ಬರೇಲಿ : ಉತ್ತರ ಪ್ರದೇಶದ ಬರೇಲಿಯ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾರಾ ಗ್ರಾಮದಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದು ಈವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡುತ್ತಿದ್ದ ಕಥೆಗಳಂತೆಯೇ ಇದೆ. ಈ ಪ್ರಕರಣ ಬೆಳಕಿಗೆ ಬಂದಾಗ ಜನರಿಗೂ ಇದನ್ನು ನಂಬಲು ಸಾಧ್ಯವಾಗಿಲ್ಲ.
ಮಂಗಳವಾರ ಗದ್ದೆಯಲ್ಲಿ ಭತ್ತದ ಕಟಾವು ಮಾಡುತ್ತಿದ್ದ ಯುವಕನೊಬ್ಬ ಅಲ್ಲಿ ಕಂಡಿದ್ದ ಹಾವನ್ನು ಕೊಂದ ಕೇವಲ ಒಂದು ಗಂಟೆಯ ನಂತರ ಆ ಯುವಕ ಹಾವಿನಿಂದಲೇ ಸಾವಿಗೀಡಾಗಿದ್ದಾನೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಏನಿದು ಘಟನೆ…?
ಭತ್ತ ಕಟಾವು ಮಾಡಿ ಹುಲ್ಲು ಸಂಗ್ರಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ಮಂಗಳವಾರ ಬೆಳಗ್ಗೆ ಕ್ಯಾರ್ ಗ್ರಾಮದ ನಿವಾಸಿ ಅತುಲ್ ಸಿಂಗ್ ಅವರ ಹೊಲದಲ್ಲಿ ಗೋವಿಂದ ಕಶ್ಯಪ (32) ಭತ್ತದ ಹುಲ್ಲು ಕಟಾವು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಗ್ರಾಮದ ಮಾಜಿ ಮುಖ್ಯಸ್ಥ ಸರ್ವೇಶ್ವರಪಾಲ್ ಸಿಂಗ್ ಪ್ರಕಾರ, ಹೊದಲ್ಲಿ ಭತ್ತದ ಹುಲ್ಲಿನ ಮಧ್ಯೆ ನಾಗರ ಹಾವು ಮಲಗಿತ್ತು. ಭತ್ತ ಕಟಾವು ಮಾಡಿಕೊಂಡು ಬರುತ್ತಿದ್ದ ಅತುಲ್ ಸಿಂಗ್ ಹಾಗೂ ಗೋವಿಂದ ಕಶ್ಯಪ ಅವರಿಗೆ ಈ ನಾಗರ ಹಾವು ಕಂಡಿದೆ. ಅದನ್ನು ನೋಡಿ ಗೋವಿಂದನು ಹೆದರಿದ. ನಂತರ ಆತ ದೊಣ್ಣೆ ತೆಗೆದುಕೊಂಡು ಹಾವಿಗೆ ಬಡಿದಿದ್ದಾನೆ, ಗಾಯಗೊಂಡ ಅದು ಓಡಲು ಪ್ರಯತ್ನಿಸಿದೆ. ನಂತರ ಅದರ ಹೆಡೆಗೆ ಬೂಟಿನಿಂದ ತುಳಿದು ಅದನ್ನು ಸಾಯಿಸಿದ್ದಾನೆ.
ಅಷ್ಟೊತ್ತಿಗೆ ಊಟದ ಸಮಯವಾಗಿದ್ದರಿಂದ ಸತ್ತ ಹಾವನ್ನು ಆ ಜಾಗದಲ್ಲಿ ಆಗೆಯೇ ಬಿಟ್ಟು ಅತುಲ್ ಸಿಂಗ್ ಹಾಗೂ ಗೋವಿಂದ ಕಶ್ಯಪ ಊಟಕ್ಕೆ ಮನೆಗೆ ತೆರಳಿದ್ದಾರೆ. ಊಟ ಮಾಡಿದ ಬಳಿಕ ಅತುಲ್ ಸಿಂಗ್ ಕೆಲ ಹೊತ್ತು ವಿಶ್ರಾಂತಿಗೆಂದು ಅಲ್ಲಿಯೇ ಉಳಿದಿದ್ದಾನೆ. ಕಾರ್ಮಿಕ ಗೋವಿಂದ ಸುಮಾರು ಒಂದು ಗಂಟೆ ಬಳಿಕ ಭತ್ತ ಕಟಾವು ಮಾಡಲು ಹೊಲಕ್ಕೆ ಆಗಮಿಸಿದ್ದಾನೆ. ಅಷ್ಟೊತ್ತಿಗೆ ಪಕ್ಕದ ಹೊಲದಲ್ಲಿನ ಕೆಲಸಗಾರರು ಸಹ ಊಟಕ್ಕೆಂದು ಮನೆಗೆ ತೆರಳಿದ್ದರು.
ಗೋವಿಂದ ಕಶ್ಯಪ ಭತ್ತ ಕಟಾವು ಮಾಡಲು ಆರಂಭಿಸಿದ್ದಾನೆ. ಆಗ ಹಾವು ಸಾಯಿಸಿದ ಸ್ಥಳದಲ್ಲೇ ಕಂಡುಬಂದ ನಾಗರ ಹಾವು ಈತನ ಕೈಗೆ ಕಚ್ಚಿದೆ. ಕಚ್ಚಿದ ಹಾವು ಭತ್ತದ ಹುಲ್ಲಿನೊಳಗೆ ಹೋಗಿ ತಕ್ಷಣವೇ ಕಣ್ಮರೆಯಾಗಿದೆ. ಹಾವು ಕಚ್ಚುತ್ತಿದ್ದಂತೆ ಗೋವಿಂದ ಕಶ್ಯಪ ಆತಂಕಗೊಂಡಿದ್ದಾನೆ. ತಕ್ಷಣವೇ ಮನೆಯತ್ತ ಹೋಗಲು ಮುಂದಾಗಿದ್ದಾನೆ. ಆದರೆ ಕಚ್ಚಿದ್ದು ವಿಷಕಾರಿ ಹಾವಾಗಿದ್ದ ಕಾರಣ ಕೆಲ ಹೊತ್ತಲ್ಲೇ ಅಸ್ವಸ್ಥಗೊಂಡಿದ್ದಾನೆ. ಹಾವಿನ ವಿಷವು ಮಾರಣಾಂತಿಕವಾಗಿದ್ದರಿಂದ ಈತ ಅರ್ಧ ದಾರಿಯಲ್ಲೇ ಕುಸಿದು ಬಿದ್ದಿದ್ದಾನೆ. ತೋಟದ ಮಾಲೀಕ ಅತುಲ್ ಸಿಂಗ್ ವಾಪಸ್ ಹೊಲಕ್ಕೆ ಬರುತ್ತಿರುವಾಗ ಗೋವಿಂದ ಕಶ್ಯಪ ಪ್ರಜ್ಞೆಯಿಲ್ಲದೆ ಹೊಲದಲ್ಲಿ ಕುಸಿದು ಬಿದ್ದಿರುವುದನ್ನು ಕಂಡಿದ್ದಾನೆ. ತಕ್ಷಣವೇ ಎಲ್ಲರಿಗೂ ಮಾಹಿತಿ ನೀಡಿ, ಗೋವಿಂದನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ನಂತರ ಕೊನೆಯ ಪ್ರಯತ್ನವಾಗಿ ಹಾವು ಕಡಿತವನ್ನು ಗುಣಪಡಿಸುವುದಾಗಿ ಹೇಳಿದ ಬೈಗಿ (ಭೂತೋಚ್ಚಾಟಕ) ಬಳಿಯೂ ಕರೆದೊಯ್ದಿದ್ದಾರೆ. ಆದರೆ ಅಲ್ಲಿಯೂ ಪ್ರಯೋಜನವಾಗಲಿಲ್ಲ. ನಂತರ ಮಂಗಳವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗೋವಿಂದ ಕಶ್ಯಪ (32) ದಿನಗೂಲಿ ಕಾರ್ಮಿಕನಾಗಿದ್ದು, ಪತ್ನಿ ನನ್ಹಿ ದೇವಿ ಹಾಗೂ ಐವರು ಮಕ್ಕಳಿರುವ ಕುಟುಂಬಕ್ಕೆ ಆಧಾರವಾಗಿದ್ದ ಎಂದು ವರದಿಯಾಗಿದೆ.
ಹೊಲದಲ್ಲಿ ಸತ್ತ ಹಾವಿನ ಪಕ್ಕ ಬೇರೊಂದು ಹಾವು ಬಹಳ ಹೊತ್ತಿನಿಂದ ಓಡಾಡುತ್ತಿತ್ತು, ತಾವು ನೋಡಿದ್ದಾಗಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಹೇಳಿದ್ದಾರೆ. ಹೀಗಾಗಿ ನಾಗರ ಹಾವನ್ನು ಸಾಯಿಸಿದ್ದಕ್ಕೆ ಕೋಪಗೊಂಡ ಮತ್ತೊಂದು ಹಾವು ಗೋವಿಂದನಿಗೆ ಕಚ್ಚಿ ಸೇಡು ತೀರಿಸಿಕೊಂಡಿರಬಹುದು ಎಂದು ಗ್ರಾಮದಲ್ಲಿ ಚರ್ಚೆಯಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ