ಹೈದರಾಬಾದ್: ಕಳೆದ ವಾರ ಹೈದರಾಬಾದ್ ಥಿಯೇಟರ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಮಧ್ಯಾಹ್ನ ಪೊಲೀಸರು ಬಂಧಿಸಿದ್ದಾರೆ. ಇಂದು, ಶುಕ್ರವಾರ ಬೆಳಿಗ್ಗೆ ಅಲ್ಲು ಅರ್ಜುನ್ ಅವರನ್ನು ಅವರ ಜೂಬಿಲಿ ಹಿಲ್ಸ್ ಮನೆಯಲ್ಲಿ ಬಂಧಿಸಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಅವರನ್ನು ಕರೆದೊಯ್ಯಲಾಯಿತು.
ಅಲ್ಲು ಅರ್ಜುನ್ ಈಗಾಗಲೇ ತಮ್ಮ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗಿನ ಚಿತ್ರ ʼಪುಷ್ಪ 2: ದಿ ರೂಲ್ʼನ ಪ್ರೀಮಿಯರ್ ಶೋ (Premier Show) ಸಂದರ್ಭದಲ್ಲಿ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಕ್ಕಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಅವರನ್ನು ಬಂಧಿಸಿದಾಗ ನಟನ ತಂದೆ – ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ ಮತ್ತು ಕುಟುಂಬದ ಸದಸ್ಯರು ಇದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು, ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಸೋಮವಾರದವರೆಗೆ ತನ್ನ ಬಂಧನವನ್ನು ವಿಳಂಬಗೊಳಿಸುವಂತೆ ನಟನ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಲ್ಲು ಅರ್ಜುನ್‌ರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಅರ್ಜಿ ಸಲ್ಲಿಸಿದ್ದರು. ನಾಂಪಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಅಲ್ಲು ಅರ್ಜುನ್ ಜೈಲಿನಲ್ಲಿರಲಿದ್ದಾರೆ. ಪೊಲೀಸರು ಅವರನ್ನು ವಿಚಾರಣೆ ನಡೆಸಲಿದ್ದಾರೆ. ಅವರನ್ನು ಚಂಚಲ್‌ಗೂಡ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಹೈದರಾಬಾದ್ ಪೊಲೀಸರು ಈ ಹಿಂದೆ 41 ವರ್ಷದ ಸ್ಟಾರ್ ಮತ್ತು ಅವರ ಭದ್ರತಾ ತಂಡದ ಸದಸ್ಯರು ಮತ್ತು ನಗರದ ಸಂಧ್ಯಾ ಥಿಯೇಟರ್‌ನ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲು ಅರ್ಜುನ್ ಮೇಲೆ ಚಿಕ್ಕಡಪಳ್ಳಿ ಪೊಲೀಸರು ಬಿಎನ್‌ಎಸ್ 118(1), ಬಿಎನ್‌ಎಸ್ 105 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್ 105 ಎಂದರೆ ತನ್ನ ಪಾತ್ರವಿಲ್ಲದೆ, ಉದ್ದೇಶಪೂರ್ವಕವಾಗಿ ಅಲ್ಲದೆ ಅಪರಾಧದಲ್ಲಿ ಭಾಗಿಯಾಗುವುದು ಎಂದು ತಿಳಿಸುತ್ತದೆ, ಹಾಗೆಯೇ ಬಿಎನ್‌ಎಸ್ 118(1) ಎಂದರೆ ಉದ್ದೇಶಪೂರ್ವಕವಾಗಿ ಆಯುಧದಿಂದ ಹಲ್ಲೆ ನಡೆಸುವುದು ಎಂದು ತಿಳಿಸುತ್ತದೆ. ಅವರು ಪ್ರಕರಣದಲ್ಲಿ ಹನ್ನೊಂದನೇ ಆರೋಪಿಯಾಗಿದ್ದಾರೆ. ಸಾವಿಗೀಡಾದ ಮಹಿಳೆಯ ಪತಿ ಸಲ್ಲಿಸಿದ ದೂರಿನಲ್ಲಿ ನಟ ಅಲ್ಲು ಅರ್ಜುನ್ ಮತ್ತು ಥಿಯೇಟರ್ ಆಡಳಿತವು ಥಿಯೇಟರ್‌ನಲ್ಲಿ ಚಲನಚಿತ್ರದ ಪ್ರದರ್ಶನಕ್ಕೆ ಹಾಜರಾಗುವ ನಂತರದ ತಾಔು ಬರುವುದನ್ನು ಪೊಲೀಸರಿಗೆ ತಿಳಿಸದೆ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ವಿಡಿಯೊವೊಂದು ಸಾಕಷ್ಟು ವೈರಲ್ ಆಗಿದೆ. ವೀಡಿಯೊದಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ ರೀತಿಗೆ ನಟ ಅಲ್ಲು ಅರ್ಜುನ್ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸರು ನಟನನ್ನು ಬಂಧಿಸಲು ನೇರ ಬೆಡ್ ರೂಮಿಗೆ ನುಗ್ಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಬಂಧನಕ್ಕೆ ಸಹಕರಿಸಲು ಸ್ವತಃ ನಾನೇ ಸಿದ್ಧನಿರುವಾಗ ಬೆಡ್‌ರೂಮ್‌ಗೆ ನುಗ್ಗುವ ಅವಶ್ಯಕತೆ ಏನಿತ್ತು? ನಾನು ಬೆಡ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿದ್ದೆ. ಹೊರಗಡೆ ಬಂದು ಕರೆದಿದ್ದರೆ ನಾನು ಬರುತ್ತಿದ್ದೆ. ನೀವು ಬಂದಿದ್ದು, ಕರೆದುಕೊಂಡು ಬಂದಿದ್ದು ತಪ್ಪಲ್ಲ. ಆದರೆ ಬೆಡ್ ರೂಂಗೆ ನುಗ್ಗಿದ್ದು ತಪ್ಪು ಎಂದು ಅಲ್ಲು ಅರ್ಜುನ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೆರವು
ʼಪುಷ್ಪಾ 2: ದಿ ರೂಲ್’ ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಶುಕ್ರವಾರ (ಡಿ. 6) 25 ಲಕ್ಷ ರೂ. ನೆರವು ಘೋಷಿಸಿದ್ದರು. ಸಂಧ್ಯಾ ಚಿತ್ರಮಂದಿರದಲ್ಲಿ ಬುಧವಾರ ಪ್ರೀಮಿಯರ್ ಶೋ ವೇಳೆ ಜನರ ನೂಕು ನುಗ್ಗಲು ಕಾರಣ ಸಂಭವಿಸಿದ ಕಾಲ್ತುಳಿತದಿಂದಾಗಿ ರೇವತಿ (35) ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಮಗ ಶ್ರೀತೇಜ (8) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಚಿಕಿತ್ಸೆಗೆ ತಗುಲುವ ವೆಚ್ಚವನ್ನೂ ಭರಿಸುವುದಾಗಿ ನಟ ತಿಳಿಸಿದ್ದರು. ಪ್ರಕರಣ ಸಂಬಂಧ ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ಮೂವರನ್ನು ಬಂಧಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ