ಪಾಟ್ನಾ: ಬಿಹಾರದ ನಾಲ್ಕು ವಿಧಾನಸಭಾ ಸ್ಥಾನಗಳ ಮುಂಬರುವ ಉಪಚುನಾವಣೆಗಳಿಗೆ ಮುಂಚಿತವಾಗಿ, ಜನ ಸೂರಜ್ ಪಕ್ಷದ ಸಂಸ್ಥಾಪಕರಾದ ಪ್ರಶಾಂತ ಕಿಶೋರ ಅವರು ತಾವು ಚುನಾವಣಾ ತಂತ್ರಗಾರರಾಗಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಸಲಹೆ ನೀಡಲು ಕನಿಷ್ಠ 100 ಕೋಟಿ ರೂಪಾಯಿಗಳ ಶುಲ್ಕವಾಗಿ ವಿಧಿಸುವುದಾಗಿ ಹೇಳಿದ್ದಾರೆ.
ಬಿಹಾರದ ಬೆಳಗಂಜನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅವರು ಇದನ್ನು ಬಹಿರಂಪಡಿಸಿದ್ದಾರೆ. ಇಡೀ ಬಿಹಾರದಲ್ಲಿ ತನಗೆ ಸರಿಸಮಾನವಾದ ಶುಲ್ಕವನ್ನು ಯಾರೂ ವಿಧಿಸುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ಸುಮಾರು 10 ರಾಜ್ಯಗಳ ಸರ್ಕಾರವು ತಾನು ರೂಪಿಸಿದ ಕಾರ್ಯತಂತ್ರಗಳ ಮೇಲೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
“ನನ್ನ ಪ್ರಚಾರಕ್ಕಾಗಿ ಟೆಂಟ್‌ಗಳು ಮತ್ತು ಮೇಲಾವರಣಗಳನ್ನು ಸ್ಥಾಪಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ದುರ್ಬಲ ಎಂದು ನೀವು ಭಾವಿಸುತ್ತೀರಾ? ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿಲ್ಲ, ಪಡೆದಿಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ, ನನ್ನ ಶುಲ್ಕ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚು ” ಪ್ರಶಾಂತ ಕಿಶೋರ ಹೇಳಿದ್ದಾರೆ. “ಮುಂದಿನ ಎರಡು ವರ್ಷಗಳವರೆಗೆ, ನಾನು ಅಂತಹ ಒಂದು ಚುನಾವಣಾ ತಂತ್ರಗಾರಿಕೆಯೊಂದಿಗೆ ನನ್ನ ಪ್ರಚಾರ ರ್ಯಾಲಿಯನ್ನು ನಡೆಸಬಹುದು. 10 ವಿವಿಧ ರಾಜ್ಯಗಳ ಸರ್ಕಾರವು ನನ್ನ ಕಾರ್ಯತಂತ್ರಗಳ ಮೇಲೆ ನಡೆಯುತ್ತಿದೆ” ಎಂದು ಪ್ರಶಾಂತ ಕಿಶೋರ ಸಭೆಗೆ ತಿಳಿಸಿದರು.
ಅಕ್ಟೋಬರ್ 30 ರಂದು, ಪ್ರಶಾಂತ ಕಿಶೋರ ಅವರು, ಬಿಹಾರದ ಜನರು ಜಾತಿ ಮತ್ತು ಉಚಿತ ಪಡಿತರದ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದನ್ನು ಬಿಡಬೇಕು ಎಂದು ಹೇಳಿದರು. ದೀರ್ಘಕಾಲದಿಂದಲೂ ರಾಜ್ಯ ಹಿಂದುಳಿಯಲು ಮತದಾನದ ನಡವಳಿಕೆಯೂ ಕಾರಣ ಎಂದು ಅವರು ಹೇಳಿದರು.
ಮುಂಬರುವ ಉಪಚುನಾವಣೆಗೆ, ಬೆಳಗಂಜನಿಂದ ಮೊಹಮ್ಮದ್ ಅಮ್ಜದ್, ಇಮಾಂಗಂಜ್‌ನಿಂದ ಜಿತೇಂದ್ರ ಪಾಸ್ವಾನ್, ರಾಮಗಢದಿಂದ ಸುಶೀಲಕುಮಾರ ಸಿಂಗ್ ಕುಶ್ವಾಹಾ ಮತ್ತು ತರಾರಿಯಿಂದ ಕಿರಣ ಸಿಂಗ್ ಜನ ಸೂರಜ್ ಪಕ್ಷದಿಂದ ಅಭ್ಯರ್ಥಿಯಾಗಿದ್ದಾರೆ.
ನವೆಂಬರ್ 13 ರಂದು ಉಪಚುನಾವಣೆಗಳನ್ನು ನಿಗದಿಪಡಿಸಲಾಗಿದ್ದು, ನವೆಂಬರ್ 23 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ