ರಾಮ ಪಂಚಾಯತ ಕಚೇರಿಯೊಳಗೆ ನಿವೃತ್ತ ಯೋಧ ಹಾಗೂ ಅವರ ಮಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ.
ಮತ್ತೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅವರಾದಿ ಗ್ರಾಮದ ನಿವಾಸಿ, ಮಾಜಿ ಸೈನಿಕ ರುದ್ರಪ್ಪ ಕುಂದರಗಿ(67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ ಕೊಲೆಯಾದವರು ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರುದ್ರಪ್ಪ ಕುಂದರಗಿ ಹಾಗೂ ಅವರ ಸಹೋದರರ ಮಧ್ಯ ಹಲವು ದಿನಗಳಿಂದ ಆಸ್ತಿ ಹಂಚಿಕೆಗೆ ಸಂಬಂಧಿಸಿ ಕಲಹ ಇತ್ತು. ಈ ಕುರಿತು ಕಾಗದ ಪತ್ರಗಳ ಪರಿಶೀಲನೆಗಾಗಿ ಗ್ರಾಮ ಪಂಚಾಯತ ಕಚೇರಿಗೆ ಬಂದಿದ್ದ ವೇಳೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ರುದ್ರಪ್ಪ ಅವರ ಇಬ್ಬರು ಸಹೋದರರು ಹಾಗೂ ಸಹೋದರನ ಪುತ್ರ ಮಾರಕಾಸ್ತ್ರಗಳಿಂದ ರುದ್ರಪ್ಪ ಹಾಗೂ ಶಶಿಕಲಾ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗ್ರಾಮ ಪಂಚಾಯತ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಕಣ್ಣೆದುರೇ ಈ ಭೀಕರ ಕೃತ್ಯ ನಡೆದಿದ್ದು, ತೀವ್ರವಾಗಿ ಗಾಯಗೊಂಡ ತಂದೆ-ಮಗಳು ಪ್ರಾಣ ಬಿಟ್ಟಿದ್ದಾರೆ. ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ