ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕಂಟೈನರ್ ಲಾರಿ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ದುರ್ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ ಬಿದ್ದಿತ್ತು. ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಚಲಿಸುತ್ತಿದ್ದ ಲಾರಿ ಏಕಾಏಕಿ ಕಾರಿನ ಮೇಲೆ ಬೀಳುತ್ತಿರುವ ಭೀಕರ ಸಿಸಿಟಿವಿ ದೃಶ್ಯ ಸೆರೆಯಾಗಿದೆ.ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳೇಕೆರೆ ಬಳಿ ಈ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಬೆಂಗಳೂರಿನ ಐಎಸ್‌ಡಿ ಸಾಫ್ಟವೇರ್ ಸೊಲ್ಯೂಷನ್ ಕಂಪನಿ ಮಾಲೀಕ ಚಂದ್ರಂಯಾಗಪ್ಪ ಗೋಳ(48) ಮತ್ತು ಗೌರಾಬಾಯಿ(42), ಮಕ್ಕಳಾದ ದೀಕ್ಷಾ(12), ಗ್ಯಾನ್ (16), ಆರ್ಯ(6), ವಿಜಯಲಕ್ಷ್ಮಿ(36) ಎಂಬವರು ಮೃತಪಟ್ಟಿದ್ದರು.
ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದು ಸರಣಿ ಅಪಘಾತ ಮಾಡಿ, ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದವರು ಅಪ್ಪಚ್ಚಿಯಾಗಿದ್ದರು. ಸರಣಿ ಅಪಘಾತದಲ್ಲಿ ಒಂದು ಕಾರು, ಬೈಕುಗಳು, ಬಸ್ಸು ಜಖಂಗೊಂಡಿದೆ ಎನ್ನಲಾಗಿದೆ.
ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂರು ಕ್ರೇನ್‌ಗಳ ಮೂಲಕ ಕಾರಿನ ಮೇಲಿದ್ದ ಕಂಟೈನರ್ ಅನ್ನು ತೆರವುಗೊಳಿಸಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಕ್ಕಿಕೊಂಡಿದ್ದ ಆರು ಮಂದಿಯ ಮೃತದೇಹಗಳನ್ನು ಹೊರಗೆ ತೆಗೆದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.
ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಎಂಬ ಕಂಪನಿ ಸ್ಥಾಪಿಸಿ ಸುಮಾರು 300 ಜನರಿಗೆ ಉದ್ಯೋಗ ನೀಡಿದ್ದ ಚಂದ್ರಂ ಯಾಗಪ್ಪಗೋಳ ಅವರು ಎರಡು ತಿಂಗಳ ಹಿಂದಷ್ಟೆ ಐಷಾರಾಮಿ ವೋಲ್ವೋ ಕಾರು ಖರೀದಿಸಿದ್ದರು. ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ