ತಂತ್ರಜ್ಞಾನದ ಕ್ಷೇತ್ರದ ಮಹಾ ಆವಿಷ್ಕಾರ ಎಂದು ಕರೆಯಲ್ಪಡುವ ಕೃತಕ ಬುದ್ಧಿಮತ್ತೆ ಪದೇಪದೇ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್ ಕೊಡದ ಪೋಷಕರನ್ನು ಕೊಲೆ ಮಾಡಲು ಹದಿಹರೆಯದ ಬಾಲಕನೊಬ್ಬನಿಗೆ ಸೂಚಿಸಿ ಈಗ ಎಐ ಚಾಟ್‌ಬಾಟ್ ತೊಂದರೆಗೆ ಸಿಲುಕಿಕೊಂಡಿದೆ.
ಅಮೆರಿಕದ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದ್ದು, ಚಾಟ್‌ಬಾಟ್‌ನ ಅಪಾಯಕಾರಿ ನಡೆಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ.ಟೆಕ್ಸಾಸ್‌ನಲ್ಲಿ ಸಲ್ಲಿಸಲಾದ ಪ್ರಮುಖ ಮೊಕದ್ದಮೆಯಲ್ಲಿ, ಕೃತಕ ಬುದ್ಧಿಮತ್ತೆ (AI) ಪ್ಲಾಟ್‌ಫಾರ್ಮ್ ಕ್ಯಾರೆಕ್ಟರ್.ಎಐ (Character.ai) ತನ್ನ ಚಾಟ್‌ಬಾಟ್ ಸಂವಹನಗಳ ಮೂಲಕ ಮಕ್ಕಳಲ್ಲಿ ಹಾನಿಕಾರಕ ನಡವಳಿಕೆಯನ್ನು ಪ್ರೋತ್ಸಾಹಿಸುತ್ತಿದೆ, ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಕುಟುಂಬಗಳು ಆರೋಪಿಸಿ ಪ್ರಕರಣ ದಾಖಲಿಸಿವೆ.
ಬಿಬಿಸಿ (BBC) ವರದಿಯ ಪ್ರಕಾರ, ಈ ಎಐ (AI) ಚಾಟ್‌ಬಾಟ್ ಪ್ಲಾಟ್‌ಫಾರ್ಮ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ 17 ವರ್ಷದ ಹುಡುಗನಿಗೆ ಮೊಬೈಲ್ ಬಳಕೆ ಮೇಲೆ ಸಮಯದ ಮಿತಿ ವಿಧಿಸಿದ ನಂತರ ಆತನ ಹೆತ್ತವರನ್ನು ಕೊಲ್ಲುವುದು “ಸಮಂಜಸವಾದ ಪ್ರತಿಕ್ರಿಯೆ” ಎಂದು ಚಾಟ್ ಬಾಟ್ ಸಲಹೆ ನೀಡಿದೆ. ಈ ಘಟನೆಯು ಹದಿಹರೆಯದ ಬಳಕೆದಾರರ ಮೇಲೆ AI-ಚಾಲಿತ ಬಾಟ್‌ಗಳ ಪ್ರಭಾವ ಮತ್ತು ಅವು ಉಂಟುಮಾಡಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ.
ಚಾಟ್‌ಬಾಟ್‌ನ ಪ್ರತಿಕ್ರಿಯೆಯು ಹಿಂಸಾಚಾರವನ್ನು ಉತ್ತೇಜಿಸಿದೆ ಎಂದು ಮೊಕದ್ದಮೆಯು ಆರೋಪಿಸಿದೆ, ಈ ಕುಟುಂಬಗಳು ಕ್ಯಾರೆಕ್ಟರ್.ಎಐ ಮಕ್ಕಳಿಗೆ ನೇರ ಬೆದರಿಕೆಯನ್ನು ಒಡ್ಡುತ್ತದೆ ಎಂದು ವಾದಿಸುತ್ತವೆ. ಕುಟುಂಬಗಳು ಪ್ಲಾಟ್‌ಫಾರ್ಮ್‌ನ ಸೇಫ್ ಗಾರ್ಡ್ ಕೊರತೆಯು ಪೋಷಕರು ಮತ್ತು ಅವರ ಮಕ್ಕಳ ನಡುವಿನ ಸಂಬಂಧಕ್ಕೆ ಹಾನಿಕಾರಕವಾಗಿದೆ ಎಂದು ಹೇಳಿಕೊಂಡಿವೆ.
AI ಚಾಟ್‌ಬಾಟ್‌ಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವವರೆಗೆ ನ್ಯಾಯಾಲಯವು ವೇದಿಕೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕೆಂದು ದೂರುದಾರರು ವಿನಂತಿಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಚಾಟ್‌ಬಾಟ್, ದಶಕಗಳ ಕಾಲ ಪೋಷಕರಿಂದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಮಗ ಅವರನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿಯನ್ನು ಓದಿದ ಬಳಿಕ, ಹೀಗೆ ಉತ್ತರಿಸಿದ್ದಾಗಿ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ