ಅಮಿತ್ ಶಾ ಹೇಳಿಕೆಯಿಂದ ಕೋಲಾಹಲ | ಸಂಸತ್‌ ಬಳಿ ಬಿಜೆಪಿ-ಇಂಡಿಯಾ ಪ್ರತಿಭಟನೆ ; ಬಿಜೆಪಿ ಸಂಸದರಿಗೆ ಗಾಯ; ರಾಹುಲ್‌ ಗಾಂಧಿ ತಳ್ಳಿರುವ ಆರೋಪ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ರಾಜ್ಯಸಭೆಯಲ್ಲಿ ಮಾತನಾಡುವಾಗ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ (BR Ambedkar) ಅವರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸಿ ಎರಡು ದಿನಗಳಿಂದ ಪ್ರತಿಭಟನೆಗಳು ನಡೆಸುತ್ತಿವೆ. ಇಂದು, ಗುರುವಾರ (ಡಿ.19) ಕೂಡ ಸಂಸತ್ ಭವನದ ಎದುರು ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ನ ಸದಸ್ಯರು ನೀಲಿ ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇದಕ್ಕೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರು ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತ, ನಾಮಫಲಕಗಳನ್ನು ಹಿಡಿದು ಸಂಸತ್ತಿನ ಆವರಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಪ್ರತಿಭಟನಾ ಮೆರವಣಿಗೆ ಮುಖಾಮುಖಿಯಾಗಿದ್ದು, ಈ ವೇಳೆ ನಡೆದ ಹೈಡ್ರಾಮಾ ವೇಳೆ ಬಿಜೆಪಿ ಸಂಸದ ಪ್ರತಾಪ ಸಾರಂಗಿ ಗಾಯಗೊಂಡಿದ್ದಾರೆ.

ವಿಪಕ್ಷ ನಾಯಕ ರಾಹುಲ್‌ ಗಾಂಧಿ ತನ್ನನ್ನು ತಳ್ಳಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದೀಗ ಅವರ ವಿರುದ್ಧ FIR ದಾಖಲಿಸಲು ಬಿಜೆಪಿ ಮುಂದಾಗಿದೆ. ಆದರೆ ಈ ಆರೋಪವನ್ನು ರಾಹುಲ್ ಗಾಂಧಿ ತಳ್ಳಿ ಹಾಕಿದ್ದಾರೆ. ಅವರನ್ನು ನಾನು ತಳ್ಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿದ್ದು ಗಾಯಗೊಂಡಿರುವ ಪ್ರತಾಪ ಚಂದ್ರ ಸಾರಂಗಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೋರ್ವ ಬಿಜೆಪಿ ಸಂಸದ ಮುಖೇಶ ರಜಪೂತ ಕೂಡ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿಯಿದೆ.
ಈ ಮಧ್ಯೆ ಬಿಜೆಪಿ ಸಂಸದರು ತಳ್ಳಿದ್ದರಿಂದ ತನಗೂ ಗಾಯವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ಅವರು, ಬಿಜೆಪಿ ಸಂಸದರು ತಮ್ಮನ್ನು ಮಕರ ದ್ವಾರದ ಬಳಿ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. “ಅವರು ತಳ್ಳಿದ ನಂತರ ನಾನು ನನ್ನ ಸಮತೋಲನವನ್ನು ಕಳೆದುಕೊಂಡೆ ಮತ್ತು ಮಕರ ದ್ವಾರದ ಮುಂದೆ ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಇದು ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನನ್ನ ಮೊಣಕಾಲುಗಳಿಗೆ ಗಾಯವನ್ನು ಉಂಟುಮಾಡಿದೆ” ಎಂದು ಅವರು ಹೇಳಿದ್ದಾರೆ. ನಂತರ ಕಾಂಗ್ರೆಸ್ ಸಂಸದರು ಕುರ್ಚಿಯನ್ನು ತಂದರು ಮತ್ತು ನನ್ನನ್ನು ಅದರ ಮೇಲೆ ಕೂರಿಸಿದರು. ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ವೈಯಕ್ತಿಕವಾಗಿ ನನ್ನ ಮೇಲೆ ಮಾತ್ರವಲ್ಲದೆ ವಿಪಕ್ಷದ ನಾಯಕ, ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸಂಸದರ ಗಾಯದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, “ನಾನು ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ … ಆದರೆ ಬಿಜೆಪಿ ಸಂಸದರು ನನ್ನನ್ನು ತಡೆಯಲು ಪ್ರಯತ್ನಿಸಿದರು; ಅವರು ನನ್ನನ್ನು ದೂರ ತಳ್ಳಿದರು ಮತ್ತು ನನಗೆ ಬೆದರಿಕೆ ಹಾಕಿದರು … ಆದರೆ ನಾವು ಅದರಿಂದ ಪ್ರಭಾವಿತರಾಗುವುದಿಲ್ಲ. ಇದು ಸಂಸತ್ತು ಮತ್ತು ಒಳಗೆ ಹೋಗಲು ನಮಗೆ ಹಕ್ಕಿದೆ” ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ ಪ್ರತಿಮೆಯಿಂದ ಸಂಸತ್ ಭವನದವರೆಗೆ ಘೋಷಣೆಗಳನ್ನು ಕೂಗುತ್ತಾ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದರು.

‘ಇತ್ತೀಚೆಗೆ ಅಂಬೇಡ್ಕರ್ ಹೆಸರು ಹೇಳುವುದು ಒಂದು ಫ್ಯಾಷನ್ ಆಗಿದೆ. ಇದರ ಬದಲು ದೇವರ ಜಪ ಮಾಡಿದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು’ ಎಂದು ಅಮಿತ್ ಶಾ ಮೊನ್ನೆ ತಮ್ಮ ಸಂಸತ್‌ ಭಾಷಣದಲ್ಲಿ ಹೇಳಿದ್ದಾರೆ ಎನ್ನುವುದು ಈಗ ವಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿದೆ.
ಬುಧವಾರ ರಾಜ್ಯಸಭೆಯಲ್ಲಿ ಅಮಿತ್ ಶಾ ಭಾಷಣದ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಉಂಟಾಗಿತ್ತು. ಪ್ರತಿಪಕ್ಷಗಳು ಪ್ರತಿಭಟನೆ ಆರಂಭಿಸುತ್ತಿದ್ದಂತೆ ಉಭಯ ಸದನಗಳನ್ನು ಮುಂದೂಡಲಾಗಿತ್ತು. ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಿರುವ ಅಮಿತ್, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ನಾನು ಮಾತನಾಡಿರುವ ಪೂರ್ತಿ ವೀಡಿಯೊ ಹಾಕದೆ ಕೆಲವು ತುಣುಕುಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement