ಅಹಮದಾಬಾದ್: ಗುಜರಾತಿನ ಪಂಚಮಹಲ್, ದಾಹೋದ್ ಮತ್ತು ಮಹಿಸಾಗರ್ ಜಿಲ್ಲೆಗಳಲ್ಲಿ ಸಂಭವಿಸಿದ 24 ಪ್ರತ್ಯೇಕ ಅಪಘಾತಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬೃಹತ್ ವಿಮಾ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಸ್ಲಂ ಮೊಹಮ್ಮದ್ ಚುಂಚಲ ಎಲ್ಲ 24 ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಚಾಲಕ ಎಂದು ಗುರುತಿಸಲಾಗಿದೆ. ಗೋಧ್ರಾ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಪೊಲೀಸರು ಚಾಲಕ ಅಸ್ಲಂ ಮೊಹಮ್ಮದ್ ಚುಂಚಲಾನನ್ನು ವಿಚಾರಣೆಗೊಳಪಡಿಸಿದ್ದರು. ಈತನ ದಾಖಲೆ ಪರಿಶೀಲನೆ ನಡೆಸಿದಾಗ ಈತ ಪಂಚಮಹಲ್, ದಾಹೋದ್ ಮತ್ತು ಮಹಿಸಾಗರ್ ಜಿಲ್ಲೆಗಳಲ್ಲಿ ನಡೆದಿದ್ದ 24 ವಿವಿಧ ವಾಹನ ಅಪಘಾತ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.
ಅಚ್ಚರಿ ಎಂದರೆ ಈ ಎಲ್ಲ ಅಪಘಾತ ಪ್ರಕರಣಗಲ್ಲಿ ವಿಮಾ ಹಣ ಸಂತ್ರಸ್ತರಿಗೆ ಸಂದಿದೆ. ಅಲ್ಲದೆ, ಸಂದಾಯವಾದ ಎಲ್ಲ ಪ್ರಕರಣಗಳಲ್ಲೂ ಈತನೇ ಚಾಲಕ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಇದು ಬೃಹತ್ ವಿಮಾ ಹಗರಣ ಎಂದು ತನಿಖೆ ವೇಳೆ ಕಂಡುಬಂದಿದೆ.
2015 ರಲ್ಲಿ ಸಲ್ಲಿಸಲಾದ ಅನುಮಾನಾಸ್ಪದ ಕ್ಲೇಮ್ ಕುರಿತು 2016 ರ ತನಿಖೆಯ ಸಂದರ್ಭದಲ್ಲಿ ಈ ವಂಚನೆಯು ಬೆಳಕಿಗೆ ಬಂದಿದೆ. ತೂಫಾನ್ ವಾಹನವನ್ನು ಒಳಗೊಂಡ ಅಪಘಾತದಲ್ಲಿ ಉಂಟಾದ ಗಾಯಗಳಿಗೆ ಪರಿಹಾರವಾಗಿ 3 ಲಕ್ಷ ರೂ. ಇನ್ಶುರೆನ್ಸ್ ನೀಡಲಾಗಿದ್ದು, ಚುಂಚಲಾನನ್ನು ಚಾಲಕ ಎಂದು ಮತ್ತು ಸಿಕಂದರ್ ಸುಲೇಮಾನ್‌ಭಾಯ್ ಸಮದ್ ಎಂಬಾತನನ್ನು ವಾಹನದ ಮಾಲೀಕ ಎಂದು ಪಟ್ಟಿ ಮಾಡಲಾಗಿದೆ. ವಿಮಾದಾರರಾದ ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್‌ಗೆ ಇದರ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲು ನಿರ್ದೇಶಿಸಲಾಗಿತ್ತು.
ಆದರೆ ಖಾಸಗಿ ಸಂಸ್ಥೆಯೊಂದು ಹೆಚ್ಚಿನ ಪರಿಶೀಲನೆ ನಡೆಸಿದಾಗ ಮೂರು ಜಿಲ್ಲೆಗಳಲ್ಲಿ ಇತರ 23 ಪ್ರತ್ಯೇಕ ಅಪಘಾತಗಳಲ್ಲಿ ಚುಂಚಲಾ ಭಾಗಿಯಾಗಿರುವುದು ಬೆಳಕಿಗೆ ಬಂತು.
ಮೂಲಗಳ ಪ್ರಕಾರ ಗೋಧ್ರಾ ಪೊಲೀಸ್ ಠಾಣೆಯಲ್ಲಿ ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯ ಏರಿಯಾ ಮ್ಯಾನೇಜರ್ ಕಲ್ಪೇಶ ಪ್ರಜಾಪತಿ ಎಂಬವರು ದೂರು ದಾಖಲಿಸಿದ್ದರು. ದೂರಿನ ಪ್ರಕಾರ, 2016 ರಲ್ಲಿ, ಗೋಧ್ರಾ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದು ಅಕ್ಟೋಬರ್ 2015 ರಲ್ಲಿ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿತ್ತು, ಅಲ್ಲಿ ಹಕ್ಕುದಾರ ಜಗದೀಶ ಬರಿಯಾ ಎಂಬವರು 3 ಲಕ್ಷ ರೂ.ಗಳ ಇನ್ಶುರೆನ್ಸ್ ಕ್ಲೈಮ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಮಾ ಕಂಪನಿಯು ಅಪಘಾತದ ವಿಷಯವನ್ನು ಪರಿಶೀಲಿಸಲು ಖಾಸಗಿ ಏಜೆನ್ಸಿಯನ್ನು ನೇಮಿಸಿಕೊಂಡಿತು ಮತ್ತು ಅಪಘಾತದಲ್ಲಿ ಚಾಲಕ ಎಂದು ಪಟ್ಟಿ ಮಾಡಲಾದ ವ್ಯಕ್ತಿ ಅಸ್ಲಂ ಚುಂಚಲಾ ಎಂದು ತಿಳಿದುಬಂತು. ಅಲ್ಲದೆ, ಇದೇ ಅಸ್ಲಂ ಚುಂಚಲಾ ಇತರ ಹಲವಾರು ಅಪಘಾತ ಪ್ರಕರಣಗಳಲ್ಲೂ ಚಾಲಕನಾಗಿದ್ದ ಎಂಬದು ಸಹ ಬೆಳಕಿಗೆ ಬಂತು.
ಆರೋಪಿ ಅಸ್ಲಂ ಚುಂಚಲಾ ಅಪಘಾತ ಪ್ರಕರಣಗಳಲ್ಲಿ ಚಾಲಕ ಎಂದು ತಪ್ಪಾಗಿ ಬಿಂಬಿಸಿಕೊಳ್ಳುವ ಮೂಲಕ ವಂಚನೆಯ ವಿಮಾ ಕ್ಲೈಮ್‌ಗಳನ್ನು ಸಲ್ಲಿಸುವಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ಸಹ ಬೆಳಕಿಗೆ ಬಂದಿದೆ. ವಿಮಾ ಕಂಪನಿಯು ಮರು ತನಿಖೆ ನಡೆಸಿದಾಗ, ಚುಂಚಲಾ ನನ್ನು ಚಾಲಕ ಅಥವಾ ವಾಹನ ಮಾಲೀಕರಾಗಿ ಪಟ್ಟಿ ಮಾಡಲಾದ ಇದೇ ರೀತಿಯ 23 ವಂಚನೆ ಪ್ರಕರಣಗಳು ಬಹಿರಂಗಗೊಂಡವು.
ಚುಂಚ್ಲಾ, ವಾಹನ ಮಾಲೀಕ ಸಿಕಂದರ್ ಸಮದ್ ಜೊತೆ ಸೇರಿ ಅಪಘಾತದ ವಿವರಗಳನ್ನು ತಪ್ಪಾಗಿ ನಿರೂಪಣೆ ಮಾಡಿ ವಿಮಾ ಹಣ ಪಡೆಯಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚುಂಚಲಾ ಈ ವಿಮಾ ಸಂಚಿನ ಯೋಜನೆಯಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿದ್ದಾರೋ ಅಥವಾ ಸಿಲುಕಿಸಲ್ಪಟ್ಟಿದ್ದಾರೋ ಎಂಬುದನ್ನು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ. ಆದಾಗ್ಯೂ, ಈ ಘಟನೆಗಳಿಗೆ ಸಂಬಂಧಿಸಿದ ವೈದ್ಯಕೀಯ ವಿಮಾ ಕ್ಲೈಮ್‌ಗಳ ಮಾದರಿಯನ್ನು ನೋಡಿದರೆ ಅದು ವಿಮಾ ಕಂಪನಿಗಳನ್ನು ವಂಚಿಸಲು ರೂಪಿಸಲಾದ ಪಿತೂರಿ ಎಂಬುದು ಗೊತ್ತಾಗುತ್ತದೆ ಎಂದು ಪೊಲೀಸರು ಹೇಳುತ್ತಾರೆ. ಇದೀಗ ಗೋಧ್ರಾ ಪೊಲೀಸ್ ಠಾಣೆಯಲ್ಲಿ ಈ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ