ಕಾಬೂಲ್ : ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯ ಮೇಲೆ ಪಾಕಿಸ್ತಾನ ಸರಣಿ ವೈಮಾನಿಕ ದಾಳಿ (Pakistani Airstrike) ನಡೆಸಿದ್ದು, ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಡಿ. 24 ರ ರಾತ್ರಿ ಪಾಕಿಸ್ತಾನ ಸೇನೆ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವನ್ನು ಸಂಪೂರ್ಣವಾಗಿ ನಾಶಪಡಿಸಿದೆ. ತಾಲಿಬಾನ್‌ನ ರಕ್ಷಣಾ ಸಚಿವಾಲಯವು ಬರ್ಮಾಲ್, ಪಕ್ಟಿಕಾ ಮೇಲಿನ ವೈಮಾನಿಕ ದಾಳಿಯ ನಂತರ ಪ್ರತೀಕಾರದ ಪ್ರತಿಜ್ಞೆ ಮಾಡಿದೆ.
ಪಾಕಿಸ್ತಾನದ ಅಧಿಕಾರಿಗಳು ವೈಮಾನಿಕ ದಾಳಿಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಸೇನೆಗೆ ನಿಕಟವಾಗಿರುವ ಭದ್ರತಾ ಮೂಲಗಳು ಗಡಿಯ ಸಮೀಪವಿರುವ ತಾಲಿಬಾನ್ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿವೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ದಾಳಿ ನಡೆದಿದೆ. ಪಾಕಿಸ್ತಾನಿ ತಾಲಿಬಾನ್, ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ), ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನಿ ಪಡೆಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿದೆ. ಅಫ್ಘಾನ್ ತಾಲಿಬಾನ್ ಪಾಕ್ ವಿರೋಧಿ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ತಾಲಿಬಾನ್ ರಕ್ಷಣಾ ಸಚಿವಾಲಯದ ವಕ್ತಾರರಾದ ಎನಾಯತುಲ್ಲಾ ಖ್ವಾರಾಜ್ಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಸೇನೆ ನಡೆಸಿದ ದಾಳಿಯಲ್ಲಿ ಹಲವು ಮಕ್ಕಳು ಮತ್ತು ಇತರ ನಾಗರಿಕರು ಸಾವಿಗೀಡಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಅಧಿಕೃತ ಸಾವುನೋವುಗಳ ಅಂಕಿಅಂಶಗಳನ್ನು ಒದಗಿಸಲಾಗಿಲ್ಲ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 15 ಮೃತದೇಹಗಳು ಪತ್ತೆಯಾಗಿವೆ ಮತ್ತು ಶೋಧ ಪ್ರಯತ್ನಗಳು ಮುಂದುವರಿದಂತೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ