ಕಣ್ಣೂರು : ಶಾಲಾ ಬಸ್ ಪಲ್ಟಿಯಾದ ಪರಿಣಾಮ 5 ನೇ ತರಗತಿ ವಿದ್ಯಾರ್ಥಿನಿ ಸಾವಿಗೀಡಾಗಿದ್ದು, 14 ಮಂದಿ ಗಾಯಗೊಂಡ ಘಟನೆ ಕೇರಳದ ಕಣ್ಣೂರಿನಲ್ಲಿ ಬುಧವಾರ ನಡೆದಿದೆ.
ಕುರುಮತ್ತೂರು ಪಂಚಾಯತದ ಚಿನ್ಮಯ ವಿದ್ಯಾಲಯದ 15 ವಿದ್ಯಾರ್ಥಿಗಳಿದ್ದ ಬಸ್ಸು ಹೆದ್ದಾರಿಗೆ ಹೋಗಲು ಇಳಿಜಾರಿನಲ್ಲಿ ಚಲಿಸುತ್ತಿದ್ದಾಗ ಶ್ರೀಕಂಠಪುರಂನ ವಳಕ್ಕೈ ಎಂಬಲ್ಲಿ ಸಂಜೆ 4 ಗಂಟೆಗೆ ಸುಮಾರಿಗೆ ನಾಲ್ಕೈದು ಸುತ್ತು ಪಲ್ಟಿಯಾಗಿದೆ. ಬಸ್ಸು ಶಾಲೆ ಮುಗಿದ ನಂತರ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಕರೆದೊಯ್ಯುತ್ತಿತ್ತು.
ಪೊಲೀಸರ ಪ್ರಕಾರ, ಚಾಲಕನ ನಿಯಂತ್ರಣ ತಪ್ಪಿದ ನಂತರ 11 ವರ್ಷದ ನೇದ್ಯ ಎಸ್. ರಾಜೇಶ ಎಂಬ ವಿದ್ಯಾರ್ಥಿನಿ ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟು ಚಕ್ರಗಳ ಅಡಿಯಲ್ಲಿ ನಜ್ಜುಗುಜ್ಜಾಗಿದ್ದಾಳೆ.
ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಗೊಂಡ 13 ವಿದ್ಯಾರ್ಥಿಗಳು ಸೇರಿದಂತೆ ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳು ಚಿಕಿತ್ಸೆಗಾಗಿ ತಳಿಪರಂಬ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಒಯ್ಯಲಾಗಿದೆ.
ಸೆಕ್ಷನ್ 281 (ಸಾರ್ವಜನಿಕ ದಾರಿಯಲ್ಲಿ ಅತಿ ಆತುರವಾಗಿ ಚಾಲನೆ ಮಾಡುವುದು ಅಥವಾ ಸವಾರಿ ಮಾಡುವುದು), 125 (ಎ) (ನಿರ್ಲಕ್ಷ್ಯ ಅಥವಾ ಅಜಾಗರೂಕತೆಯಿಂದ ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ), ಮತ್ತು 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಏತನ್ಮಧ್ಯೆ, ರಸ್ತೆಯ “ಅವೈಜ್ಞಾನಿಕ ವಿನ್ಯಾಸ” ಅಪಘಾತಕ್ಕೆ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ ಮತ್ತು ಈ ಪ್ರದೇಶದಲ್ಲಿ ಆಗಾಗ್ಗೆ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ