ಶರದ್ ಪವಾರ್ ಮಹಾರಾಷ್ಟ್ರ ಸಿಎಂ ಆಗಿದ್ದಾಗ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾಗಿದ್ದರು ; ಪ್ರಕಾಶ ಅಂಬೇಡ್ಕರ್ ಸ್ಫೋಟಕ ಹೇಳಿಕೆ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್‌ ಪವಾರ್) ಮುಖ್ಯಸ್ಥ ಶರದ್ ಪವಾರ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ದಾವೂದ್ ಇಬ್ರಾಹಿಂ ಅವರನ್ನು ದುಬೈನಲ್ಲಿ ಭೇಟಿಯಾಗಿದ್ದರು ಎಂದು ವಂಚಿತ ಬಹುಜನ ಆಘಾಡಿ (ವಿಬಿಎ) ಪಕ್ಷದ ಮುಖ್ಯಸ್ಥ ಪ್ರಕಾಶ ಅಂಬೇಡ್ಕರ್ ಶುಕ್ರವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶರದ್ ಪವಾರ್ ಅವರು ಮುಖ್ಯಮಂತ್ರಿಯಾಗಿದ್ದಾಗ ದುಬೈನಲ್ಲಿ ದಾವೂದ್ ಇಬ್ರಾಹಿಂ ಅವರನ್ನು ಭೇಟಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಕೇಂದ್ರ ಸರ್ಕಾರ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಶರದ್ ಪವಾರ್ ಅವರು 1988 ರಿಂದ 1991 ರ ವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು ಮತ್ತು ಆ ಅವಧಿಯಲ್ಲಿ ವಿದೇಶ ಪ್ರವಾಸ ಮಾಡಿದ್ದರು ಎಂದು ಅಂಬೇಡ್ಕರ್ ತಿಳಿಸಿದರು. ಪವಾರ್ ಮೊದಲು ಲಂಡನ್‌ಗೆ ಹೋಗಿದ್ದರು, ನಂತರ ಕ್ಯಾಲಿಫೋರ್ನಿಯಾದಲ್ಲಿ ಸಭೆಗಾಗಿ ಎರಡು ದಿನ ಇದ್ದರು ಎಂದು ಅವರು ಹೇಳಿದ್ದಾರೆ.

“ನಾನು ಯಾವುದೇ ಆರೋಪ ಮಾಡಿಲ್ಲ, ಆದರೆ ನಾನು ಕೆಲವು ಸತ್ಯಗಳನ್ನು ಮುಂದಿಟ್ಟಿದ್ದೇನೆ. 1988-1991 ರವರೆಗೆ ಶರದ್ ಪವಾರ್ ಮುಖ್ಯಮಂತ್ರಿ ಆಗಿದ್ದರು ಮತ್ತು ಆ ಸಮಯದಲ್ಲಿ ಅವರು ಲಂಡನ್‌ಗೆ ಹೋಗಿ ನಂತರ ಕ್ಯಾಲಿಫೋರ್ನಿಯಾಗೆ ಸಭೆಗೆ ತೆರಳಿದರು. ಬಳಿಕ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾದರು. ಆ ದಿನ ಸಂಜೆ ಪವಾರ್ ಲಂಡನ್‌ಗೆ ತೆರಳಿ ಎರಡು ದಿನಗಳ ನಂತರ ಭಾರತಕ್ಕೆ ಮರಳಿದ್ದರು. ಈ ಸಭೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಇಬ್ರಾಹಿಂ ಅವರೊಂದಿಗಿನ ಪವಾರ್ ಅವರ ಈ ಭೇಟಿಯ ವಿಶೇಷತೆಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಅಂಬೇಡ್ಕರ್ ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ

ಮುಖ್ಯಮಂತ್ರಿಯಾಗಿ ಪವಾರ್ ಅವರು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ ಅವರು,
ಕೇಂದ್ರ ಸರ್ಕಾರವು ವಿಶೇಷವಾಗಿ ದಾವೂದ್‌ ಇಬ್ರಾಹಿಂ ಜೊತೆಗಿನ ಪವಾರ್ ಅವರ ಭೇಟಿ ಮತ್ತು ಸಭೆಗಳನ್ನು ಅನುಮೋದಿಸಲಾಗಿದೆಯೇ ಮತ್ತು ಈ ಸಭೆಗಳ ಯಾವುದೇ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಎಲ್ಲಾ 288 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement