ವಯನಾಡು: ಎರಡು ಗುಂಪುಗಳ ನಡುವಿನ ಜಗಳ ಬಿಡಿಸಲು ಹೋದ ಆದಿವಾಸಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ರಸ್ತೆಯುದ್ದಕ್ಕೂ ಅಮಾನುಷವಾಗಿ ಎಳೆದೊಯ್ದ ಘಟನೆ ವಯನಾಡಿನ ಮಾನಂತವಾಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಥನ್ ಎಂದು ಗುರುತಿಸಲಾಗಿದ್ದು, ಕಾರಿನ ಬಾಗಿಲಿಗೆ ಕೈ ಸಿಕ್ಕಿಕೊಂಡ ಆತನನ್ನು ಸುಮಾರು ಅರ್ಧ ಕಿಲೋಮೀಟರ್ ಎಳೆದೊಯ್ದಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಯನಾಡಿನ ಕಣಿಯಂಬೆಟ್ಟ ಮೂಲದನಾಲ್ವರು ಕಾರಿನಲಗಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಎಲ್ 52 ಎಚ್ 8733 ನೋಂದಣಿ ಸಂಖ್ಯೆಯ ಸೆಲೆರಿಯೊ ಕಾರು ಕಣಿಯಂಬೆಟ್ಟದಲ್ಲಿ ಪತ್ತೆಯಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಮಾನಂತವಾಡಿ ಪೊಲೀಸರು ಹೇಳಿದ್ದಾರೆ.
ಸ್ಥಳೀಯರ ಪ್ರಕಾರ, ಮಾನಂತವಾಡಿಯ ಪಯ್ಯಂಪಲ್ಲಿಯ ಕೂಡಲ್‌ಕಡವು ಚೆಕ್‌ಡ್ಯಾಮ್‌ಗೆ ಭೇಟಿ ನೀಡಲು ಬಂದಿದ್ದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರು ಮತ್ತು ಪ್ರವಾಸಿಗರನ್ನು ಒಳಗೊಂಡ ಜಗಳವು ಉಲ್ಬಣಗೊಂಡಿತು. ಅದರಲ್ಲಿ ಒಬ್ಬ ಕಲ್ಲು ಎಸೆಯಲು ಮುಂದಾಗಿದ್ದ. ಆ ಯುವಕನನ್ನು ತಡೆಯಲು ಮಥನ್ ಮುಂದಾದರು. ಆಗ ಕಾರಿನಲ್ಲಿದ್ದವರು ತರಾತುರಿಯಲ್ಲಿ ಬಾಗಿಲು ಹಾಕಿಕೊಂಡು ಕಾರು ಚಲಾಯಿಸುವಾಗ ಮಥನ್ ಅವರ ಹೆಬ್ಬರಳು ಬಾಗಿಲಿನಲ್ಲಿ ಸಿಕ್ಕಿಕೊಂಡಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುವಕರು ಕಾರು ಓಡಿಸಿ ಕೈ ಸಿಲುಕಿಕೊಂಡ ಮಥನ್ ಅವರನ್ನು ಡಾಂಬರ್ ರಸ್ತೆಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ಎಳೆಯೊಯ್ದಿದ್ದಾರೆ. ಕಾರು ನಿಲ್ಲಿಸುವಂತೆ ಪದೇ ಪದೇ ಕೂಗಿದರೂ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಎಳೆದೊಯ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಮಥನ್ ಅವರ ಸೊಂಟ ಮತ್ತು ಕೈಕಾಲುಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಾನಂತವಾಡಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ