ಢಾಕಾ: ಹಿಂದೂ ಧಾರ್ಮಿಕ ನಾಯಕ ಚಿನ್ಮಯ ಕೃಷ್ಣ ದಾಸ್ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿದಾಗಿನಿಂದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ ಶುಕ್ರವಾರ ಮೂರು ಹಿಂದೂ ದೇವಾಲಯಗಳಿಗೆ ಹಾನಿ ಮಾಡಲಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ ಶುಕ್ರವಾರ 2:30 ರ ಸುಮಾರಿಗೆ ದಾಳಿ ನಡೆದಿದ್ದು, ಶಾಂತೇಶ್ವರಿ ಮಾತ್ರಿ ದೇವಸ್ಥಾನ, ಸಮೀಪದ ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಲಿಬರಿ ದೇವಸ್ಥಾನವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸುದ್ದಿ ಪೋರ್ಟಲ್ BDNews24.com ವರದಿ ಮಾಡಿದೆ.
” ಘೋಷಣೆಗಳನ್ನು ಕೂಗುತ್ತ ಬಂದ ಜನರ ಗುಂಪು ದೇವಾಲಯಗಳ ಮೇಲೆ ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆದರು, ಶೋನಿ ದೇವಾಲಯ ಮತ್ತು ಇತರ ಎರಡು ದೇವಾಲಯಗಳ ದ್ವಾರಗಳನ್ನು ಹಾನಿಗೊಳಿಸಿದರು” ಎಂದು ದೇವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಪೋರ್ಟಲ್ ವರದಿ ಮಾಡಿದೆ. ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಅಬ್ದುಲ್ ಕರೀಂ ದಾಳಿಯನ್ನು ಖಚಿತಪಡಿಸಿದ್ದು, ದಾಳಿಕೋರರು ದೇವಾಲಯಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಶಾಂತೇಶ್ವರಿ ಮುಖ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಕಾಯಂ ಸದಸ್ಯ ತಪನ್ ದಾಸ್ bdnews24.com ಜೊತೆ ಮಾತನಾಡಿ, “ಜುಮಾ ಪ್ರಾರ್ಥನೆಯ ನಂತರ ನೂರಾರು ಮಂದಿ ಮೆರವಣಿಗೆ ಆಗಮಿಸಿದರು. ಅವರು ಹಿಂದೂ ವಿರೋಧಿ ಮತ್ತು ಇಸ್ಕಾನ್ ವಿರೋಧಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.” “ನಾವು ದಾಳಿಕೋರರನ್ನು ಅಡ್ಡಿಪಡಿಸಲಿಲ್ಲ. ಪರಿಸ್ಥಿತಿ ಹದಗೆಟ್ಟಾಗ, ನಾವು ಸೇನೆಯನ್ನು ಕರೆದಿದ್ದೇವೆ, ಅವರು ತ್ವರಿತವಾಗಿ ಆಗಮಿಸಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿದರು. ಮಧ್ಯಾಹ್ನದ ಮೊದಲು ಎಲ್ಲಾ ದೇವಾಲಯದ ದ್ವಾರಗಳನ್ನು ಮುಚ್ಚಲಾಯಿತು. ದುಷ್ಕರ್ಮಿಗಳು ಅಪ್ರಚೋದಿತವಾಗಿ ದಾಳಿ ನಡೆಸಿದರು ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಮಾಜಿ ಸದಸ್ಯ, ಆಧ್ಯಾತ್ಮಿಕ ನಾಯಕ ಚಿನ್ಮಯ ಕೃಷ್ಣ ದಾಸ್ ಅವರನ್ನು ಸೋಮವಾರ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿದ್ದು, ಮಂಗಳವಾರ ಜಾಮೀನು ನಿರಾಕರಿಸಲಾಯಿತು. ಇದು ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ ಸೇರಿದಂತೆ ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಹಿಂದೂ ಸಮುದಾಯದ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು.
ಅಕ್ಟೋಬರ್ 30 ರಂದು, ಹಿಂದೂ ಸಮುದಾಯದ ರ್ಯಾಲಿಯಲ್ಲಿ ಚಟ್ಟೋಗ್ರಾಮದ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ದಾಸ್ ಸೇರಿದಂತೆ 19 ಜನರ ವಿರುದ್ಧ ಚಟ್ಟೋಗ್ರಾಮದ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಯಿತು.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಭಾರತ ಶುಕ್ರವಾರ ಹೇಳಿದೆ. ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳು ಮತ್ತು ದೇವಾಲಯಗಳ ಮೇಲಿನ ದಾಳಿಗಳ ಬಗ್ಗೆ ಭಾರತ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ನಾಗರಿಕರ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ಢಾಕಾದ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ ಸಂಸತ್ತಿಗೆ ತಿಳಿಸಿದರು.
ಬಾಂಗ್ಲಾದೇಶ ಶುಕ್ರವಾರ ಕೋಲ್ಕತ್ತಾದ ಡೆಪ್ಯುಟಿ ಹೈಕಮಿಷನ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಭಾರತದಲ್ಲಿನ ತನ್ನ ಎಲ್ಲಾ ರಾಜತಾಂತ್ರಿಕ ಕಾರ್ಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತವನ್ನು ಒತ್ತಾಯಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ